Advertisement

ನಾಡದೋಣಿ ಮೀನುಗಾರಿಕೆ: 21 ದಿನಗಳಲ್ಲಿ 2,66,476 ಕೆ.ಜಿ. ಮೀನು ಲಭ್ಯ

11:06 PM May 03, 2020 | Sriram |

ಕುಂದಾಪುರ/ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಎ. 13ರಿಂದ ಅವಕಾಶ ಕಲ್ಪಿಸಲಾಗಿದ್ದು, ಮೇ 3ರವರೆಗೆ ಅಂದರೆ ಕಳೆದ 21 ದಿನಗಳಲ್ಲಿ ಸಿಕ್ಕ ಒಟ್ಟು ಮೀನಿನ ಪ್ರಮಾಣ 2,66,476 ಕೆ.ಜಿ.. ಪ್ರಸ್ತುತ ಮೀನು ಲಭ್ಯತೆ ಕಡಿಮೆಯಾಗಿ, ಬೇಡಿಕೆ ಹೆಚ್ಚಿರುವುದರಿಂದ ಸಿಕ್ಕ ಮೀನುಗಳೆಲ್ಲವೂ ಅದೇ ದಿನ ಮಾರಾಟವಾಗುತ್ತಿವೆ.

Advertisement

ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಕಾಪು ಲೈಟ್‌ಹೌಸ್‌, ಮಟ್ಟು, ಮಲ್ಪೆ ಪಡುಕರೆ, ಕುಂದಾಪುರದ ಕೋಡಿ, ಮಡಿಕಲ್‌, ಕೊಡೇರಿ, ನಾವುಂದ, ದೊಂಬೆ, ಮರವಂತೆ, ಕಂಚುಗೋಡು, ಗಂಗೊಳ್ಳಿ ಲೈಟ್‌ಹೌಸ್‌, ಅಳ್ವೆಗದ್ದೆ ಸೇರಿದಂತೆ ಜಿಲ್ಲೆಯ 19 ಕಡೆಗಳಲ್ಲಿ ಮೀನು ಹರಾಜಿಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಭಾರೀ ಬೇಡಿಕೆ
ದೋಣಿಗಳಿಗೆ ಬಂಗುಡೆ, ಕಲ್ಲರ್‌, ಸಿಗಡಿ, ಸಿಲ್ವರ್‌ ಫಿಶ್‌ ಅಲ್ಪಸ್ವಲ್ಪ ಸಿಕ್ಕರೆ, ಹೆಚ್ಚಿನ ಪ್ರಮಾಣದಲ್ಲಿ ಅಂಬರ್ಕಿ, ಮಣುಗು ಕುರ್ಚಿಯಂತಹ ಮೀನುಗಳು ಸಿಗುತ್ತಿವೆ. ಮತ್ಸ್ಯಕ್ಷಾಮದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಈಗ ಮೀನುಗಳು ದೊರೆಯುತ್ತಿಲ್ಲ. ಆದರೆ ಮೀನಿಗೆ ಬೇಡಿಕೆ ಹೆಚ್ಚಿರುವುದರಿಂದ ದರ ಕೂಡ ದುಪ್ಪಟ್ಟು ಆಗಿದೆ ಎನ್ನುತ್ತಾರೆ ಕಂಚುಗೋಡಿನ ನಾಡದೋಣಿ ಮೀನುಗಾರರು.

