Advertisement

ಮೀನುಗಾರರ ಸುರಕ್ಷೆ: ಕಾರ್ಯಗತಗೊಂಡಿಲ್ಲ ಸುಧಾರಿತ ತಂತ್ರಜ್ಞಾನ

01:40 AM Dec 30, 2020 | Team Udayavani |

ಮಂಗಳೂರು: ಕಡಲಲ್ಲಿರುವ ಮೀನುಗಾರರ ಸುರಕ್ಷೆ ದೃಷ್ಟಿಯಿಂದ ಅವರ ಮೇಲೆ ನಿಗಾ ಇಡುವ ಅಥವಾ ತುರ್ತು ರಕ್ಷಣ ಕ್ರಮಗಳನ್ನು ಕೈಗೊಳ್ಳುವ ಅತ್ಯಾಧುನಿಕ ತಂತ್ರಜ್ಞಾನ ಆಧರಿತ ವ್ಯವಸ್ಥೆ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ.

Advertisement

ದುರಂತಗಳು ಸಂಭವಿಸಿದಾಗ ರಕ್ಷಣ ಕಾರ್ಯಾಚರಣೆ ಗಳಿಗೆ ತೊಡಕಾಗುತ್ತಿರುವುದು ಇತ್ತೀಚಿನ ಕೆಲವು ದುರ್ಘ‌ಟನೆಗಳಿಂದ ಸ್ಪಷ್ಟವಾಗುತ್ತಿದೆ. ಮೀನುಗಾರರಿಗೆ ಗುರುತು ಚೀಟಿ ನೀಡುವ, ಅವರು ಕಡಲಿಗೆ ಇಳಿಯುವಾಗ ಇಲಾಖೆಗಳಿಗೆ ಮಾಹಿತಿ ದೊರೆಯುವಂಥ ವ್ಯವಸ್ಥೆ ರೂಪಿಸುವ ಪ್ರಕ್ರಿಯೆ ಹಲವು ಬಾರಿ ನಡೆದಿದೆ. ನಾಲ್ಕು ವರ್ಷಗಳ ಹಿಂದೆ ಎಚ್‌ಎಎಲ್‌ ಮುಖಾಂತರ ಬಯೋ ಮೆಟ್ರಿಕ್‌ ಗುರುತಿನ ಕಾರ್ಡ್‌ ನೀಡಲಾಗಿದ್ದು, ಅದು ಒಂದೇ ವರ್ಷಕ್ಕೆ ಸೀಮಿತವಾಗಿತ್ತು. ಈಗ ಕೆಲವು ಕಾರ್ಡ್‌ಗಳು ನಿಷ್ಕ್ರಿಯವಾಗಿವೆ. ಅವುಗಳ ನವೀಕರಣ ಹಾಗೂ ಹೊಸ ಕಾರ್ಡ್‌ ನೀಡಲು ಇಲಾಖೆಗೆ ಅವಕಾಶವಿಲ್ಲ.

ಕ್ಯೂ ಆರ್‌ ಕೋಡ್‌ ಕಡ್ಡಾಯ
5 ತಿಂಗಳ ಹಿಂದೆ ಎಲ್ಲ ಮೀನುಗಾರರಿಗೆ ಕ್ಯು ಆರ್‌ ಕೋಡ್‌ ಇರುವ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿದ್ದು, ಆ ಪ್ರಕ್ರಿಯೆ ಈಗ ಜಾರಿಯಲ್ಲಿದೆ. ಜತೆಗೆ ಕರಾವಳಿ ಕಾವಲು ಪೊಲೀಸರು “ಕಡಲು’ ಎಂಬ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಮೀನುಗಾರರ ಬಗ್ಗೆ ಇಲಾಖೆಗಳಿಗೆ ಹಾಗೂ ಕಡಲಿನ ಸ್ಥಿತಿಗತಿ ಬಗ್ಗೆ ಮೀನುಗಾರರಿಗೆ ಮಾಹಿತಿ ನೀಡುತ್ತದೆ.

ಜಿಯೋ ಫೆನ್ಸಿಂಗ್‌
ಇತ್ತೀಚೆಗೆ ಮೀನುಗಾರಿಕೆ ಇಲಾಖೆಯು ಬೋಟ್‌ಗಳ ಚಲನವಲನ ಪತ್ತೆಗೆ ಜಿಯೋ ಫೆನ್ಸಿಂಗ್‌ ಅನುಷ್ಠಾನಗೊಳಿಸಿದೆ. ಇದಕ್ಕೂ ಮೊದಲು ಮಂಗಳೂರಿನಲ್ಲಿ ಕಡಲಿಗಿಳಿಯುವ ಮೀನುಗಾರರ ಮಾಹಿತಿಯು ಮೊಬೈಲ್‌ ಮೆಸೇಜ್‌ ಮೂಲಕ ಇಲಾಖೆಗೆ ನೇರವಾಗಿ ಸಿಗುವ ವ್ಯವಸ್ಥೆಯ ರೂಪುರೇಷೆ ಸಿದ್ಧಗೊಂಡಿತ್ತು. ಆದರೆ ಕಾರ್ಯಗತಗೊಂಡಿರಲಿಲ್ಲ.

