Advertisement

ಮೀನುಗಾರಿಕೆ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರ

11:43 AM Jun 02, 2022 | Team Udayavani |

ಹೊಯಿಗೆಬಜಾರ್‌: ಕರಾವಳಿಯ ಆರ್ಥಿಕ ಚಟುವಟಿಕೆಯ ಆಧಾರ ಸ್ತಂಭವಾಗಿರುವ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಳ್ಳುವವರಿಗೆ ಹಾಗೂ ಇದರಲ್ಲಿಯೇ ಹೊಸ ಉದ್ಯೋಗ ಸೃಷ್ಟಿಸುವ ಉದ್ದೇಶ ದಿಂದ ಮಂಗಳೂರು ಸ್ಮಾರ್ಟ್‌ ಸಿಟಿಯಿಂದ ಕೌಶಲಾಭಿ ವೃದ್ಧಿ ಕೇಂದ್ರವೊಂದು ಮಂಗಳೂರಿನಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ.

Advertisement

ಹೊಯಿಗೆ ಬಜಾರ್‌ನ ಕೇಂದ್ರೀಯ ಸಾಗರ ಮೀನುಗಾರಿಕೆ ಸಂಶೋಧನ ಕೇಂದ್ರದ ಆವರಣದಲ್ಲಿ ತರಬೇತಿ ಕೇಂದ್ರದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಎಕ್ಕೂರಿನ ಮೀನುಗಾರಿಕೆ ಕಾಲೇಜು ಈ ಯೋಜನೆಯ ಅನುಷ್ಠಾನ ಸಂಸ್ಥೆಯಾಗಿದೆ. ಮೀನುಗಾರರು, ಮಹಿಳೆಯರು, ನಿರುದ್ಯೋಗಿಗಳು, ಶಾಲೆ ಅರ್ಧದಲ್ಲಿ ಬಿಟ್ಟ ಯುವಕರು ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಕೋರ್ಸ್‌ಗಳಲ್ಲಿ ತರಬೇತಿ ಪಡೆದು, ಸೂಕ್ತ ಉದ್ಯೋಗಾವಕಾಶ ತಮ್ಮದಾಗಿಸಿಕೊಳ್ಳಬಹುದು.

ಒಟ್ಟು 4.75 ಕೋ.ರೂ. ವೆಚ್ಚದಲ್ಲಿ ಯೋಜನೆ ಸಾಕಾರ ವಾಗುತ್ತಿದೆ. ಇದರಲ್ಲಿ 2.40 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಮೀಸಲಿರಿಸಲಾಗಿದ್ದು, ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಉಳಿದ 2.35 ಕೋ.ರೂ. ತರಬೇತಿಗೆ ಬಳಸಲು ಉದ್ದೇಶಿಸಲಾಗಿದೆ.

ಪ್ರಸ್ತುತ ಮೀನುಗಾರಿಕೆ ಕ್ಷೇತ್ರದ ವಿವಿಧ ಸ್ತರಗಳಲ್ಲಿ ಸ್ಥಳೀಯರಿಗಿಂತ ಹೊರ ಜಿಲ್ಲೆ, ರಾಜ್ಯಗಳ ಕಾರ್ಮಿಕರು ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಸಮುದ್ರಕ್ಕೆ ಹೋಗಿ ಮೀನು ಹಿಡಿಯವುದು, ಬಲೆ ಹೆಣೆಯುವುದು ಮೊದಲಾದ ಕೆಲಸಗಳನ್ನೂ ನಿರ್ವಹಿಸುತ್ತಾರೆ. ಇದರಿಂದ ಸ್ಥಳೀಯರು ಕ್ಷೇತ್ರದಿಂದ ವಿಮುಖವಾಗುವಂತಾಗಿದೆ. ಹೀಗಾಗಿ ತರಬೇತಿ ಕೇಂದ್ರಕ್ಕೆ ಸೇರಿ ಕೌಶಲ ಪಡೆಯುವುದರಿಂದ ಸ್ಥಳೀಯರೂ ಮತ್ತೆ ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ.

