Advertisement
ನಾಡದೋಣಿ ಮೀನುಗಾರರ ಒಕ್ಕೂಟದ ಗೌರವ ಸಲಹೆಗಾರ ನವೀನ್‌ಚಂದ್ರ ಉಪ್ಪುಂದ ಅವರು ಮಾತನಾಡಿ, ಬೇರೆ ರಾಜ್ಯಗಳಲ್ಲಿ ಅಸಾಂಪ್ರದಾಯಿಕ ಮೀನುಗಾರಿಕೆ ನಿಂತಿದೆ. ಕರ್ನಾಟಕ ಕರಾವಳಿಯಲ್ಲಿ ಮಾತ್ರ ಇದೆ. ಮೀನುಗಾರಿಕಾ ಸಚಿವರು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ದನಿ ಆಗಿಲ್ಲ. ಪದೇ ಪದೇ ಭರವಸೆಗಳನ್ನು ಮಾತ್ರ ನೀಡ ಲಾಗುತ್ತಿದೆ. ಸೀಮೆಎಣ್ಣೆ ಬಿಡುಗಡೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. 4,000ಕ್ಕೂ ಅಧಿಕ ರಹದಾರಿ ಹೊಂದಿರುವ ನಾಡದೋಣಿಗಳಿಗೆ ಸೀಮೆಎಣ್ಣೆ ಬಿಡುಗಡೆಯಾಗಿಲ್ಲ. ಇದು ಯಾವುದೇ ಸರಕಾರ, ಜನಪ್ರತಿನಿಧಿಗಳ ವಿರುದ್ಧದ ಹೋರಾಟವಲ್ಲ; ಸರಕಾರದಿಂದ ಮೀನುಗಾರರಿಗೆ ದೊರೆಯುವ ಸೌಲಭ್ಯವನ್ನು ಸಮರ್ಪಕವಾಗಿ ನೀಡಬೇಕು ಎಂದು ಆಗ್ರಹಿಸುವ ಹೋರಾಟ. ಶಾಂತಿಯುತ ಹೋರಾಟಕ್ಕೆ ಸ್ಪಂದಿಸದಿದ್ದರೆ ಬೀದಿಗಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಗೌರವ ಸಲಹೆಗಾರ ಮದನ್ ಕುಮಾರ್ ಮಾತನಾಡಿ, ದೋಣಿಯ ಗಾತ್ರದಿಂದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರನ್ನು ಗುರುತಿಸುವುದಲ್ಲ. ಕುಲಕಸುಬುಗಳನ್ನು ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದವರು ಸಾಂಪ್ರದಾಯಿಕ ನಾಡದೋಣಿ ಮೀನುಗಾರರು. ಅವರು ಇಂತಹುದೇ ದೋಣಿಯನ್ನು ಹೊಂದಿರ ಬೇಕೆಂದೇನಿಲ್ಲ. ಅಸಾಂಪ್ರದಾಯಿಕ ಮೀನುಗಾರಿಕೆ ನಿಲ್ಲಬೇಕು. ಮೀನು ಗಾರಿಕೆ ಉಳಿಯಬೇಕು. ಈ ಕುರಿತು ರಾಜಕೀಯ ಪಕ್ಷಗಳು ಗಮನ ಹರಿಸಬೇಕು. ಮೀನುಗಾರರು ಕೂಡ ಒಟ್ಟಾಗಿ ತಾವೇ ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು. ತಪ್ಪಿಸಿಕೊಂಡ ಆಹಾರ ಇಲಾಖೆ