ಉಪಗ್ರಹ ಆಧರಿತ ಸಂವಹನ
ಈಗ ಟ್ರಾನ್ಸ್‌ಪಾಂಡರ್‌ ಮೂಲಕವೂ ಬೋಟ್‌ಗಳ ಲೊಕೇಶನ್‌ ಪತ್ತೆ ಹಚ್ಚಲಾಗುತ್ತದೆ. ಅಲ್ಲದೆ ಇಲಾಖೆ ಹೊಸದಾಗಿ ಖಾಸಗಿ ಸಂಸ್ಥೆಯ ಮುಖಾಂತರ “ಟು ವೇ ಕಮ್ಯುನಿಕೇಶನ್‌'(ಎರಡು ಕಡೆ ಸಂಪರ್ಕ) ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದೆ. ಇದರಲ್ಲಿ ಕಡಲಿನಲ್ಲಿರುವ ಮೀನುಗಾರರೊಂದಿಗೆ ಇಲಾಖೆಯವರು ಸಂದೇಶಗಳ ಮೂಲಕ ಸಂವಹನ ಮಾಡಲು ಸಾಧ್ಯ.  4 ನಾಲ್ಕು ವರ್ಷಗಳಿಂದ ಮೀನು ಗಾರರ ಸುರಕ್ಷೆ, ರಾಷ್ಟ್ರೀಯ ಭದ್ರತೆ ದೃಷ್ಟಿ ಯಿಂದ ಕೆಲವು ಕ್ರಮ ಕೈಗೊಳ್ಳಲಾಗಿದ್ದರೂ ಸ್ಪಷ್ಟ ವ್ಯವಸ್ಥೆ ಇನ್ನೂ ಸಾಧ್ಯವಾಗಿಲ್ಲ.

Advertisement

ಆನ್‌ಲೈನ್‌ ಟ್ರ್ಯಾಕಿಂಗ್‌ ಬೇಕು
ಮೀನುಗಾರಿಕೆಗೆ ತೆರಳುವಾಗ (ಲಾಗಿನ್‌) ಮತ್ತು ವಾಪಸಾಗುವಾಗ (ಲಾಗ್‌ಔಟ್‌) ಇಲಾಖೆಗೆ ಮಾಹಿತಿ ದೊರೆಯಬೇಕಾದರೆ ಆನ್‌ಲೈನ್‌ ಟ್ರ್ಯಾಕಿಂಗ್‌ ಅವಶ್ಯ. ಪ್ರಸ್ತುತ ಹೆಚ್ಚಿನವರು ತಮ್ಮ ಬೋಟ್‌ಗಳಲ್ಲಿ ತೆರಳುವವರ ಮಾಹಿತಿಯನ್ನು ಡೀಸೆಲ್‌ ಪಾಯಿಂಟ್‌ಗಳಲ್ಲಿ ನೀಡುತ್ತಿದ್ದಾರೆ. ಅದರ ಆಧಾರದಲ್ಲಿ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಮೀನುಗಾರರ ಸುರಕ್ಷೆ ಹಿತದೃಷ್ಟಿಯಿಂದ ಸಾಧ್ಯವಿರುವ ಎಲ್ಲ ವೈಜ್ಞಾನಿಕ ಉಪಕರಣ, ವ್ಯವಸ್ಥೆಗಳನ್ನು ಅಳವಡಿಸಲು ಸರಕಾರ ಬದ್ಧವಾಗಿದ್ದು, ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಮೀನುಗಾರಿಕೆ ದೋಣಿಗಳ ದುರಂತಗಳ ಕುರಿತು ಸಮಗ್ರ ಅಧ್ಯಯನ ನಡೆಸುವುದಕ್ಕೂ ಸೂಚಿಸಿದ್ದೇನೆ..
– ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಸಚಿವರು

ಕಡಲಿಗಿಳಿಯುವ ಮೀನುಗಾರರ ನಿಖರ ಮಾಹಿತಿ ದಾಖಲಾಗುವುದು ಅವಶ್ಯ. ಮೀನುಗಾರರ ಸುರಕ್ಷೆ ದೃಷ್ಟಿಯಿಂದ ಒಂದು ವೈಜ್ಞಾನಿಕ ವ್ಯವಸ್ಥೆ ಬೇಕು.
– ಮೋಹನ್‌ ಬೆಂಗ್ರೆ, ಮೀನುಗಾರ ಮುಖಂಡರು

Advertisement

Udayavani is now on Telegram. Click here to join our channel and stay updated with the latest news.

Next