Advertisement
ನಿತ್ಯ ಬದುಕಿಗೆ ಆಸರೆ“ನಾಡದೋಣಿ ಮೀನುಗಾರಿಕೆಯಿಂದ ತುಂಬಾ ಲಾಭವೇನೂ ಆಗುವುದಿಲ್ಲ. ಆದರೆ ನಿತ್ಯ ಬದುಕಿಗೆ ಆಸರೆಯಾಗುತ್ತದೆ. ಹಿಂದೆ ನಾಡದೋಣಿ ಮೀನು ಗಾರಿಕೆಯೇ ಇತ್ತು. ಬೇಕಾದಷ್ಟು ಮೀನುಗಳು ದಡದ ಸಮೀಪದಲ್ಲಿಯೂ ದೊರೆಯುತ್ತಿದ್ದವು. ಅನಂತರ ಮೀನುಗಳನ್ನು ಹುಡುಕಿಕೊಂಡು ಆಳಸಮುದ್ರಕ್ಕೆ ಹೋಗಬೇಕಾಯಿತು. ಮಳೆಗಾಲದಲ್ಲಿ ಆಳ ಸಮುದ್ರಕ್ಕೆ ತೆರಳುವುದು ಅಸಾಧ್ಯವಾಗಿರುವುದರಿಂದ ನಾಡದೋಣಿ ಮೀನುಗಾರಿಕೆಯನ್ನೇ ನಂಬಿಕೊಂಡಿದ್ದೇವೆ’ ಎನ್ನುತ್ತಾರೆ ತೋಟಬೆಂಗ್ರೆಯ ಮೀನುಗಾರರಾದ ಸುಭಾಷ್ ಸಾಲ್ಯಾನ್ ಮತ್ತು ಸುರೇಶ್ ಬೆಂಗ್ರೆ ಅವರು.
ಮಳೆಗಾಲ ಆರಂಭವಾಗುವ ಸಮಯದಲ್ಲಿ ಬೀಸುಬಲೆ ಮೀನುಗಾರಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಈಗಲೂ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಅನೇಕ ಮಂದಿ ಬೀಸುಬಲೆ ಮೀನುಗಾರಿಕೆ ನಡೆಸುತ್ತಾರೆ. ನಾಡದೋಣಿಯಲ್ಲಿ ತೆರಳಿ ಬೀಸುಬಲೆಯಲ್ಲಿ ಮೀನು ಹಿಡಿಯುವವರಲ್ಲದೆ ದಡದಲ್ಲಿದ್ದುಕೊಂಡೇ ಬೀಸುಬಲೆಯಲ್ಲಿ ಮೀನು ಹಿಡಿಯುವವರು ತುಂಬ ಮಂದಿ ಇದ್ದಾರೆ. ಯಾಂತ್ರೀಕೃತ ಮೀನುಗಾರಿಕೆ ನಿಷೇಧ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೇರೆ ಉದ್ಯೋಗಗಳ ಕೊರತೆ ಇರುವುದರಿಂದಲೂ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ತೋಟಬೆಂಗ್ರೆ ಅಳಿವೆಬಾಗಿಲು ಪ್ರದೇಶದಲ್ಲಿ ಬೀಸುಬಲೆಯಲ್ಲಿ ಮೀನು ಹಿಡಿದು ದಿನದ ಖರ್ಚಿನ ಸಂಪಾದನೆ ಮಾಡುತ್ತಿರುವುದು ಕಂಡುಬಂದಿದೆ. ಪೈಯ್ಯ, ಏರಿ, ನಂಗ್, ಬಂಗುಡೆ, ಕೊಡ್ಡೆಯಿ ಮೀನುಗಳು ದೊರೆಯುತ್ತಿವೆ. ಕಾನೆ ಮೀನು ಕೂಡ ಸ್ವಲ್ಪ ಪ್ರಮಾಣದಲ್ಲಿ ಸಿಗುತ್ತಿದೆ. ನಿತ್ಯ 4,500- 5,000 ಕೆ.ಜಿ. ಮತ್ಸ್ಯ ಬೇಟೆ
ಮಂಗಳೂರಿನಲ್ಲಿ 540 ಪಾತಿ ದೋಣಿಗಳು ಸೇರಿದಂತೆ ಒಟ್ಟು 2,040 ನಾಡದೋಣಿಗಳು ಮೀನುಗಾರಿಕೆ ನಡೆಸುತ್ತವೆ. ದಿನವೊಂದಕ್ಕೆ ಸರಾಸರಿ 4,500ರಿಂದ 5,000 ಕೆಜಿಯಷ್ಟು ಮೀನು ದೊರೆಯುತ್ತಿದೆ. ಜೂನ್ ಮೊದಲ ವಾರದಲ್ಲಿ ಕಡಲು ಪ್ರಕ್ಷುಬ್ಧ ಇದ್ದುದರಿಂದ ನಾಡದೋಣಿಗಳು ಮೀನುಗಾರಿಕೆ ನಡೆಸಿರಲಿಲ್ಲ. ಇದೀಗ ಮೀನುಗಾರಿಕೆ ನಡೆಯುತ್ತಿದೆ. 10 ಎಚ್‌ಪಿಗಿಂತ ಹೆಚ್ಚು ಸಾಮರ್ಥ್ಯದ ಮೋಟಾರೀಕೃತ ಬೋಟ್‌ಗಳಿಗೆ ಅವಕಾಶವಿಲ್ಲ. ಸದ್ಯ ಮಂಗಳೂರು ಮೀನು ಮಾರುಕಟ್ಟೆಗೆ ನಾಡದೋಣಿಯಲ್ಲಿ ಸಿಗುವ ಮೀನುಗಳು ಮಾತ್ರವಲ್ಲದೆ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಮೀನುಗಳು ಬರುತ್ತಿವೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Related Articles
ನಾಡದೋಣಿ ಮೀನುಗಾರಿಕೆ ನಡೆಸುವವರಿಗೂ ಈ ಹಿಂದಿನ ವರ್ಷಗಳಂತೆ ಮೀನುಗಳು ಲಭ್ಯ ವಾಗುತ್ತಿಲ್ಲ. ಕೆಲವೊಮ್ಮೆ ಉತ್ತಮ ಪ್ರಮಾಣದ ಮೀನು, ಬೆಲೆ ಸಿಗುತ್ತದೆ. ಇನ್ನು ಕೆಲವೊಮ್ಮೆ ನಿರೀಕ್ಷಿದಷ್ಟು ಮೀನು ಸಿಗುವುದಿಲ್ಲ, ಮೀನು ಸಿಕ್ಕಿದರೆ ಬೆಲೆಯೂ ಸಿಗುವುದಿಲ್ಲ. ನಾಡ ದೋಣಿಗೆ ಉತ್ತಮ ಪ್ರಮಾಣದಲ್ಲಿ ಮೀನು ದೊರೆತರೆ ಮೀನುಗಾರರ ಸಂಕಷ್ಟ ದೂರವಾಗುತ್ತದೆ.
– ಸುಭಾಶ್ ಸಾಲ್ಯಾನ್, ನಾಡದೋಣಿ ಮಾಲಕರು,
Advertisement