Advertisement

ಬಂದರುಗಳಲ್ಲಿ ಹೂಳೆತ್ತಿದರೆ ಮೀನುಗಾರರು ನಿರಾತಂಕ

04:40 PM Mar 31, 2023 | Team Udayavani |

ಕುಂದಾಪುರ: ಉಡುಪಿ ಜಿಲ್ಲೆಯ ಕರಾವಳಿ ತೀರಗಳ ಪೈಕಿ ಬೈಂದೂರು ಕ್ಷೇತ್ರಕ್ಕೆ ಸಿಂಹಪಾಲು. ಅಂದರೆ ಜಿಲ್ಲೆಯ 80 ಕಿ.ಮೀ. ದೂರದ ಸಮುದ್ರ ಪ್ರದೇಶದಲ್ಲಿ ಸುಮಾರು 40 ಕಿ.ಮೀ. ವ್ಯಾಪ್ತಿ ಬೈಂದೂರಿನದ್ದಾಗಿದೆ. ಇಲ್ಲಿನ ಗಂಗೊಳ್ಳಿ, ಮರವಂತೆ, ಕೊಡೇರಿ, ಶಿರೂರು ಬಂದರು ಗಳಲ್ಲಿ ಹೂಳು ತುಂಬಿರುವುದರಿಂದ ಇಲ್ಲಿನ ಜನರ ಜೀವ ನಾಡಿಯಾದ ಮೀನುಗಾರಿಕೆಗೆ ಮುಳುವಾಗಿದೆ.

Advertisement

ಬಹುತೇಕ ಎಲ್ಲ ಬಂದರುಗಳಲ್ಲಿ ರಾಶಿಗಟ್ಟಲೆ ಹೂಳು ತುಂಬಿರುವುದರಿಂದ ಮೀನುಗಾರಿಕೆಯನ್ನೇ ನಡೆಸದಷ್ಟು ಕಷ್ಟವಾಗುತ್ತಿದ್ದು, ಒಂದೊಂದು ಬಂದರುಗಳಲ್ಲಿ ಭಾರೀ ಪ್ರಮಾಣದ ಹೂಳು ತುಂಬಿದ್ದು, ಅದನ್ನು ಡ್ರೆಜ್ಜಿಂಗ್‌ ಮೂಲಕ ತೆರವು ಮಾಡಲು ಹೆಚ್ಚಿನ ಅನುದಾನದ ಅಗತ್ಯವಿದೆ. ಆದ್ದರಿಂದ ಹೂಳೆತ್ತಲು ರಾಜ್ಯ ಸರಕಾರ ದೊಡ್ಡ ಮೊತ್ತದ ಅನುದಾನವನ್ನೇ ಘೋಷಿಸುವ ಅಗತ್ಯವಿದೆ. ಪ್ರಮುಖವಾಗಿ ಗಂಗೊಳ್ಳಿ ಬಂದರಿನಲ್ಲಿ ಹೂಳೆತ್ತದೇ ಸರಿ ಸುಮಾರು ಒಂದು ದಶಕಗಳಿಗೂ ಹೆಚ್ಚು ಕಾಲವಾಗಿದೆ. ಜಿಲ್ಲೆಯ ಎರಡನೇ ಬಂದರು ಇದಾಗಿದ್ದು, ಹೂಳೆತ್ತದೇ ಇರುವುದರಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ಬರುವ ಬೋಟುಗಳು ಸುಲಭವಾಗಿ ಬಂದರುಗಳಿಗೆ ಬರಲು ಸಾಧ್ಯವಾಗುತ್ತಿಲ್ಲ.

ಬೋಟುಗಳನ್ನು ನಿಲ್ಲಿಸಲೂ ಸಮಸ್ಯೆಯಾಗುತ್ತಿದೆ. ಇದಲ್ಲದೆ ಒಂದ ಕ್ಕೊಂದು ಬೋಟುಗಳು ತಾಗಿಕೊಂಡು ಅವಘಡ ಗಳು ಆಗುವ ಸಾಧ್ಯತೆಗಳೂ ಇದೆ. ಬೋಟುಗಳಿಂದ ಮೀನುಗಳನ್ನು ಇಳಿಸುವಕೆಲಸದ ವೇಳೆ ಮೀನುಗಾರರು ಕಾಲುಜಾರಿ ನೀರಿಗೆ ಬಿದ್ದರೆ, ಬದುಕುವ ಸಾಧ್ಯತೆಯೇ ಕಷ್ಟ. ನೀರಿಗೆ ಬಿದ್ದ ವ್ಯಕ್ತಿ ಹೂಳಿನಡಿಯಲ್ಲಿ ಸಿಲುಕಿ ಮೃತ ದೇಹವನ್ನು ಪತ್ತೆಮಾಡಲು ಸಾಧ್ಯವಿಲ್ಲದ ಸ್ಥಿತಿ ಇದೆ. ಇದರಿಂದಲೇ ಬಹುತೇಕ ಮಂದಿ ಮೀನು ಇಳಿಸಲು ಹಿಂಜರಿಯುತ್ತಿದ್ದಾರೆ. ಗಂಗೊಳ್ಳಿಯಲ್ಲಿ 300 ಕ್ಕೂ ಅಧಿಕ ಪರ್ಸೀನ್‌, 600ಕ್ಕೂ ಹೆಚ್ಚು ಇತರ ಬೋಟುಗಳಿವೆ. ಸಾವಿರಾರು ಮಂದಿ ಈ ಬಂದರನ್ನು ಆಶ್ರಯಿಸಿದ್ದಾರೆ. ಇಲ್ಲಿನ ಕಿರು ಬಂದರಿನಲ್ಲಿಯೂ ಹೂಳೆತ್ತದೇ ಇರುವುದರಿಂದ ಮೀನುಗಾರಿಕೆಗೆ ತೊಂದರೆಯಾಗುತ್ತಿದೆ.

