ರಾಜ್ಯದ ಕೃಷಿ ಮತ್ತು ಕೃಷಿ ಪೂರಕ ವಿಶ್ವವಿದ್ಯಾನಿಲಯದ ಪದವಿ ಹಾಗೂ ಕೃಷಿ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶದಲ್ಲಿ ಕೃಷಿಕರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ. 50ರಷ್ಟು ಸೀಟುಗಳು ಮೀಸಲಿವೆ. ಈ ಸೌಲಭ್ಯ ಪಡೆಯಲು ಆರ್‌ಡಿ ನಂಬ್ರ ಹೊಂದಿರುವ ಕೃಷಿ ಮತ್ತು ಕೃಷಿ ಸಂಬಂಧಿತ ಕೂಲಿ ಕಾರ್ಮಿಕರ ಪ್ರಮಾಣಪತ್ರ ಸಲ್ಲಿಸಬೇಕು.
ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾ ಲಯದಲ್ಲಿ ಲಭ್ಯವಿರುವ ಸೀಟುಗಳು 50. ಅದ ರಲ್ಲಿ ಶೇ. 50ರಷ್ಟು ಕೃಷಿಕ ರಿಗೆ ಮೀಸಲು. ಈ ಸೀಟು ಪಡೆಯಲು ಕೃಷಿಕರೆನ್ನುವುದಕ್ಕೆ ಪೂರಕವಾಗಿ ಆರ್‌ಡಿ ಸಂಖ್ಯೆ ಇರುವ ಪ್ರಮಾಣ ಪತ್ರ ಸಲ್ಲಿಸಬೇಕು. ಆದರೆ ಮೀನುಗಾರರ ಮಕ್ಕಳಿಗೆ ಜಮೀನಿನ ದಾಖಲೆ ಹಾಜರುಪಡಿಸಲು, ಪ್ರಮಾಣ ಪತ್ರ ಪಡೆಯಲು ಆಗುತ್ತಿಲ್ಲ.
Advertisement
ಆರ್‌ಡಿ ನಂಬರ್ ಕೇವಲ ಕೃಷಿ ಜಮೀನು ಇರುವವರಿಗೆ ಮಾತ್ರವೇ ನೀಡಲಾಗುತ್ತದೆ. ಮೀನುಗಾರರ ಮಕ್ಕಳು ಅದರ ಬದಲು ತಹಶೀಲ್ದಾರ ರಿಂದ ಜಾತಿ ಪ್ರಮಾಣ ಪತ್ರ ಪಡೆದು ಸಲ್ಲಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ. ಆದರೆ ಆ ಪ್ರಮಾಣಪತ್ರವನ್ನು ಮೀನು ಗಾರಿಕೆ ಕೋರ್ಸ್‌ಗೆ ಪ್ರವೇಶಾತಿ ಕಲ್ಪಿಸುವ ಸಂದರ್ಭ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ದವರು ಪರಿಗಣಿಸುವುದಿಲ್ಲ. ಯಾಕೆಂದರೆ ಕಡ್ಡಾಯವಾಗಿ ಆರ್‌ಡಿ ಸಂಖ್ಯೆ ಅಲ್ಲಿ ನಮೂದಿಸಬೇಕು ಎನ್ನುತ್ತಾರೆ ಮೀನು ಗಾರಿಕೆ ಕಾಲೇಜು ಅಧಿಕಾರಿಗಳು.
Related Articles
ಇತ್ತೀಚೆಗೆ ಈ ಬಗ್ಗೆ ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿ.ವಿ. ಕುಲಸಚಿವರು ರಾಜ್ಯ ಸರಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.
