Advertisement

ಇಂದು ಮಧ್ಯರಾತ್ರಿಯಿಂದ ಮೀನುಗಾರಿಕೆಗೆ ರಜೆ: ಬೆಸ್ತರಿಗೆ ಸ‌ಂಕಷ್ಟದ ದಿನಗಳು

08:19 PM Jun 08, 2019 | mahesh |

ಕಾಸರಗೋಡು: ಪ್ರತೀ ವರ್ಷದಂತೆ ಈ ವರ್ಷವೂ ರಾಜ್ಯದ ಅಧಿಕಾರ ವ್ಯಾಪ್ತಿಯಲ್ಲಿರುವ 12 ನಾಟಿಕಲ್‌ ಮೈಲ್‌ ಸಮುದ್ರದಲ್ಲಿ ಜೂ. 9ರ ಮಧ್ಯರಾತ್ರಿಯಿಂದ ಜು. 31ರ ಮಧ್ಯ ರಾತ್ರಿವರೆಗೆ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಅಂದರೆ 52 ದಿನಗಳ ಕಾಲ ಟ್ರಾಲಿಂಗ್‌ ಅಸಾಧ್ಯ. ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಜೂ.1 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಫಿಶರೀಸ್‌ ಇಲಾಖೆಯ ಡಿ.ಡಿ. ಕೆ.ಅಜಿತ ಅವರು ತಿಳಿಸಿದ್ದಾರೆ.

Advertisement

ಈ ಕಾರಣದಿಂದ ದುಡಿಮೆಯಿಲ್ಲದೆ ಬೆಸ್ತರಿಗೆ ಸಂಕಷ್ಟದ ಹಾಗೂ ಸವಾಲಿನ ದಿನಗಳಾಗಿವೆ. ಮನ್ಸೂನ್‌ ಕಾಲ ಮೀನುಗಳ ಸಂತಾನಾ ಭಿವೃದ್ಧಿಯ ಅವಧಿಯಾದುದರಿಂದ, ಮಸ್ತ್ಯ ಸಂಪತ್ತಿನ ಸಂರಕ್ಷಣೆ ದೃಷ್ಟಿಯಿಂದ ಟ್ರಾಲಿಂಗ್‌ ನಿಷೇಧಿಸಲಾಗಿದೆ. ಇದರ ಪರಿಣಾಮವಾಗಿ ಮೀನುಗಾರಿಕೆ ದೋಣಿ (ಯಾಂತ್ರೀಕೃತ ದೋಣಿ)ಗಳು ದಡದಲ್ಲಿ ಲಂಗರು ಹಾಕಬೇಕಾದ ಅನಿವಾರ್ಯ ಎದುರಾಗಿದೆ. ಈ ದಿನಗಳಲ್ಲಿ ದುಡಿಮೆಯಿಲ್ಲದೆ ಜೀವನ ಸಾಗಿಸುವ ಸವಾಲು ಬೆಸ್ತರನ್ನು ಕಾಡಲಿದೆ. ಜೀವ ಪಣವಿಟ್ಟು ಅಥವಾ ಜೀವದ ಹಂಗು ತೊರೆದು ಸಾಹಸದಿಂದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಜೀವನ ಸಾಗಿಸುತ್ತಿದ್ದ ಬೆಸ್ತರಿಗೆ ಜೀವನ ದಾರಿ ಕಾಣದೆ ಮುಂದಿನ ದಿನಗಳು ಸಂಕಷ್ಟದ ದಿನಗಳಾಗಿವೆ.

