Advertisement

ಉ.ಕ. ಮೀನುಗಾರರ ಮನೆಯಲ್ಲಿ ಇನ್ನೂ ಸುದ್ದಿ ಒಪ್ಪದ ಸ್ಥಿತಿ

01:14 AM May 06, 2019 | sudhir |

ಮಲ್ಪೆ: ಸುವರ್ಣ ತ್ರಿಭುಜ ಬೋಟ್‌ ಅವಶೇಷ ಪತ್ತೆಯಾಗಿರುವ ಸುದ್ದಿ ಮಾಧ್ಯಮದಲ್ಲಿ ಕೇಳಿಬಂದ ಬಳಿಕ ಆ ದೋಣಿಯಲ್ಲಿದ್ದ ಉ.ಕನ್ನಡದ ಜಿಲ್ಲೆಯ ಮೀನುಗಾರರ ಮನೆಯವರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಮನೆ ಯಜಮಾನನ ನಿರೀಕ್ಷೆಯಲ್ಲಿದ್ದ ಕುಟುಂಬಗಳು ಈ ಸುದ್ದಿಯನ್ನು ಒಪ್ಪದ ಸ್ಥಿತಿಯಲ್ಲಿವೆ.

Advertisement

ಕುಮಟ ಹೊಲನಗದ್ದೆ ಮೀನುಗಾರ ಲಕ್ಷ್ಮಣ ಅವರ ತಮ್ಮ ಗೋವಿಂದ ಹರಿಕಂತ್ರ “ಉದಯವಾಣಿ’ ಜತೆ ಮಾತನಾಡಿ, ಕೇಂದ್ರ ಸರಕಾರವಾಗಲಿ, ನೌಕಾಪಡೆಯಾಗಲಿ, ರಾಜ್ಯ ಮೀನುಗಾರಿಕೆ ಸಚಿವರಿಂದಾಗಲಿ – ಯಾರಿಂದಲೂ ಬೋಟ್‌ ಪತ್ತೆಯ ಬಗ್ಗೆ ನಮಗೆ ಇದುವರೆಗೆ ಅಧಿಕೃತ ಮಾಹಿತಿ ಬಂದಿಲ್ಲ.

ಕೇವಲ ಮಾಧ್ಯಮದಲ್ಲಿ ಬಂದಷ್ಟೇ ಗೊತ್ತಿದೆ. ಸಮುದ್ರದ ಆಳದಲ್ಲಿ ಸಿಕ್ಕಿದೆ ಎನ್ನಲಾದ ಬೋಟಿನ ಫೋಟೋವನ್ನು ಯಾರೂ ತೋರಿಸಿಲ್ಲ. ಬೋಟನ್ನು ನೌಕಾ ಪಡೆಯವರು ಮೇಲೆ ಎತ್ತಿದರೆ ನಂಬಬಹುದು. ನಮಗೆ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಲಕ್ಷ್ಮಣ ಅವರ ಪತ್ನಿ ಪ್ರೇಮಾ ಇನ್ನೂ ಪತಿಯ ಬರುವಿಕೆಯ ನಿರೀಕ್ಷೆಯಲ್ಲೇ ಇದ್ದಾರೆ. ಅವರು ಜೀವಂತವಾಗಿದ್ದಾರೆ, ಅವರನ್ನು ಬಂಧನದಲ್ಲಿರಿಸಿದ್ದಾರೆ ಎಂದು ಹೇಳುತ್ತಾರೆ.

ಮಕ್ಕಳ ಯಶಸ್ಸು ಕಾಣಲು ಅವರಿಲ್ಲ
ಲಕ್ಷ್ಮಣ ಅವರ ಹಿರಿಯ ಮಗಳು ಸೂಕ್ಷ್ಮಾ ಈಗಷ್ಟೇ ದ್ವಿತೀಯ ಬಿಕಾಂ ಪರೀಕ್ಷೆ ಬರೆದಿದ್ದಾಳೆ. ಎರಡನೆಯ ಮಗ ಸುದೀಪ ದ್ವಿತೀಯ ಪಿಯು ಉತ್ತೀರ್ಣನಾಗಿದ್ದಾನೆ. ಪುತ್ರಿ ಸುಪ್ರೀತಾ ಎಸೆಸೆಲ್ಸಿಯಲ್ಲಿ ಶೇ.81 ಅಂಕ ಗಳಿಸಿದ್ದಾಳೆ. ಕೊನೆಯವ ಸುಮಿತ್‌ 9ನೇ ತರಗತಿ ಪಾಸಾಗಿದ್ದಾನೆ. ಮಕ್ಕಳ ಶೈಕ್ಷಣಿಕ ಉನ್ನತಿಯ ಸಂಭ್ರಮಕ್ಕೆ ಸಾಕ್ಷಿಯಾಗಲು ಲಕ್ಷ್ಮಣ ಅವರಿಲ್ಲ.

