ಕಾಸರಗೋಡು: ಟ್ರಾಲಿಂಗ್ ನಿಷೇಧದ ಹಿನ್ನೆಲೆಯಲ್ಲಿ ಜೂ.14 ರ ಮಧ್ಯ ರಾತ್ರಿಯಿಂದ ಸಮುದ್ರದಲ್ಲಿ ಮೀನುಗಾರಿಕೆ ನಡೆಸದೆ ಕರಾವಳಿ ತೀರದಲ್ಲಿ ತಂದು ನಿಲ್ಲಿಸಿದ ದೋಣಿಗಳು ಮುಂದಿನ ಮೀನುಗಾರಿಕಾ ಸೀಸನ್‌ಗಳಿಗೆ ಸಿದ್ಧಗೊಳ್ಳುತ್ತಿದೆ. ಕಾಸರ ಗೋಡು ಸಹಿತ ವಿವಿಧೆೆಡೆಗಳಲ್ಲಿ ಬೆಸ್ತರು ಮೀನುಗಾರಿಕಾ ಬಲೆಗಳನ್ನು ಹೆಣೆವ ಮತ್ತು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.
ಮೀನುಗಾರಿಕೆ ಸಾಧ್ಯವಿಲ್ಲದ ಕಾರಣ ದಿಂದ ಬಲೆ ನೇಯುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಮುಂದಿನ ಮೀನುಗಾರಿಕಾ ಸೀಸನ್ ನಿರೀಕ್ಷೆಯೊಂದಿಗೆ.
ಮೀನಿನ ಸಂಪತ್ತು ರಕ್ಷಿಸುವ ಹಿನ್ನೆಲೆ ಯಲ್ಲಿ ಕೇರಳ ಸರಕಾರ ಒಂದೂವರೆ ತಿಂಗಳ ಕಾಲ ಸಮುದ್ರದಲ್ಲಿ ಮೀನುಗಾರಿಕೆ ನಡೆಸದಿರಲು ಟ್ರಾಲಿಂಗ್ ನಿಷೇಧಿಸಿದೆ. ಇದರ ಪರಿಣಾಮವಾಗಿ ಮೀನುಗಾರಿಕೆ ದೋಣಿ (ಯಾಂತ್ರೀಕೃತ ದೋಣಿ)ಗಳು ದಡದಲ್ಲಿ ಲಂಗರು ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ದಿನಗಳಲ್ಲಿ ದುಡಿಮೆಯಿಲ್ಲದೆ ಜೀವನ ಸಾಗಿಸುವ ಸವಾಲು ಬೆಸ್ತರನ್ನು ಕಾಡುತ್ತಿದೆ. ಜೀವ ಪಣವಿಟ್ಟು ಅಥವಾ ಜೀವದ ಹಂಗು ತೊರೆದು ಸಾಹಸದಿಂದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಜೀವನ ಸಾಗಿಸುತ್ತಿದ್ದ ಬೆಸ್ತರಿಗೆ ಇದೀಗ ಕೆಲಸವಿಲ್ಲದ ದಿನಗಳು. ಜೂ.14 ಮಧ್ಯರಾತ್ರಿಯಿಂದ ಜುಲೈ 31 ರ ವರೆಗೆ ಅಂದರೆ 47 ದಿನಗಳ ಕಾಲ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಕೇರಳ ಸರಕಾರ ನಿಷೇಧ ಹೇರಿದ್ದು, ಈ ಸಂದರ್ಭದಲ್ಲಿ ದುಡಿಮೆಯಿಲ್ಲದೆ ಜೀವನ ಸಾಗಿಸುವುದು ಸವಾಲಿನದ್ದಾಗಿದೆ.
ಸಮುದ್ರದಲ್ಲಿ ಮೀನಿನ ಸಂತಾನೋತ್ಪತ್ತಿ ಋತು ಆರಂಭಗೊಂಡ ಹಿನ್ನೆಲೆಯಲ್ಲಿ ಮತ್ಸÂ ಸಂರಕ್ಷಿಸುವ ಹಿನ್ನೆಲೆಯಲ್ಲಿ ಕೆ.ಎಂ.ಎಫ್.ಆರ್. ಕಾಯ್ದೆಯಂತೆ ಕೇರಳದ ಆಳ ಸಮುದ್ರದಲ್ಲಿ ಜುಲೈ 31 ರ ವರೆಗೆ ಮೀನುಗಾರಿಕೆ ನಿಷೇಧ ಹೇರಿದ್ದು, ಪರಂಪರಾಗತ ಮೀನುಗಾರಿಕೆಗೆ ಯಾವುದೇ ನಿಯಂತ್ರಣವಿಲ್ಲದೆ ಮೀನು ಗಾರಿಕೆ ನಡೆಸಬಹುದಾಗಿದೆ. ಈ ಕಾರಣದಿಂದ ಪರಂಪರಾಗತ ಮೀನು ಗಾರಿಕೆ ನಡೆಸುವ ಬೆಸ್ತರು ಸ್ವಲ್ಪಮಟ್ಟಿಗೆ ಉಸಿರಾಡುವಂತಾಗಿದೆ.
ಟ್ರಾಲಿಂಗ್ ನಿಷೇಧ ಕೊನೆಗೊಳ್ಳುವ ಜುಲೈ 31 ರ ವರೆಗೆ ಕಾಯುತ್ತಿರುವ ಬೆಸ್ತರು ಈ ಕಾಲಾವಧಿಯಲ್ಲಿ ಬಲೆಯನ್ನು ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ದಡದಲ್ಲಿ ಲಂಗರು ಹಾಕಿರುವ ದೋಣಿಗಳ ದುರಸ್ತಿಯ ಜೊತೆಯಲ್ಲಿ ಬಲೆಯನ್ನು ನೇಯುವ ಕೆಲಸ ದಡದಲ್ಲಿ ನಡೆಯುತ್ತಿದೆ. ಇದೀಗ ಹೊಳೆಗಳಲ್ಲಿ ಸಣ್ಣ ದೋಣಿಗಳನ್ನು ಬಳಸಿ ಹೊಳೆಗಳಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ. ದೋಣಿ, ಬಲೆ ಮೊದಲಾದವುಗಳ ದುರಸ್ತಿಯ ಜೊತೆಯಲ್ಲಿ ಬೋಟ್‌ಗೆ ಅಳವಡಿಸುವ ಮೋಟಾರ್ ಗಳನ್ನು ದುರಸ್ತಿಗೊಳಿಸುವ ಕೆಲಸವೂ ಈಗ ನಡೆಯುತ್ತಿದೆ.