Advertisement

ವ್ಯವಸ್ಥಿತ ಮಾರುಕಟ್ಟೆ ಇದ್ದರೂ ರಸ್ತೆ ಬದಿಯೇ ಮೀನು ವ್ಯಾಪಾರ 

06:37 AM Jan 10, 2019 | |

ಕುಂಬಳೆ : ಕುಂಬಳೆ ಮೀನು ಮಾರುಕಟ್ಟೆ ