Advertisement
ತೆಂಗಿನಕಾಯಿ ಒಡೆದು ಚಾಲನೆಮೀನುಗಾರರ ಪಾದಯಾತ್ರೆಗೆ ಬಂದರಿನ ಮುಖ್ಯದ್ವಾರದ ಬಳಿ ಮೀನುಗಾರರ ಮುಖಂಡ ಡಾ| ಜಿ.ಶಂಕರ್ ಅವರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಮೀನುಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಉಪಸ್ಥಿತರಿದ್ದರು. ಮಲ್ಪೆ, ಆದಿ ಉಡುಪಿ, ಕರಾವಳಿ ಬೈಪಾಸ್, ಅಂಬಲಪಾಡಿ ಬೈಪಾಸ್ ಪರಿಸರದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮೀನುಗಾರರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು. ಕೆಲವು ಔಷಧಾಲಯಗಳು ಮಾತ್ರ ತೆರೆಯಲ್ಪಟ್ಟಿದ್ದವು. ಶಾರದಾ ಹೊಟೇಲ್ ಮುಂಭಾಗ ಸರ್ವಿಸ್ ರಸ್ತೆಯಲ್ಲಿ ಸಾಗಲು ಯತ್ನಿಸಿದ ಕಾರು ಮತ್ತು ರಿಕ್ಷಾವೊಂದನ್ನು ತಡೆದು ವಾಪಸ್ಸು ಕಳುಹಿಸಲಾಯಿತು. ಆ್ಯಂಬುಲೆನ್ಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
ವಾಹನವೇ ವೇದಿಕೆ !
ಅಂಬಲಪಾಡಿ ಶ್ಯಾಮಿಲಿ ಸಭಾಂಗಣದ ಎದುರು ರಾ.ಹೆದ್ದಾರಿಯಲ್ಲಿ ಒಂದು 407 ಟೆಂಪೊವನ್ನು ನಿಲ್ಲಿಸಿ ಅದನ್ನೇ ವೇದಿಕೆಯನ್ನಾಗಿ ಮಾಡಲಾಗಿತ್ತು. ಪ್ರತಿಭಟನಕಾರರು ನಾಪತ್ತೆಯಾದ ಮೀನುಗಾರರ ಭಾವಚಿತ್ರಗಳ ಬ್ಯಾನರ್ ಹಿಡಿದಿದ್ದರು. ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಯಲ್ಲಿ ಸಚಿವೆ ಡಾ|ಜಯಮಾಲಾ ಅವರು ಆಗಮಿಸಿ ಮನವಿ ಸ್ವೀಕರಿಸಿದರು. ಎಸ್‌ಪಿ ಲಕ್ಷ್ಮಣ ನಿಂಬರಗಿ ಖುದ್ದು ಬಂದೋಬಸ್ತ್ ಮೇಲೆ ನಿಗಾ ವಹಿಸಿದ್ದರು. ಎಎಸ್‌ಪಿ ಕುಮಾರಚಂದ್ರ, ಡಿವೈಎಸ್‌ಪಿ ಜೈಶಂಕರ್, ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದರು.
ಮೊಳಗಿದ ಘೋಷಣೆಗಳು
‘ಮೀನುಗಾರರ ಜೀವಕ್ಕೆ ಬೆಲೆ ಇಲ್ಲವೆ?’, ‘ಸ್ವಾವಲಂಬಿ ಮೀನುಗಾರನ ರಕ್ಷಣೆಗೆ ಯಾರು?’ ‘ಮೀನುಗಾರಿಕೆ ಸ್ತಬ್ಧವಾದರೆ ಕರಾವಳಿಯ ಜನಜೀವನ ಅತಂತ್ರವಾದೀತು’, ‘ಹುಡುಕಿ ಕೊಡಿ ಹುಡುಕಿ ಕೊಡಿ ಕಣ್ಮರೆಯಾದ ಮೀನುಗಾರರನ್ನು ಹುಡುಕಿಕೊಡಿ’, ‘ರಾಜ್ಯ ದೇಶವನ್ನು ಆಳುವವರೇ ಮೀನುಗಾರರ ಸಂಕಷ್ಟ ಅರಿಯಿರಿ’ ‘ಎಲ್ಲಿದ್ದಾರೆ ಹೇಗಿದ್ದಾರೆ ನಮ್ಮವರು, ಮೌನವಾಗಿದ್ದಾರೆ ನಮ್ಮನ್ನಾಳುವವರು’ ಮೊದಲಾದ ಘೋಷಣೆಗಳು ಮೊಳಗಿದವು. ಸಭೆ ಮುಗಿಯುತ್ತಿದ್ದಂತೆ ‘ಕಾಣದ ಕಡಲಿಗೆ ಹಂಬಲಿಸಿದೆ ಮನ…’ ಹಾಡು ಹಾಕಿದಾಗ ನೆರೆದಿದ್ದ ಜನತೆ ಭಾವುಕರಾದರು.