ಸಮುದ್ರದಲ್ಲಿ ಮೀನಿನ ಸಂತಾನೋತ್ಪತ್ತಿ ಋತು ಆರಂಭಗೊಂಡ ಹಿನ್ನೆಲೆಯಲ್ಲಿ ಮಸ್ತ್ಯ ಸಂರಕ್ಷಿಸುವ ಹಿನ್ನೆಲೆಯಲ್ಲಿ ಕೆ.ಎಂ.ಎಫ್‌.ಆರ್‌. ಕಾಯ್ದೆಯಂತೆ ಕೇರಳದ ಆಳ ಸಮುದ್ರದಲ್ಲಿ ಜುಲೈ 31ರ ವರೆಗೆ ಮೀನುಗಾರಿಕೆಗೆ ನಿಷೇಧ ಹೇರಿದ್ದು, ಪರಂಪರಾಗತ ಮೀನುಗಾರಿಕೆಗೆ ಯಾವುದೇ ನಿಯಂತ್ರಣವಿಲ್ಲದೆ ಮೀನು ಗಾರಿಕೆ ನಡೆಸಬಹುದಾಗಿದೆ. ಈ ಕಾರಣ ದಿಂದ ಪರಂಪರಾಗತ ಮೀನುಗಾರಿಕೆ ನಡೆಸುವ ಬೆಸ್ತರು ಸ್ವಲ್ಪಮಟ್ಟಿಗೆ ಉಸಿರಾಡುವಂತಾಗಿದೆ.

ಮೀನುಗಾರಿಕೆಯನ್ನು ಜೀವನಮಾರ್ಗ ವಾಗಿ ಆಶ್ರಯಿಸಿರುವ ಬೆಸ್ತರಿಗಿನ್ನು ಸಂಕಷ್ಟದ ದಿನಗಳು. ಸಮುದ್ರದಲ್ಲಿ ಮೀನು ಸಂತತಿ ಸಂರಕ್ಷಣೆಗಾಗಿ ಏರ್ಪಡಿಸಿರುವ ಟ್ರಾಲಿಂಗ್‌ ನಿಷೇಧದ ಪರಿಣಾಮವಾಗಿ ಜುಲೈ 31ರ ಮಧ್ಯರಾತ್ರಿಯ ವರೆಗೆ ಮೀನುಗಾರರು ಯಾಂತ್ರೀಕೃತ ಬೋಟ್‌ಗಳಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಂತಿಲ್ಲ. ಈ ಆದೇಶವನ್ನು ಉಲ್ಲಂಘಿಸಿ ಮೀನು ಗಾರಿಕೆಗೆ ತೆರಳಿದರೆ ಬೋಟ್‌ಗಳನ್ನು ವಶಪಡಿಸಿಕೊಳ್ಳುವ ಮೊದಲಾದ ಕಠಿನ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮೀನುಗಾರಿಕಾ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಕಾಲಾವಧಿಯಲ್ಲಿ ಟ್ರಾಲ್‌ ನೆಟ್‌ ಬಳಸಿ ಮೀನುಗಾರಿಕೆ ಸಂಪೂರ್ಣ ನಿಷೇಧಿಸಲಾಗಿದೆ. ಆದರೆ ಪರಂಪರಾಗತ ಬೆಸ್ತರು ಮೀನುಗಾರಿಕೆ ನಡೆಸಬಹುದಾಗಿದೆ. ಸಮುದ್ರದ ಕಿನಾರೆಯಲ್ಲಿ ಬಲೆ ಬೀಸಿ ಮೀನುಗಾರಿಕೆ ನಡೆಸಬಹುದಾಗಿದೆ. ಇದೇ ಸಂದರ್ಭದಲ್ಲಿ ಅನ್ಯ ರಾಜ್ಯಗಳಿಂದ ಬಂದಿರುವ ಮೀನುಗಾರಿಕಾ ಬೋಟುಗಳಿಗೆ ವಾಪಸಾಗುವಂತೆ ಆದೇಶ ನೀಡಲಾಗಿದೆ. ಕರಾವಳಿ ಪ್ರದೇಶದಲ್ಲಿರುವ ಡೀಸೆಲ್‌ ಬಂಕ್‌ಗಳು ಟ್ರಾಲಿಂಗ್‌ ನಿಷೇಧ ಕಾಲಾವಧಿಯಲ್ಲಿ ಕಾರ್ಯಾಚರಿಸಕೂಡದೆಂದು ಆದೇಶದಲ್ಲಿ ತಿಳಿಸಲಾಗಿದೆ. ಅದೇ ರೀತಿ ಬೋಟ್‌ಗಳಿಗೆ ಡೀಸೆಲ್‌ ನೀಡಬಾರದು. ನಿಷೇಧ ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಹಾಗೂ ಬೋಟ್‌ಗಳನ್ನು ಮೆರೈನ್‌ ಎನ್‌ಫೋರ್ಸ್‌ಮೆಂಟ್‌ನ ನೆರವಿನಿಂದ ವಶಪಡಿಸಿಕೊಳ್ಳಲಾಗುವುದು.