ಮಂಗಳೂರು ವ್ಯಾಪ್ತಿಯಲ್ಲಿನ ಸರಕಾರದ ಅಧೀನದ ಕರ್ನಾಟಕ ಜರ್ಮನ್‌ ಟೆಕ್ನಿಕಲ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌, ಸರಕಾರಿ ಐಟಿಐ, ಸರಕಾರಿ ಮಹಿಳಾ ಐಟಿಐ, ಕರ್ನಾಟಕ ಪಾಲಿಟೆಕ್ನಿಕ್‌, ಸರಕಾರಿ ಮಹಿಳಾ ಪಾಲಿಟೆಕ್ನಿಕ್‌, ಸರಕಾರಿ ಟೂಲ್‌ರೂಮ್‌ ತರಬೇತಿ ಕೇಂದ್ರ ಈ 6 ತಾಂತ್ರಿಕ ತರಬೇತಿ ಸಂಸ್ಥೆಗಳ ಮೂಲಕ ಉಚಿತವಾಗಿ ಕೌಶಲ ತರಬೇತಿ ನೀಡಲು ಉದ್ದೇಶಿಲಾಗಿದೆ.

Advertisement

ಕೌಶಲ ಅಭಿವೃದ್ಧಿ ಕೇಂದ್ರದ ಸೇವೆಗಳು

ಅಕ್ವೇರಿಯಂ ಫ್ಯಾಬ್ರಿಕೇಶನ್‌, ಅಲಂಕಾರಿಕ ಮೀನುಗಳ ನಿರ್ವಹಣೆ, ಮಾರಾಟ, ಮೌಲ್ಯಾಧಾರಿತ ಮತ್ಸ್ಯ ಉತ್ಪನ್ನಗಳ ತಯಾರಿಕೆ, ಮೀನುಗಳ ಸಂಸ್ಕರಣೆಯಲ್ಲಿ ಅಧುನಿಕ ತಂತ್ರಜ್ಞಾನ, ಮೀನುಗಳ ತ್ಯಾಜ್ಯದಿಂದ ಗೊಬ್ಬರ ತಯಾರಿ, ಮೀನುಗಾರಿಕಾ ಬೋಟ್‌ಗಳ ರಕ್ಷಣೆ, ಆಧುನೀಕರಣ (ರಿಪೇರಿ), ಸಾಂಪ್ರದಾಯಿಕವಾಗಿ ಬಲೆಗಳನ್ನು ತಯಾರಿಸುವುದು ಮತ್ತು ದುರಸ್ತಿ ಮೊದಲಾದ ವಿಷಯಗಳಿಗೆ ಸಂಬಂಧಿಸಿ ತರಬೇತಿ ನೀಡಲಾಗುತ್ತದೆ. ಕಿರು ಅವಧಿ, ದೀರ್ಘ‌ ಅವಧಿ, ರಜಾಕಾಲದ ತರಬೇತಿ ಪಡೆಯಲು ಅವಕಾಶವಿದೆ. ಊಟ, ಉಚಿತ ವಸತಿ ವ್ಯವಸ್ಥೆಯೊಂದಿಗೆ ತರಬೇತಿ ದೊರೆಯಲಿದ್ದು, 2 ವರ್ಷಗಳ ಅವಧಿಯ ವೆಚ್ಚವನ್ನು ಸ್ಮಾರ್ಟ್‌ ಸಿಟಿ ಭರಿಸಲಿದೆ.

ಶೀಘ್ರ ಉದ್ಘಾಟನೆ

ಮೀನುಗಾರಿಕೆ ವೃತ್ತಿಯ ಕೌಶಲಾಭಿ ವೃದ್ಧಿಗಾಗಿ ಸ್ಮಾರ್ಟ್‌ ಸಿಟಿ ವತಿಯಿಂದ ನಿರ್ಮಿಸಲಾಗಿರುವ ಸ್ಕಿಲ್‌ ಡೆವಲಪ್‌ಮೆಂಟ್‌ ಸೆಂಟರ್‌ನ ಕಾಮಗಾರಿ ಪೂರ್ಣ ಗೊಂಡಿದೆ. ಶೀಘ್ರದಲ್ಲಿ ಉದ್ಘಾಟನೆ ನೆರವೇರಿಸಿ, ತರಬೇತಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. -ಡಿ. ವೇದವ್ಯಾಸ ಕಾಮತ್‌, ಶಾಸಕರು ಮಂಗಳೂರು ದಕ್ಷಿಣ

Advertisement

Udayavani is now on Telegram. Click here to join our channel and stay updated with the latest news.

Next