Related Articles
ಶ್ಯಾಮಿಲಿ ಸಭಾಂಗಣ ಆವರಣದಲ್ಲಿ ಮಧ್ಯಾಹ್ನದೂಟದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಪ್ಯಾಕೆಟ್ ಮಜ್ಜಿಗೆ, ಬಾಟಲಿ ನೀರನ್ನು ಹಂಚಲಾಯಿತು. ಸಭೆ ಮುಗಿದ ಕೂಡಲೇ ಮಜ್ಜಿಗೆ ಪ್ಯಾಕೆಟ್, ನೀರಿನ ಬಾಟಲಿ ಸೇರಿದಂತೆ ಕಸವನ್ನು ಹೆಕ್ಕಿ ಸಾಗಿಸುವ ಮೂಲಕ ಮೀನುಗಾರರೇ ಹೆದ್ದಾರಿ ಸ್ವಚ್ಛಗೊಳಿಸಿದರು.
Advertisement
ಕುಂದಾಪುರದಲ್ಲೂ ಮೀನುಗಾರರ ಪ್ರತಿಭಟನೆಜನರಿಲ್ಲದೆ ಬಿಕೋ ಎನ್ನುತ್ತಿರುವ ಕುಂದಾಪುರ ಮೀನು ಮಾರುಕಟ್ಟೆ. ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ 7 ಜನ ಮೀನುಗಾರರಿದ್ದ ಬೋಟು ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಪತ್ತೆಗೆ ಆಗ್ರಹಿಸಿ ರವಿವಾರ ನಡೆದ ಪ್ರತಿಭಟನೆಗೆ ಬೆಂಬಲ ನೀಡಲು ಕುಂದಾಪುರ ಮೀನು ಮಾರುಕಟ್ಟೆಯಲ್ಲೂ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಸದಾ ಜನಜಂಗುಳಿಯಿಂದ ಗಿಜಿ ಗುಡುತ್ತಿದ್ದ ಇಲ್ಲಿನ ಪುರಸಭೆಯ ಮೀನು ಮಾರುಕಟ್ಟೆ ಬಿಕೋ ಎನ್ನುತ್ತಿತ್ತು. ಮೀನಿನ ವ್ಯಾಪಾರ ವಹಿವಾಟು ನಡೆಯಲಿಲ್ಲ. ಕುಂದಾಪುರ ಮೀನುಗಾರಿಕಾ ಬೋಟುಗಳು ಸಮುದ್ರಕ್ಕಿಳಿಯಲಿಲ್ಲ. ಅನೇಕರು ಪ್ರತಿಭಟನೆ ವಿಚಾರ ತಿಳಿಯದೇ ಮೀನು ಖರೀದಿಗೆ ಮಾರು ಕಟ್ಟೆಗೆ ಬಂದವರು ಮರಳಿ ಹೋಗು ತ್ತಿದ್ದರು. ಇನ್ನು ಕೆಲವರು ಬೇರೆ ಮಾಂಸ ಖರೀದಿಸಿ ತೆರಳುತ್ತಿದ್ದುದು ಕಂಡುಬಂತು. ಗಂಗೊಳ್ಳಿಯಲ್ಲೂ ಬಂದ್
ಗಂಗೊಳ್ಳಿಯಲ್ಲೂ ರವಿವಾರ ಮೀನುಗಾರಿಕೆ ವಹಿವಾಟು ನಡೆಯಲಿಲ್ಲ. ಮೀನು ಮಾರುಕಟ್ಟೆ, ಬಂದರು ಪ್ರದೇಶ ಖಾಲಿಯಾಗಿತ್ತು. ಮೀನುಗಾರಿಕೆಗೆ ಬೋಟುಗಳು ತೆರಳದೇ ದಡದಲ್ಲೇ ಲಂಗರು ಹಾಕಿದ್ದವು. ಬಿಜೆಪಿ ಬೆಂಬಲ
ಬಿಜೆಪಿ ಮೀನುಗಾರಿಕಾ ಪ್ರಕೋಷ್ಠ ಇಂದಿನ ಬಂದ್‌ಗೆ ಬೆಂಬಲ ನೀಡಿತ್ತು.