ಆರ್ಥಿಕ ನೆರವು
ಟ್ರಾಲಿಂಗ್‌ ನಿಷೇಧದ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಳ್ಳುವ ಬೆಸ್ತರಿಗೆ ಮೂರು ಕಂತುಗಳಲ್ಲಿ ಆರ್ಥಿಕ ಸಹಾಯ ವಿತರಿಸಲಾಗುವುದು. ಬಂದರುಗಳಲ್ಲಿನ ಅನುಬಂಧ ಕಾರ್ಮಿಕರಿಗೂ ಫಿಲ್ಲಿಂಗ್‌ ಕಾರ್ಮಿಕರಿಗೂ ಈ ಕಾಲಾವಧಿಯಲ್ಲಿ ನೆರವು ಒದಗಿಸಲಾಗುವುದು. ಪರಂಪರಾಗತ ಮೀನುಗಾರಿಕೆ ನಡೆಸುವ ಬೆಸ್ತರು ಸಾಕಷ್ಟು ಜೀವ ರಕ್ಷಾ ಉಪಕರಣಗಳು, ಲೈಪ್‌ ಜಾಕೆಟ್‌, ಅಗತ್ಯಕ್ಕೆ ತಕ್ಕಂತೆ ಇಂಧನ, ಟೂಲ್‌ ಕಿಟ್‌ ಮೊದಲಾದವುಗಳನ್ನು ದೋಣಿಗಳಲ್ಲಿ ಇರಿಸಿ ಕೊಳ್ಳಬೇಕು. ದೋಣಿಗಳಲ್ಲಿ ಮೀನುಗಾರಿಕೆ ನಡೆಸುವ ಕಾರ್ಮಿಕರ ಪೂರ್ಣ ಮಾಹಿತಿ ಗಳನ್ನು ದೋಣಿಯ ಮಾಲಕರು ದಾಖಲಿಸಿ ಕೊಂಡಿರಬೇಕು.

Advertisement

ಟ್ರಾಲಿಂಗ್‌ ನಿಷೇಧ ಕಾಲಾವಧಿಯಲ್ಲಿ ಸಮುದ್ರದಲ್ಲಿ ಪೆಟ್ರೋಲಿಂಗ್‌ ಹಾಗೂ ರಕ್ಷಣಾ ಚಟುವಟಿಕೆಗಳಿಗಾಗಿ ಜಿಲ್ಲೆ ಯಲ್ಲಿ ಒಂದು ಯಾಂತ್ರೀಕೃತ ಬೋಟ್‌ ಹಾಗೂ ಒಂದು ಫೈಬರ್‌ ದೋಣಿ ಗಳನ್ನು ಸಜ್ಜುಗೊಳಿಸ ಲಾಗಿದೆ. ತುರ್ತು ಸಂದರ್ಭದಲ್ಲಿ ರಕ್ಷಣೆಗಾಗಿ ಕೋಸ್ಟ್‌ ಗಾರ್ಡ್‌, ನೌಕಾ ಪಡೆಯ ನೆರವನ್ನು ಪಡೆದು ಕೊಳ್ಳಲಾಗುವುದು. ಗೋವಾದಲ್ಲಿ ವಿಶೇಷ ತರಬೇತಿ ಪಡೆದ 10ಮಂದಿ ರಕ್ಷಣೆಗಾರರನ್ನು ಟ್ರಾಲಿಂಗ್‌ ನಿಷೇಧದ ಅವಧಿಯಲ್ಲಿ ಸಂರಕ್ಷಣೆಗಾಗಿ ಬಳಸಿಕೊಳ್ಳಲಾಗುವುದು.

