Advertisement

Malpeಕಡಲಲ್ಲಿ ಮೀನು ಅಲಭ್ಯತೆ;ಸಂಕಷ್ಟದಲ್ಲಿ ಮೀನುಗಾರ; ಸಮುದ್ರದಲ್ಲಿ ತಾಪಮಾನ ಏರಿಕೆಯೇ ಕಾರಣ?

11:20 PM Nov 29, 2023 | Team Udayavani |

ಮಲ್ಪೆ: ಕಳೆದ ಒಂದು ತಿಂಗಳಿನಿಂದ ರಾಜ್ಯದ ಕರಾವಳಿ ಯುದ್ದಕ್ಕೂ ಸಮುದ್ರದಲ್ಲಿ ಮೀನಿನ
ಲಭ್ಯತೆ ಕಡಿಮೆಯಾಗಿದ್ದು ಮೀನು ಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಲವು ದಿನಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ. ಸಮುದ್ರದ ತಾಪಮಾನ ಏರಿಕೆಯಿಂದಾಗಿ ಮೀನುಗಳು ತಳಕ್ಕೆ ಸೇರುತ್ತಿವೆ ಎನ್ನಲಾಗುತ್ತಿದೆ.

Advertisement

ಪರ್ಸಿನ್, ತ್ರಿಸೆವೆಂಟಿ, ಸಣ್ಣಟ್ರಾಲ್‌ ಬೋಟುಗಳು ಮೀನುಗಾರಿಕೆ ನಡೆಸದೇ ಮಲ್ಪೆಯ ಬಂದರಿನಲ್ಲಿ ಲಂಗರು ಹಾಕಿವೆ. ಶೇ. 40ರಷ್ಟು ಆಳಸಮುದ್ರ ಬೋಟುಗಳು ದಡದಲ್ಲಿ ನಿಂತಿವೆ. ಕಳೆದ ಬಾರಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಅಗಸ್ಟ್‌ನಿಂದ ಡಿಸೆಂಬರ್‌ ವರೆಗೂ ಉತ್ತಮ ಮೀನುಗಾರಿಕೆ ಆಗಿತ್ತು. ಈ ಬಾರಿ ಆರಂಭದಲ್ಲಿ ಬೊಂಡಸ, ಬಂಗುಡೆ, ಮೊದಲಾದ ಮೀನುಗಳು ಸಿಕ್ಕಿದ್ದವು. ಬೊಂಡಸ ಮೀನು ಹೇರಳವಾಗಿ ದೊರೆತಿದ್ದರೂ ಸರಿಯಾದ ಬೆಂಬಲ ಬೆಲೆ ಸಿಗದೇ ಆಷ್ಟೊಂದು ಲಾಭದಾಯಕವಾಗಲಿಲ್ಲ. ಬಂಗುಡೆ ಮೀನು ಹೇರಳವಾಗಿ ಸಿಕ್ಕರೂ ಸೂಕ್ತ ದರ ಸಿಗಲಿಲ್ಲ. ಆರಂಭದ ದಿನದಲೇ ಸಿಗುತ್ತಿದ್ದ ರಾಣಿ ಮೀನು, ರಿಬ್ಬನ್‌ ಫಿಶ್‌ ಸಂತತಿಯೇ ಇರಲಿಲ್ಲ.

ಶೇ. 95 ಪರ್ಸಿನ್ ಲಂಗರು: ಈ ಬಾರಿ ಬಹುತೇಕ ಪರ್ಸಿನ್ ಬೋಟು ಮೀನುಗಾರರಿಗೆ ಸರಿಯಾದ ಪ್ರಮಾಣದಲ್ಲಿ ಮೀನು ದೊರಕದೇ ಇರುವುದರಿಂದ ಹೇಳಿಕೊಳ್ಳುವ ಮತ್ಸ್ಯ ಸಂಪತ್ತು ಆಗಿಲ್ಲ ಎನ್ನಲಾಗಿದೆ. ದೀಪಾವಳಿಯ ಬಳಿಕ ಶೇ. 90ರಷ್ಟು ಬೋಟುಗಳು ಮೀನುಗಾರಿಕೆಗೆ ತೆರಳದೇ ಲಂಗರು ಹಾಕಿವೆ. ಲಾಭದಾಯಕ ವಾಗದಿದ್ದರೂ ಉಳಿದ ಶೇ. 10ರಷ್ಟು ಬೋಟುಗಳು ಮೀನುಗಾರಿಕೆಗೆ ತೆರಳಿವೆ. ಕಾರಣ ಪರ್ಸಿನ್ ಬೋಟುಗಳಲ್ಲಿ ಒಡಿಶಾ, ಝಾರ್ಖಂಡ್‌, ಉತ್ತರಪ್ರದೇಶದ ಕಾರ್ಮಿಕರೆ ಹೆಚ್ಚು. ಮೀನುಗಾರಿಕೆಗೆ ಬೋಟನ್ನು ಕಳುಹಿಸದೇ ಇದ್ದರೆ, ಊರಿಗೆಂದು ಹೋಗುವ ಕಾರ್ಮಿಕರು ಮರಳಿ ಬರುವುದಿಲ್ಲ. ಹಾಗಾಗಿ ಬೋಟು ಮಾಲಕರು ತಮ್ಮ ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳಲು ನಷ್ಟವಾದರೂ ಬೋಟನ್ನು ಮೀನುಗಾರಿಕೆಗೆ ಕಳುಹಿಸುತ್ತಿದ್ದಾರೆ ಎಂದು ಕೃಷ್ಣ ಎಸ್‌. ಸುವರ್ಣ ಹೇಳುತ್ತಾರೆ.