ಮೇ 3: ಗರಿಷ್ಠ ಮೀನು
ಮೀನುಗಾರಿಕಾ ಇಲಾಖೆಯ ಅಂಕಿ – ಅಂಶಗಳ ಪ್ರಕಾರ ಈ 21 ದಿನಗಳ ಪೈಕಿ ಮೇ 3ರಂದು ಗರಿಷ್ಠ ಸುಮಾರು 16,635 ಕೆ.ಜಿ. ಯಷ್ಟು ಮೀನು ಸಿಕ್ಕಿದೆ. ಎ. 20 ರಂದು 15,950 ಕೆ.ಜಿ. ಮೀನು, ಎ. 30 ರಂದು 15,350 ಕೆ.ಜಿ., ಮೇ 1 ರಂದು 15,380 ಕೆ.ಜಿ. ಹಾಗೂ ಮೇ 2 ರಂದು 15,250 ಕೆ.ಜಿ. ಮೀನು ಸಿಕ್ಕಿದೆ. ಕಳೆದ 4-5 ದಿನಗಳಿಂದ 15 ಸಾವಿರ ಕೆ.ಜಿ.ಗಿಂತ ಅಧಿಕ ಪ್ರಮಾಣದ ಮೀನುಗಳು ಸಂಗ್ರಹವಾಗುತ್ತಿವೆ.
ಕುಂದಾಪುರದಲ್ಲಿ ಕೋಡಿಯಿಂದ ಆರಂಭಗೊಂಡು, ಶಿರೂರುವರೆಗಿನ ವಿವಿಧೆಡೆಗಳಲ್ಲಿ ಮೀನು ಇಳಿಸಲು ವ್ಯವಸ್ಥೆ ಮಾಡಲಾಗಿದೆ. ಆರಂಭದಲ್ಲಿ ಸ್ವಲ್ಪ ಸಮಸ್ಯೆ ಯಾಗಿದ್ದರೂ, ಈಗ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮೀನು ಹರಾಜು, ಮಾರಾಟ, ಪ್ರಕ್ರಿಯೆ ನಡೆ ಯುತ್ತಿದೆ. ಹೊರ ರಾಜ್ಯಗಳಿಂದ ಮೀನು ಬರುತ್ತಿದ್ದರೂ, ಇಲ್ಲಿ ಸಿಗುವ ತಾಜಾ ಮೀನುಗಳಿಗೆ ಭಾರೀ ಬೇಡಿಕೆಯಿದೆ ಎನ್ನುತ್ತಾರೆ ಕುಂದಾಪುರ ತಾ| ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್‌.

ಕುಂದಾಪುರದಲ್ಲಿ ಗರಿಷ್ಠ
ಪ್ರಸ್ತುತ ಕುಂದಾಪುರ ಹಾಗೂ ಉಡುಪಿ ಎರಡೂ ತಾಲೂಕುಗಳಲ್ಲಿ ಪ್ರತಿ ದಿನ 900ಕ್ಕೂ ಅಧಿಕ ನಾಡದೋಣಿಗಳು ಮೀನುಗಾರಿಕೆ ನಡೆಸುತ್ತಿವೆ. ಇದರಲ್ಲಿ ಕುಂದಾಪುರದಿಂದ ಗರಿಷ್ಠ 700ಕ್ಕೂ ಅಧಿಕ ಹಾಗೂ ಉಡುಪಿಯಿಂದ ಕೇವಲ 200 ದೋಣಿಗಳು ಮಾತ್ರ ಕಡಲಿಗಿಳಿಯುತ್ತಿವೆ. ಉಡುಪಿ ಜಿಲ್ಲೆಯಲ್ಲಿ ಕಳೆದ 21 ದಿನಗಳಲ್ಲಿ ಒಟ್ಟು 2,66,476 ಕೆ.ಜಿ. (266.47 ಟನ್‌)ಯಷ್ಟು ಮೀನು ಸಿಕ್ಕಿದೆ. ಇದರಲ್ಲಿ ಹೊರ ರಾಜ್ಯಗಳಾದ ಗೋವಾ, ಗುಜರಾತ್‌, ಮಹಾರಾಷ್ಟ್ರದಿಂದಲೂ ಬರುವ ಮೀನುಗಳು ಕೂಡ ಸೇರಿವೆ. ಅಂದರೆ ದಿನಕ್ಕೆ ಸರಾಸರಿ 12,689.33 ಕೆ.ಜಿ. ಸಿಗುತ್ತಿದೆ.

Advertisement

ಬೇಗ ಖಾಲಿ
ಸಂಗ್ರಹವಾದ ಮೀನು ಬೇಗ ಖಾಲಿಯಾಗುತ್ತಿದೆ. ಹೊರ ರಾಜ್ಯಗಳಿಂದಲೂ ಮೀನುಗಳು ಜಿಲ್ಲೆಗೆ ಬರುತ್ತಿವೆ. ಅವುಗಳು ಫಿಶ್‌ ಫ್ಯಾಕ್ಟರಿ ಹಾಗೂ ಮಾರುಕಟ್ಟೆಗಳಲ್ಲಿಯೂ ಮಾರಾಟವಾಗುತ್ತಿವೆ.
-ಗಣೇಶ್‌,
ಉಪನಿರ್ದೇಶಕರು,
ಮೀನುಗಾರಿಕೆ ಇಲಾಖೆ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next