ಮೀನುಗಾರಿಕೆ ನಡೆಸಿದರೆ ಬೋಟ್‌ ವಶಕ್ಕೆ
ಜುಲೈ 31ರ ವರೆಗೆ ಟ್ರಾಲಿಂಗ್‌ ಬಳಸಿ ಮೀನುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಈ ಕಾಲಾವಧಿಯಲ್ಲಿ ಟ್ರಾಲಿಂಗ್‌ ಬಳಸಿ ಮೀನುಗಾರಿಕೆ ನಡೆಸುವ ಬೋಟ್‌ಗಳನ್ನು ವಶಪಡಿಸಿಕೊಳ್ಳಲಾಗುವುದೆಂದು ಫಿಶರೀಸ್‌ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.
ಅನ್ಯ ರಾಜ್ಯಗಳಿಂದ ಬಂದ ಯಂತ್ರ ಜೋಡಿಸಿದ ಬೋಟ್‌ಗಳು ಕೇರಳ ಕರಾವಳಿ ಪ್ರದೇಶದಿಂದ ವಾಪಸಾಗಬೇಕೆಂದು ಆದೇಶ ನೀಡಲಾಗಿದೆ.

ಕೇರಳ ಕರಾವಳಿಯಿಂದ ವಾಪಸಾಗದ ಬೋಟ್‌ಗಳಿಗೆ ಜು. 31ರ ವರೆಗೆ ಮೀನುಗಾರಿಕೆಗೆ ಅವಕಾಶ ನೀಡುವುದಿಲ್ಲ. ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೆ ಬೋಟ್‌ಗಳನ್ನು ವಶಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಯಾಂತ್ರೀಕೃತ ಬೋಟ್‌ಗಳಿಗೆ ಡೀಸೆಲ್‌ ವಿತರಿಸುತ್ತಿದ್ದ ಬಂಕ್‌ಗಳಿಂದ ಈ ಕಾಲಾವಧಿಯಲ್ಲಿ ಡೀಸೆಲ್‌ ವಿತರಿಸದಿರುವಂತೆ ತಿಳಿಸಲಾಗಿದೆ.

12 ನಾಟಿಕಲ್‌ ಮೈಲ್‌ವರೆಗೆ ನಿಷೇಧ
ಸಮುದ್ರ ಕಿನಾರೆಯಿಂದ 12 ನಾಟಿಕಲ್‌ ಮೈಲ್‌ ದೂರದ ವರೆಗೆ ಜು. 31ರ ಮಧ್ಯರಾತ್ರಿವರೆಗೆ ಟ್ರಾಲಿಂಗ್‌ ನಿಷೇಧ ಜಾರಿಯಲ್ಲಿರುವುದು. ಪ್ರಸ್ತುತ ವರ್ಷ 52 ದಿನಗಳ ವರೆಗೆ ಟ್ರಾಲಿಂಗ್‌ ನಿಷೇಧವಿದೆ. 2017ರಲ್ಲಿ 47 ದಿನಗಳ ಟ್ರಾಲಿಂಗ್‌ ನಿಷೇಧಿಸಲಾಗಿತ್ತು. ಆದರೆ ಕಳೆದ ವರ್ಷ ಅಂದರೆ 2018ರಿಂದ ಐದು ದಿನ ಹೆಚ್ಚು ಟ್ರಾಲಿಂಗ್‌ ನಿಷೇಧಿಸಿ 52 ದಿನಗಳ ವರೆಗೆ ವಿಸ್ತರಿಸಲಾಗಿದೆ. ಈ ಕಾಲಾವಧಿಯಲ್ಲಿ ಪರಂಪ ರಾಗತ ದೋಣಿ ಮತ್ತು ಇನ್‌ ಬೋರ್ಡ್‌ಗಳಲ್ಲಿ ಮೀನುಗಾರಿಕೆಗೆ ತಡೆಯಿಲ್ಲ. ಮೀನುಗಾರಿಕೆಗೆ ಹೋಗುವ ಮೀನು ಕಾರ್ಮಿಕರು ಕಡ್ಡಾಯವಾಗಿ ಬಯೋಮೆಟ್ರಿಕ್‌ ಗುರುತು ಚೀಟಿ ತಮ್ಮ ಕೈಯಲ್ಲಿರಿಸಿಕೊಳ್ಳಬೇಕು.