ಅಲ್ಲದೇ ಗಂಗೊಳ್ಳಿ – ಕೋಡಿ ನಡುವಿನ ಅಳಿವೆ ಬಾಗಿಲು ಪ್ರದೇಶ, ಮ್ಯಾಂಗನೀಸ್‌ ವಾರ್ಫ್‌, ಬ್ರೇಕ್‌ ವಾಟರ್‌ ಇಕ್ಕೆಲಗಳಲ್ಲಿ ಹೂಳು ತುಂಬಿದ್ದು, ಇದರ ಡ್ರೆಜ್ಜಿಂಗ್‌ ಸಹ ಆಗಬೇಕಾಗಿದೆ. ಇನ್ನು ಮರ ವಂತೆಯ ಹೊರ ಬಂದರಿನಲ್ಲಿಯೂ ಹೂಳೆತ್ತದೇ ಮೀನುಗಾರರೇ ಪ್ರತಿ ವರ್ಷ ಅವರಿಗೆ ಆಗುವಷ್ಟು ಹೂಳನ್ನು ತೆಗೆದು ಹೊರ ಹಾಕಿ, ದೋಣಿಗಳು ಒಳ ಬರಲು ವ್ಯವಸ್ಥೆ ಮಾಡುತ್ತಿದ್ದಾರೆ. ಇಲ್ಲಿ ಎರಡನೇ ಹಂತದ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ ಡ್ರೆಜ್ಜಿಂಗ್‌ ಕಾರ್ಯಕ್ಕೂ ಅಡ್ಡಿಯಾಗಿದೆ. ಇಲ್ಲಿ 300 ಕ್ಕೂ ಹೆಚ್ಚು ನಾಡದೋಣಿಗಳಿವೆ.

ಕೊಡೇರಿ ಬಂದರನ್ನು 5 ಸಾವಿರಕ್ಕೂ ಹೆಚ್ಚು ಮಂದಿ ಆಶ್ರಯಿಸಿದ್ದು, ಇಲ್ಲಿನ ಬೋಟು ಹಾಗೂ ದೋಣಿಗಳು ಬರುವ ಅಳಿವೆ ಭಾಗದಲ್ಲಿ ಹೂಳು ತುಂಬಿ ಸಮಸ್ಯೆಯಾಗುತ್ತಿದೆ. ಶಿರೂರಿನ ಅಳ್ವೆಗದ್ದೆ ಬಂದರನ್ನು 300 ಕ್ಕೂ ಅಧಿಕ ಗಿಲ್‌ ನೆಟ್‌ ದೋಣಿಗಳು ಆಶ್ರಯಿಸಿದ್ದಾರೆ. ಇಲ್ಲೂ ಹೂಳು ತುಂಬಿದ್ದು ದೋಣಿಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.. ಈಗಾಗಲೇ ಜಿಲ್ಲೆಯ ಪ್ರಮುಖ ಬಂದರು ಮಲ್ಪೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಡ್ರೆಜ್ಜಿಂಗ್‌ ಕಾರ್ಯ ನಡೆಯುತ್ತಿದೆ. ಇದರಿಂದ ಇಲ್ಲಿನ ಸಾವಿರಾರು ಮೀನುಗಾರಿಕಾ ಬೋಟುಗಳಿಗೆ ಅನುಕೂಲವಾಗಲಿದೆ. ಬಂದರುಗಳಲ್ಲಿ ಹೂಳು ತುಂಬಿದ್ದರೆ ಕಡಲಿಗಿಂತ ಬಂದರುಗಳೇ ಮೀನುಗಾರರ ಪ್ರಾಣಕ್ಕೆ ಹೆಚ್ಚು ಅಪಾಯಕಾರಿ. ಅದೇ ರೀತಿ ಇನ್ನುಳಿದ ಬಂದರುಗಳಲ್ಲಿಯೂ ಡ್ರೆಜ್ಜಿಂಗ್‌ ಮೂಲಕ ಹೂಳೆತ್ತುವ ಕಾರ್ಯ ನಡೆದರೆ, ಮೀನುಗಾರರು ನಿಶ್ಚಿಂತೆಯಿಂದ ಮೀನುಗಾರಿಕೆಗೆ ತೆರಳಬಹುದು.

Advertisement

„ ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next