Advertisement

ನಿರಾಸೆಯಲ್ಲೇ ಮುಕ್ತಾಯವಾದ ಮೀನುಗಾರಿಕಾ ಋತು

02:35 AM Jun 01, 2018 | Team Udayavani |

ಗಂಗೊಳ್ಳಿ: ಮೀನುಗಾರಿಕಾ ಋತು ಮೇ 31 (ಗುರುವಾರ) ಅಂತ್ಯವಾಗಿದ್ದು, ಜೂ. 1ರಿಂದ ಅಧಿಕೃತವಾಗಿ ಈ ಮೀನುಗಾರಿಕಾ ಋತು ಸ್ಥಗಿತಗೊಳ್ಳಲಿದೆ. ಉಡುಪಿ ಜಿಲ್ಲೆಯಲ್ಲಿ ಹಿಂದಿನೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಸಿಕ್ಕಿರುವ ಮೀನಿನ ಪ್ರಮಾಣ ಹಾಗೂ ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಈ ಮೀನುಗಾರಿಕಾ ಋತು ಮೀನುಗಾರರಿಗೆ ಫಲಪ್ರದವಾಗಿರಲಿಲ್ಲ. 

Advertisement

ಮೀನುಗಾರಿಕಾ ಋತು ಅಂತ್ಯ
ಮತ್ಸ್ಯಕ್ಷಾಮದಿಂದ ಕಳೆದ ಫೆಬ್ರವರಿಯಿಂದಲೇ ಗಂಗೊಳ್ಳಿಯಲ್ಲಿ ದೊಡ್ಡ ಮಟ್ಟದ ಮೀನುಗಾರಿಕೆ ಅಂತ್ಯವಾಗಿದ್ದು, ಕಳೆದ ಒಂದು ವಾರದಿಂದ ಚಂಡಮಾರುತ ಕಾರಣದಿಂದಾಗಿಯೂ ಮೀನುಗಾರಿಕೆ ನಡೆದಿಲ್ಲ. ಗಂಗೊಳ್ಳಿಯ ಬಂದರಿನಲ್ಲಿ ಈಗ ಬೋಟುಗಳನ್ನು ಸಮುದ್ರದಿಂದ ದಡದತ್ತ ಎಳೆದು ತರಲಾಗುತ್ತಿದೆ. ಅಲ್ಲದೇ ಅದಕ್ಕೆ ಮಳೆ ನೀರು ಬೀಳದಂತೆ ಮತ್ತೆ ತಟ್ಟಿಯನ್ನು ಕಟ್ಟುವ ಕಾರ್ಯ ಕೂಡ ಭರದಿಂದ ಸಾಗಿದೆ.


ಆದಾಯ ಹೆಚ್ಚಿದ್ದರೂ, ಲಾಭ ಯಾಕಿಲ್ಲ?

ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿ ಮೀನುಗಾರಿಕೆಯಿಂದ ಒಟ್ಟಾರೆ 1,577 ಕೋ.ರೂ., ಈ ಬಾರಿ 1,580 ಕೋ.ರೂ. ಆದಾಯ ಬಂದಿದ್ದು, ಈ ಸಲ 3 ಕೋ.ರೂ. ಹೆಚ್ಚಳವಾಗಿದೆ. 2016 ಕ್ಕಿಂತ 125 ಕೋ.ರೂ. ಹೆಚ್ಚಳವಾಗಿದ್ದರೂ, ಕಳೆದ ವರ್ಷ 100 ಬೋಟುಗಳು, ಅದಕ್ಕಿಂತ ಹಿಂದಿನ ವರ್ಷ 300 ಬೋಟುಗಳು ಹೆಚ್ಚಳವಾಗಿದೆ. ಒಂದು ಬೋಟಿಗೆ 1 ಕೋ.ರೂ. ಗಿಂತ ಹೆಚ್ಚಿನ ಆದಾಯ ಸಿಕ್ಕರೆ ಮಾತ್ರ ಲಾಭ ತರಬಹುದು. ಅದಲ್ಲದೆ ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಡೀಸೆಲ್‌ ಬೆಲೆಯೂ ಏರಿಕೆಯಾಗಿದೆ. ಇದೆಲ್ಲ ನೋಡಿದರೆ ಒಟ್ಟಾರೆ ಮೀನಿನ ಪ್ರಮಾಣ, ಹಣದಲ್ಲಿ ಹೆಚ್ಚಳವಾದರೂ, ಒಂದೊಂದು ಬೋಟಿನ ಲೆಕ್ಕ ಹಾಕಿ ನೋಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚಿರುತ್ತದೆ.