ಅಪಘಾತ ಮಾಹಿತಿ ಸಲ್ಲಿಸಿ
ಟ್ರಾಲಿಂಗ್‌ ನಿಷೇಧ ಕಾಲಾವಧಿಯಲ್ಲಿ ಸಮುದ್ರದಲ್ಲಿ ಪೆಟ್ರೋಲಿಂಗ್‌ ಹಾಗೂ ರಕ್ಷಣಾ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ತಲಾ ಒಂದರಂತೆ ಮೆಕನೈಸ್ಡ್ ಬೋಟ್‌ ಮತ್ತು ಫೈಬರ್‌ ದೋಣಿಗಳನ್ನು ಸಜ್ಜುಗೊಳಿಸಲಾಗುವುದು. ಬೋಟ್‌ಗಳ, ದೋಣಿಗಳ ಕಾರ್ಮಿಕರಲ್ಲದೆ ತರಬೇತಿ ಪಡೆದ ಸುರಕ್ಷಾ ಜವಾನರನ್ನು ಮೀನುಗಾರಿಕಾ ಇಲಾಖೆ ರಕ್ಷಣಾ ಕಾರ್ಯಕ್ಕೆ ನೇಮಿಸಲಿದೆ. ತುರ್ತು ಸಂದರ್ಭಗಳಲ್ಲಿ ಕೋಸ್ಟ್‌ ಗಾರ್ಡ್‌ ಮತ್ತು ನೌಕಾಪಡೆಯ ನೆರವನ್ನು ಪಡೆಯಲಾಗುವುದು. ಟ್ರಾಲಿಂಗ್‌ ನಿಷೇಧದ ಹಿನ್ನೆಲೆಯಲ್ಲಿ ಕಾಂಞಂಗಾಡ್‌ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ 24 ತಾಸು ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ಸಂಖ್ಯೆ: 04672202537. ಈ ನಂಬ್ರದಲ್ಲಿ ಅಪಘಾತ ಮಾಹಿತಿಗಳನ್ನು ಸಲ್ಲಿಸಬಹುದು.

160 ಬೋಟ್‌, ಸಾವಿರ ಕಾರ್ಮಿಕರು
ಕಾಸರಗೋಡು ಜಿಲ್ಲೆಯಲ್ಲಿ ಯಾಂತ್ರೀಕೃತ 160 ಬೋಟುಗಳು ಮೀನುಗಾರಿಕೆ ನಡೆಸುತ್ತಿವೆ. ಟ್ರಾಲಿಂಗ್‌ ನಿಷೇಧ‌ದ ಹಿನ್ನೆಲೆಯಲ್ಲಿ ಇವುಗಳನ್ನು ದಡದಲ್ಲಿರಿಸಲಾಗಿದೆ. ಇದರಲ್ಲಿ ದುಡಿಯುವ ಸುಮಾರು 1,000ದಷ್ಟು ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ತುತ್ತಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next