ಪ್ರತಿಭಟನ ಸ್ಥಳಕ್ಕೆ ಆಗಮಿಸಿ ಮೀನುಗಾರರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರು, ಕಳೆದ ಬಾರಿ ಪ್ರತಿಭಟನೆ ನಡೆಸಿದ ಅನಂತರ ಸರಕಾರ ಮಾರ್ಚ್‌ವರೆಗೆ ಆಹಾರ ಇಲಾಖೆಯಿಂದ ನೀಡಲು ಆದೇಶ ಹೊರಡಿಸಿದೆ. ಎಪ್ರಿಲ್‌ನಿಂದ ಮೀನುಗಾರಿಕಾ ಇಲಾಖೆಯೇ ನೀಡಬೇಕು ಎಂಬ ಅಂಶ ಆದೇಶದಲ್ಲಿದೆ. ಹಾಗಾಗಿ ಮಾರ್ಚ್ ನಿಂದ ಆಹಾರ ಇಲಾಖೆ ಈ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತದೆ. ಮೀನುಗಾರಿಕೆ ಇಲಾಖೆ ಸೀಮೆಎಣ್ಣೆ ನೀಡಬೇಕಾದರೆ 2 ತಿಂಗಳುಗಳಿಗೆ ಹೆಚ್ಚುವರಿ 20 ಕೋ. ರೂ. ಮೀಸಲಿಡಬೇಕಿತ್ತು. ಇದನ್ನು ಬಜೆಟ್‌ನಲ್ಲಿ ಸರಕಾರ ಮೀಸಲಿಟ್ಟಿಲ್ಲ. ಈ ಕುರಿತು ಕೂಡಲೇ ಮೀನುಗಾರಿಕಾ ಸಚಿವರ ಮೇಲೆ ಒತ್ತಡ ತರಬೇಕಾಗಿದೆ. ಅವರು ಕೂಡ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತತ್‌ಕ್ಷಣ ಆದೇಶ ಹೊರಡಿಸಬೇಕು ಎಂದರು.
Related Articles
Advertisement
60 ಬೋಟ್‌ಗಳ ಲೈಸನ್ಸ್ ರದ್ದು : ಡಿಸಿ ಪ್ರತಿಭಟನ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು, ಅಸಾಂಪ್ರದಾಯಿಕ ರೀತಿಯ ಮೀನುಗಾರಿಕೆ ನಡೆಸುತ್ತಿದ್ದ 60 ಬೋಟ್‌ಗಳನ್ನು ವಶಕ್ಕೆ ಪಡೆದು ಅವುಗಳ ಪರವಾನಿಗೆ ರದ್ದು ಮಾಡಲಾಗಿದೆ, ಅವುಗಳ ಡೀಸೆಲ್ ಸಬ್ಸಿಡಿ ಕೂಡ ನಿಲ್ಲಿಸಲಾಗಿದೆ. ಜನರೇಟರ್ ಬಳಸಿ ಲೈಟ್ ಫಿಶಿಂಗ್ ಮಾಡುವ ದೋಣಿಗಳನ್ನು ಪೊಲೀಸರ ನೆರವಿನಿಂದ ವಶಕ್ಕೆ ಪಡೆದು ಕೊಳ್ಳಲಾಗುತ್ತಿದೆ. ಫೆಬ್ರವರಿ ತಿಂಗಳ ಸೀಮೆಎಣ್ಣೆ ಬಿಡುಗಡೆ ತಡವಾಗಿತ್ತು. ಜನವರಿಯ ಸೀಮೆಎಣ್ಣೆ ಕೂಡ ಮಾರ್ಚ್‌ನಲ್ಲೇ ಬಿಡುಗಡೆಯಾಗಿದೆ. ಅದನ್ನು ಈಗ ವಿತರಿಸಲಾಗುತ್ತಿದೆ. ಕೇಂದ್ರದಿಂದ ಸೀಮೆಎಣ್ಣೆ ನೀಡಿಲ್ಲ ಎಂಬುದಾಗಿ ಪೆಟ್ರೋಲಿಯಂ ಕಂಪೆನಿಗಳು ಹೇಳುತ್ತಿವೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರ ಜತೆ ಮಾತನಾಡುತ್ತೇನೆ ಎಂದು ತಿಳಿಸಿದರು.