ಮೀನಿನ ಪ್ರಮಾಣ ಕುಸಿತ : ಕಾರಣಗಳು ಹಲವು

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕರಾವಳೆಯೆಲ್ಲೆಡೆ ಮೀನಿನ ಬರ ಆವರಿಸಿದ್ದು, ಈ ಮೀನುಗಾರಿಕಾ ಋತು ಮೀನುಗಾರರಿಗೆ ಅಷ್ಟೇನೂ ಶುಭದಾಯಕವಾಗಿರಲಿಲ್ಲ. ಅದರಲ್ಲೂ ಓಖೀ, ಇನ್ನಿತರ ಚಂಡಮಾರುತ ಭೀತಿಯಂದ ಕೆಲ ಸಮಯ ಮೀನುಗಾರಿಕೆ ಸ್ಥಗಿತ, ಲೈಟ್‌ ಫಿಶಿಂಗ್‌ ಮೀನುಗಾರಿಕೆ ಗೊಂದಲ, ಅದರಲ್ಲೂ ಪ್ರಮುಖವಾಗಿ ಗಂಗೊಳ್ಳಿ ಬಂದರಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಫೆಬ್ರವರಿ ಮೊದಲ ವಾರದಿಂದಲೇ ಭಾಗಶಃ ಮೀನುಗಾರಿಕೆ ಮುಗಿದಿತ್ತು. ನಾಡದೋಣಿ ಮೀನುಗಾರರಿಗೆ ಸೀಮೆ ಎಣ್ಣೆ ಕೊರತೆಯಿಂದ ಸ್ವಲ್ಪಕಾಲ ಮೀನುಗಾರಿಕೆಗೆ ತೊಂದರೆಯಾಗಿತ್ತು.

ನಿರೀಕ್ಷೆಯೆಲ್ಲ ಸುಳ್ಳಾಯಿತು
ಬೋಟುಗಳು, ದೋಣಿಗಳು ಸೇರಿದಂತೆ ಸಣ್ಣ ದೋಣಿಯವರಿಗೂ ಈ ಬಾರಿ ಮೀನುಗಾರಿಕೆ ಲಾಭ ತಂದಿಲ್ಲ. ಬೋಟು ಮಾಲಕರಿಗೆ ಕೈಯಿಂದಲೇ ಹಣ ಹಾಕುವ ಪರಿಸ್ಥಿತಿಯೂ ಬಂದಿತ್ತು. ಪ್ರತಿ ವರ್ಷ ಒಳ್ಳೆಯ ಆದಾಯವಿರುತ್ತಿತ್ತು. ಈ ಬಾರಿ ನಮ್ಮ ನಿರೀಕ್ಷೆಯೆಲ್ಲ ಸುಳ್ಳಾಯಿತು.
– ಮೋಹನ ಖಾರ್ವಿ, ಗಂಗೊಳ್ಳಿ ಹಸಿ ಮೀನು ಮಾರಾಟಗಾರರ ಸಂಘ

Advertisement

ಲಾಭದಾಯಕವಾಗಿರಲಿಲ್ಲ
ಈ ಮೀನುಗಾರಿಕಾ ಋತು ಉಡುಪಿ ಜಿಲ್ಲೆಯ ಶೇ. 50 ರಿಂದ 60 ರಷ್ಟು ಬೋಟುಗಳಿಗೆ ಲಾಭದಾಯಕವಾಗಿರಲಿಲ್ಲ. ಅಂದರೆ ಈ ಬಾರಿ ಡೀಸೆಲ್‌ ದರ ಕೂಡ ಹೆಚ್ಚಳವಾಗಿದ್ದು, ಕಳೆದ 2 ವರ್ಷಗಳಲ್ಲಿ 200 ರಿಂದ 300 ಬೋಟುಗಳು ಹೆಚ್ಚಳವಾಗಿದೆ. ಒಟ್ಟಾರೆ ಹೋಲಿಸಿದರೆ ಮೀನಿನ ಕೊರತೆಯಾಗಿದೆ.
– ಪಾರ್ಶ್ವನಾಥ, ಜಿಲ್ಲಾ ಉಪ ನಿರ್ದೇಶಕರು ಮೀನುಗಾರಿಕಾ ಇಲಾಖೆ

— ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next