ಆರ್ಥಿಕ ಹೊಡೆತ: ಕರಾವಳಿಯಲ್ಲಿ ಆರ್ಥಿಕತೆಗೆ ಬಹುದೊಡ್ಡ ಪಾಲು ಮೀನುಗಾರಿಕೆ. ಪ್ರತೀ ದಿನ ಕೋಟ್ಯಂತರ ವಹಿವಾಟು ಮಲ್ಪೆ ಹಾಗೂ ಮಂಗಳೂರು ಬಂದರಿನಲ್ಲೇ ನಡೆಯುತ್ತದೆ. ಲಕ್ಷಾಂತರ ಮಂದಿ ಮೀನುಗಾರಿಕೆಯನ್ನೇ ಅವಲಂಬಿಸಿ ದ್ದಾರೆ. ಮೀನುಗಾರಿಕೆ ಯೊಂದಿಗೆ ಹೊಟೇಲ್‌, ಐಸ್‌ ಪ್ಲಾಂಟ್‌, ಆಟೋ, ಟೆಂಪೋಗಳೆಲ್ಲ ಅವಲಂಬಿಸಿವೆ. ಉತ್ತಮ ಮೀನುಗಾರಿಕೆ ನಡೆದಾಗ ಆರ್ಥಿಕ ಓಡಾಟವೂ ಚೆನ್ನಾಗಿ ನಡೆಯುತ್ತದೆ. ಸದ್ಯ ಮೀನುಗಾರಿಕೆ ಸ್ಥಗಿತದಿಂದ ಆರ್ಥಿಕತೆಗೆ ದೊಡ್ಡಹೊಡೆತ ಬಿದ್ದಿದೆ.

ಅಕ್ಟೋಬರ್‌ 10ರಿಂದ ಮೀನಿನ ಇಳುವರಿ ಕಡಿಮೆಯಾಗಿದೆ. ಈ ಬಾರಿ ಮಳೆ ಕಡಿಮೆಯಾಗಿದ್ದು ಪೂರಕವಾದ ತೂಫಾನ್‌ ಬಂದಿಲ್ಲ. ಸಮುದ್ರದ ನೀರಿನ ತಾಪಮಾನ, ಮಳೆಗಾಲದ ಪ್ರತಿಕೂಲ ಹವಾಮಾನದಿಂದಾಗಿ ಎಲ್ಲಡೆ ಮೀನಿನ ಲಭ್ಯತೆ ಕಡಿಮೆಯಾಗಿದೆ.
-ಸುಭಾಸ್‌ಮೆಂಡನ್‌,
ಅಧ್ಯಕ್ಷರು, ಡೀಪ್‌ಸೀ ಫಿಶರ್‌ವೆುನ್ಸ್‌ ಅಸೋಸಿಯಶನ್‌ ಮಲ್ಪೆ

Advertisement

ಸಮುದ್ರದ ನೀರಿನ ತಾಪ ಸಾಮಾನ್ಯವಾಗಿ 20ರಿಂದ 28 ಡಿಗ್ರಿ ಸೆ. ವರೆಗೆ ಇದ್ದರೆ ಮೀನಿನ ಸಮೂಹಕ್ಕೆ ಪೂರಕವಾಗಿರುತ್ತದೆ. ಆಗ ಮೀನುಗಳು ಸಮುದ್ರ ನೀರಿನ ಮೇಲ್ಭಾಗದಲ್ಲಿ ಸಂಚರಿಸುತ್ತವೆ. ಪ್ರಸ್ತುತ ನೀರಿನ ಉಷ್ಣಾಂಶ 30ರಿಂದ 32 ಡಿಗ್ರಿ ಸೆ. ವರೆಗೆ ಇದೆ. ಇದರ ಪರಿಣಾಮ ಮೀನುಗಳು ಶೀತ ಪ್ರದೇಶವನ್ನು ಅರಸುತ್ತಾ ಹೋಗುವ ಸಾಧ್ಯತೆ ಇದೆ.
– ಡಾ| ಶಿವಕುಮಾರ್‌ ಹರಗಿ, ಕಡಲ ಜೀವಶಾಸ್ತ್ರದ ಪ್ರಾಧ್ಯಾಪಕ, ಕಾರವಾರ

Advertisement

Udayavani is now on Telegram. Click here to join our channel and stay updated with the latest news.

Next