Advertisement
ಕರಾವಳಿಯಲ್ಲಿ ಮೀನುಗಾರರು ಮೀನುಗಾರಿಕೆ ಕೃಷಿ ಅವಲಂಬಿತರಾ ಗಿದ್ದು, ಅವರು ಜಮೀನು ಹೊಂದಿಲ್ಲ. ಕಂದಾಯ ಇಲಾಖೆಯಿಂದ ಮೀನು ಕೃಷಿಕರ ಪ್ರಮಾಣ ಪತ್ರ ಆರ್‌ಡಿ ಸಂಖ್ಯೆಯೊಂದಿಗೆ ಬರುತ್ತಿಲ್ಲ. ಹಾಗಾಗಿ ಮೀನುಗಾರರಿಗೆ ಮೀನು ಕೃಷಿಕರ/ಮೀನುಗಾರ ವ್ಯವಸಾಯ ಪ್ರಮಾಣ ಪತ್ರ ಅಥವಾ ತಹಶೀಲ್ದಾರರು ನೀಡುವ ಪ್ರಮಾಣಪತ್ರ ಪರಿಗಣಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ/ಸಂಬಂಧಿಸಿದ ಇಲಾಖೆಗೆ ಸೂಚಿಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ. ಟ್ರಾಲ್ ಬೋಟ್ ಮೀನುಗಾರರ ಸಂಘದ ನಿರಂತರ ಪ್ರಯತ್ನದಿಂದ ದ.ಕ. ಜಿಲ್ಲಾಧಿಕಾರಿಗಳು, ಮೀನುಗಾರಿಕೆ ವಿದ್ಯಾಲ ಯದ ಡೀನ್ ಅವರು ವಿಶ್ವವಿದ್ಯಾನಿಲಯಕ್ಕೆ ಸಮಸ್ಯೆಯ ಬಗ್ಗೆ ವಿವರಿಸಿದ್ದಾರೆ. ಸರಕಾರವೀಗ ಸ್ಪಂದಿಸಬೇಕಿದೆ.
2023-24ರಲ್ಲಿ ಮೀನುಗಾರಿಕೆ ಕಾಲೇಜಿಗೆ ಪ್ರವೇಶಾತಿಗಾಗಿ ಆರ್‌ಡಿ ನಂಬ್ರ ಇರುವ ಪ್ರಮಾಣ ಪತ್ರದ ಬದಲು ತಹಶೀಲ್ದಾರ್ ನೀಡುವ ಜಾತಿ ಪ್ರಮಾಣಪತ್ರ ಪರಿಗಣಿಸು ವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಮೂಲಕವೇ ಜೂ. 1ರಂದು ಟಿಪ್ಪಣಿ ಹೊರಡಿಸಲಾಗಿತ್ತು. ಆದರೆ ತಹಶೀಲ್ದಾರ್‌ಗಳ ಪತ್ರ ನೀಡಿದ್ದರೂ ಸಾಫ್ಟ್‌ವೇರ್‌ನಲ್ಲಿ ಆರ್‌ಡಿ ನಂಬರ್ ಇಲ್ಲದ್ದಕ್ಕೆ ಕೆಇಎನಲ್ಲಿ ಅರ್ಜಿ ಪುರಸ್ಕರಿಸಿಲ್ಲ. ಈ ಬಾರಿ ಒಟ್ಟು ಸಲ್ಲಿಸಲಾಗಿದ್ದ 147 ಅರ್ಜಿಗಳಲ್ಲಿ 17 ಕೃಷಿ ಪ್ರಮಾಣಪತ್ರವಿಲ್ಲದೆ ತಿರಸ್ಕೃತಗೊಂಡಿವೆ.
ಈ ಭಾಗದಿಂದ ತುಂಬಾ ಮೀನುಗಾರರ ಮಕ್ಕಳು ಮೀನುಗಾರಿಕೆ ಕೋರ್ಸ್ ಕಲಿಯಲು ಆಸಕ್ತರಿದ್ದಾರೆ. ಈ ತಾಂತ್ರಿಕ ಸಮಸ್ಯೆಯ ವಿಷಯವನ್ನು ನಮ್ಮ ವಿದ್ಯಾಲಯದ ಮೂಲಕ ಸರಕಾರದ ಗಮನಕ್ಕೆ ತಂದಿದ್ದೇವೆ.ಡಾ| ಎಚ್.ಎನ್. ಅಂಜನಪ್ಪ, ಡೀನ್, ಮೀನುಗಾರಿಕೆ ವಿದ್ಯಾಲಯ ಮಂಗಳೂರು ಕಂದಾಯ ಮತ್ತು ಮೀನುಗಾರಿಕೆ ವಿಭಾಗದಿಂದ ಈ ಕುರಿತು ಯಾವ ರೀತಿ ಸಮಸ್ಯೆ ಬಗೆಹರಿಸಬೇಕು ಎನ್ನುವ ಒಂದು ಕರಡನ್ನು ಸರಕಾರಕ್ಕೆ ಕಳುಹಿಸುತ್ತೇವೆ, ಅಂತಿಮ ತೀರ್ಮಾನ ಸರಕಾರದ ಮಟ್ಟದಲ್ಲಿ ಆಗಬೇಕಿದೆ.
ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ - ಉದಯವಾಣಿ ವಿಶೇಷ