Advertisement

ದೋಣಿಯಲ್ಲಿದ್ದ ಕುಮಟಾದ ಸತೀಶ ಹರಿಕಂತ್ರ, ರವಿ ಮಂಕಿ, ಭಟ್ಕಳದ ಹರೀಶ ಮತ್ತು ರಮೇಶ ಅವರ ಮನೆಗಳಲ್ಲೂ ಮೌನ ನೆಲೆಸಿದೆ.

ದೇಹ ಸಿಗದೆ ಉತ್ತರಕ್ರಿಯೆ ?
ದೋಣಿಯಲ್ಲಿದ್ದವರು ಏನಾಗಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಮೃತದೇಹ ಸಿಗದೆ ಉತ್ತರಕ್ರಿಯೆ ಮಾಡುವ ಹಾಗಿಲ್ಲ. ಮೃತಪಟ್ಟಿರುವುದು ಖಚಿತವಾದಲ್ಲಿ ಮುಂದಿನ ವಿಧಿವಿಧಾನಗಳನ್ನು ಹೇಗೆ, ಯಾವಾಗ ಮಾಡುವುದೆಂದು ಬಲ್ಲವರಿಂದ ತಿಳಿದುಕೊಂಡು ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಲಿದ್ದೇವೆ ಎನ್ನುತ್ತಾರೆ ಗೋವಿಂದ ಹರಿಕಂತ್ರ.

ತುಂಡು ಮಾತ್ರ ಸಿಕ್ಕಿದೆ ಎಂಬ ಮಾಹಿತಿ
ಇನ್ನು, ಮಲ್ಪೆ ಬಡಾನಿಡಿಯೂರಿನ ಚಂದ್ರಶೇಖರ ಕೋಟ್ಯಾನ್‌ ಅವರ ಪತ್ನಿ ಶ್ಯಾಮಲಾ ಅವರಿಗೆ ಬೋಟಿನ ಒಂದು ಸಣ್ಣ ತುಂಡು ಮಾತ್ರ ಸಿಕ್ಕಿದೆ, ಮೀನುಗಾರರ ಹುಡುಕಾಟ ನಡೆಯುತ್ತಿದೆ ಎಂದು ಮಾತ್ರ ಮಾಹಿತಿ ನೀಡಲಾಗಿದೆ. ದಾಮೋದರ ಸಾಲ್ಯಾನ್‌ ಅವರ ವೃದ್ಧ ತಂದೆತಾಯಿಗೆ ಅವಶೇಷ ಸಿಕ್ಕಿರುವ ಮಾಹಿತಿಯೂ ಗೊತ್ತಾಗಿಲ್ಲ ಎನ್ನಲಾಗಿದೆ.

ಒಪ್ಪಂದದ ಪರಿಹಾರಕ್ಕೆ ಅರ್ಜಿ
ಬೋಟ್‌ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ, ಈವರೆಗೂ ಪತ್ತೆಯಾಗದ 7 ಮಂದಿ ಮೀನುಗಾರ ಕುಟುಂಬಸ್ಥರಿಗೆ ಒಪ್ಪಂದದ ಪ್ರಕಾರ (ಬಾಂಡ್‌ ಅಗ್ರಿಮೆಂಟ್‌) ಪರಿಹಾರ ನೀಡಲು ಮೀನುಗಾರಿಕೆ ಇಲಾಖೆ ಮುಂದಾಗಿದೆ. ಈಗಾಗಲೇ ಇಲಾಖೆಯ ಅಧಿಕಾರಿಗಳು ಮೀನುಗಾರ ಕುಟುಂಬದ ಸದಸ್ಯರಿಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಿದ್ದಾರೆ.

ಮೀನುಗಾರರ ಮೃತದೇಹ ಪತ್ತೆಯಾಗದ ಸಂದರ್ಭದಲ್ಲಿ ವಾರಸು ದಾರರಿಗೆ ಒಪ್ಪಂದದ ಪ್ರಕಾರ ಪರಿಹಾರ ನೀಡಲಾಗುತ್ತದೆ. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ 6 ಲಕ್ಷ ರೂ. ಪರಿಹಾರ ಸಿಗುತ್ತದೆ. ಮೃತದೇಹ ಸಿಗದಿರುವ ನಾಲ್ಕೈದು ಪ್ರಕರಣಗಳು ಮೂರೂವರೆ ವರ್ಷಗಳಲ್ಲಿ ನಡೆದಿದ್ದು, ಅಂತಹ ಎಲ್ಲ ಕುಟುಂಬಗಳಿಗೂ ಪರಿಹಾರವನ್ನು ನೀಡಲಾಗಿದೆ ಎಂದು ಮೀನುಗಾರಿಕೆ ಉಪ ನಿರ್ದೇಶಕ ಪಾರ್ಶ್ವನಾಥ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next