ಮಲ್ಪೆ: ಕೇಂದ್ರ ಹಾಗೂ ರಾಜ್ಯದ ಕಾನೂನು ಉಲ್ಲಂಘಿಸಿ ಜನರೇಟರ್ ಬಳಸಿ ಅವೈಜ್ಞಾನಿಕ ಬೆಳಕು ಮೀನುಗಾರಿಕೆ ಮಾಡುತ್ತಿರುವ ಪರ್ಸಿನ್ ಮೀನುಗಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿದ ಮೀನುಗಾರರು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಾರ್ಶ್ವನಾಥ್ ಹಾಗೂ ಕರಾವಳಿ ಕಾವಲು ಪಡೆಯ ಅಧಿಕಾರಿಗಳನ್ನು ಬುಧವಾರ ಮತ್ತೆ ತೀವ್ರ ತರಾಟೆಗೆ ತೆಗೆದುಕೊಂಡರು.
ಬೆಳಕು ಮೀನುಗಾರಿಕೆ ನಡೆಯುತ್ತಿದ್ದರೂ ಯಾವ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಮಲ್ಪೆ ಆಳಸಮುದ್ರ ಮತ್ತು ನಾಡದೋಣಿ ಮೀನುಗಾರರು, ಉಪನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಗುರುವಾರ ಮತ್ತೆ ಬೆಳಕು ಮೀನುಗಾರಿಕೆ ತೆರೆಳಿದರೆ ಉಗ್ರ ಹೋರಾಟ ಕೈಗೆತ್ತಿಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದರು.
ಮಲ್ಪೆ ಆಳಸಮುದ್ರ ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ ಮಾತನಾಡಿ, ಬೆಳಕು ಮೀನುಗಾರಿಕೆ ಖಂಡಿಸಿ ಅನೇಕ ಬಾರಿ ಮನವಿ, ಹೋರಾಟ ಮಾಡಿದ್ದೇವೆ. ಕಟ್ಟುನಿಟ್ಟಿನ ಕ್ರಮವಾಗಿಲ್ಲ. ಬುಧವಾರ ಬೆಳಗ್ಗೆ ಕೂಡಾ ಕದ್ದುಮುಚ್ಚಿ ಮೀನುಗಾರಿಕೆಗೆ ಹೋಗಿದ್ದಾರೆ. ಇಷ್ಟೆಲ್ಲ ಸಮಸ್ಯೆಯಾಗುವಾಗ ನೀವು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ತರಾಟೆಗೆ ತೆಗೆದುಕೊಂಡರು.
ಕಾವಲು ಪಡೆ ಯಾಕೆ ಬೇಕು:
ಪಸೀìನ್ ಮೀನುಗಾರರ ಜನರೇಟರ್ ತೆರವು ವೇಳೆ ದತ್ತಾಂಜನೇಯ ಬೋಟ್ ಮೀನುಗಾರರು ಅಧಿಕಾರಿಗಳ ಮಾತು ಕೇಳದೇ ಸಮುದ್ರಕ್ಕೆ ತೆರಳಿದ್ದು, ಕರಾವಳಿ ಕಾವಲು ಪಡೆ ಅಧಿಕಾರಿಗಳು ಕೈ ಕಟ್ಟಿ ಕುಳಿತುಕೊಂಡಿದ್ದಾರೆ. ಒಂದು ಮೀನುಗಾರಿಕಾ ಬೋಟ್‌ನ್ನು ಬೆನ್ನಟ್ಟಿ ಹಿಡಿಯಲು ಆಗದೇ ಇರುವ ನೀವು ಇರುವುದು ಯಾಕೆ? ನಿಮ್ಮಿಂದ ನಮಗೆ ಯಾವ ಲಾಭವೂ ಇಲ್ಲ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ 3, 4 ಬೋಟ್‌ಗಳಿಂದ ಎಂಜಿನ್ ತೆರವು ಮಾಡಲಾಗಿದೆ. ಗುರುವಾರದೊಳಗೆ ಎಲ್ಲಾ ಜನರೇಟರ್ ತೆರವಿಗೆ ಆದೇಶಿಸಿದ್ದೇವೆ. ಈ ಬಗ್ಗೆ ಪೊಲೀಸರಿಗೂ ದೂರು ಕೊಟ್ಟಿದ್ದೇವೆ. ಕಾನೂನು ಉಲ್ಲಂಘನೆ ಮಾಡುವವರ ಡೀಸೆಲ್ ವಿತರಣೆ ನಿಲ್ಲಿಸಲಾಗಿದೆ. ಪರವಾನಿಗೆ ತಾತ್ಕಾಲಿಕವಾಗಿ ತಡೆ ಹಾಗೂ ನೋಂದಾವಣಿ ರದ್ದು ಮಾಡುವಂತೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಮೀನುಗಾರಿಕಾ ಉಪನಿರ್ದೇಶಕ ಪಾರ್ಶ್ವನಾಥ ತಿಳಿಸಿದ್ದಾರೆ.
ಚಂದ್ರಕಾಂತ್ ಕರ್ಕೇರ, ಕರುಣಾಕರ ಸಾಲ್ಯಾನ್, ವಿಠಲ ಕರ್ಕೇರ, ಆನಂದ ಅಮೀನ್, ದಯಾನಂದ ಕುಂದರ್, ದಯಾನಂದ ಕೆ. ಸುವರ್ಣ, ತಿಮ್ಮ ಮರಕಾಲ ಶಂಕರ ಸಾಲ್ಯಾನ್, ಭುವನೇಶ್ ಕೋಟ್ಯಾನ್, ಮಹೇಶ್ ಸುವರ್ಣ, ಸುಭಾಸ್ ಮೆಂಡನ್, ಮಿಥುನ್ ಕರ್ಕೇರ, ಹರೀಶ್ ಜಿ. ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.