ಪಣಂಬೂರು/ಮಲ್ಪೆ: ಮೀನುಗಾರಿಕಾ ಋತು ಆರಂಭದ ಹಿನ್ನೆಲೆಯಲ್ಲಿ ನೂಲ ಹುಣ್ಣಿಮೆಯ ದಿನವಾದ ರವಿವಾರ ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಸಭಾದ ಆಶ್ರಯದಲ್ಲಿ ತಣ್ಣೀರು ಬಾವಿಯ ಕಡಲ ಕಿನಾರೆಯಲ್ಲಿ ಮತ್ತು ಮಲ್ಪೆ ಮೀನುಗಾರ ಸಂಘದ ವತಿಯಿಂದ ರವಿವಾರ ವಡಭಾಂಡೇಶ್ವರ ಸಮುದ್ರತೀರದಲ್ಲಿ ಸಾಮೂಹಿಕ ಸಮುದ್ರಪೂಜೆ ನಡೆಯಿತು.
ಕದ್ರಿ ಸುವರ್ಣ ಕದಳೀ ಮಠದ ರಾಜಯೋಗಿ ನಿರ್ಮಲನಾಥಜೀ ಮಹಾರಾಜರು ಹಾಲು, ಸೀಯಾಳ, ಫಲ ಪುಷ್ಪಗಳನ್ನು ಕಡಲಿಗೆ ಅರ್ಪಿಸಿ ಮತ್ಸ್ಯ ಸಂಪತ್ತು ವೃದ್ಧಿಸುವಂತೆ ಮತ್ತು ಮೀನುಗಾರಿಕೆಗೆ ಸಂದರ್ಭ ಯಾವುದೇ ವಿಘ್ನಗಳು ಎದುರಾಗದಿರಲಿ ಎಂದು ಪ್ರಾರ್ಥಿಸಿದರು. ವಿವಿಧ ಭಜನ ಮಂಡಳಿಗಳಿಂದ ಭಜನೆ, ಸಂಕೀರ್ತನೆ ಬಳಿಕ ವಿಶೇಷ ಪೂಜೆ ನೆರವೇರಿತು.
ರಾಜ್ಯ ಪ್ರಶಸ್ತಿ ವಿಜೇತ ಮಹಿಳಾ ಸಾಧಕಿ ಸರಳ ಕಾಂಚನ್, ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಮಹಾ ಸಭಾದ ಅಧ್ಯಕ್ಷ ಸುಭಾಸ್‌ಚಂದ್ರ ಕಾಂಚನ್, ಉಪಾಧ್ಯಕ್ಷ ಹೇಮ ಚಂದ್ರ ಸಾಲ್ಯಾನ್, ಜತೆ ಕಾರ್ಯದರ್ಶಿ ಗಂಗಾಧರ ಶ್ರೀಯಾನ್, ಕೋಶಾಧಿ ಕಾರಿ ರಂಜನ್ ಕಾಂಚನ್, ಏಳು ಗ್ರಾಮದ ಪ್ರತಿನಿಧಿ ಮಾಧವ ಸಾಲ್ಯಾನ್ ಬೋಳೂರು, ಏಳುಪಟ್ಣ ಮೊಗವೀರ ಸಂಯುಕ್ತ ಸಭಾದ ವಿವಿಧ ಗ್ರಾಮಸಭಾಗಳ ಗುರಿಕಾರರು ಭಾಗವಹಿಸಿದ್ದರು. ಆರ್.ಪಿ. ಬೋಳೂರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ಯಾಮ ಸುಂದರ ಕಾಂಚನ್ ಕುದ್ರೋಳಿ ವಂದಿಸಿದರು.
ಶೋಭಾ ಯಾತ್ರೆ
ಕದ್ರಿ ಸುವರ್ಣ ಕದಳೀ ಮಠದ ರಾಜಯೋಗಿ ನಿರ್ಮಲನಾಥಜೀ ಮಹಾರಾಜರು ಸೇರಿದಂತೆ ಮೊಗವೀರರು, ಮತ್ಸ್ಯ ಸಮೃದ್ಧಿಗಾಗಿ ಸಾಮೂಹಿಕ ಸಮುದ್ರಪೂಜೆ ಉದ್ಯಮಿಗಳು ಸಮುದ್ರ ಪೂಜೆಯ ಮುನ್ನ ನಡೆದ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದರು. ಶ್ರೀ ಬ್ರಹ್ಮ ಬಬ್ಬರ್ಯ ಬಂಟ ದೈವಸ್ಥಾನದಿಂದ ಬೃಹತ್ ಪ್ರಮಾಣದಲ್ಲಿ ಹಾಲು, ಸೀಯಾಳ, ಫಲಪುಷ್ಪಗಳೊಂದಿಗೆ ಹೊರಟ ಯಾತ್ರೆಯು ಬೊಕ್ಕಪಟ್ಣ, ಬೋಳೂರು ಅಶ್ವತ್ಥಕಟ್ಟೆ, ನಾಗಬ್ರಹ್ಮ ಸ್ಥಾನ, ಬೋಳೂರು ಗ್ರಾಮ ಚಾವಡಿಯಿಂದಾಗಿ ಗುರುಪುರ ನದಿ ದಾಟಿ ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿ ಸೇರಿತು.
ಮಲ್ಪೆಯ ಮೀನುಗಾರರು ಬೆಳಗ್ಗೆ ವಡಭಾಂಡ ಬಲರಾಮ ಮತ್ತು ಬೊಬ್ಬರ್ಯ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿ ದರು. ಬಳಿಕ ಸಮುದ್ರ ಕಿನಾರೆಯ ತನಕ ಶೋಭಾಯಾತ್ರೆ ನಡೆಯಿತು. ಮಲ್ಪೆ ಮೀನು ಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ಕೆ. ರಘಪತಿ ಭಟ್, ಉದ್ಯಮಿ ಜೆರಿ ವಿನ್ಸೆಂಟ್ ಡಯಾಸ್, ಮೀನುಗಾರಿಕಾ ಸಹಾಯಕ ನಿರ್ದೇ ಶಕ ಶಿವಕುಮಾರ್, ಮೀನುಗಾರಿಕಾ ವಿವಿಧ ಸಂಘಟನೆಗಳ ಮುಖಂಡರಾದ ಯಶ್‌ಪಾಲ್ ಎ. ಸುವರ್ಣ, ಹಿರಿಯಣ್ಣ ಟಿ. ಕಿದಿಯೂರು ಮತ್ತು ಮೀನುಗಾರ ಪ್ರಮುಖರು ಪಾಲ್ಗೊಂಡಿದ್ದರು.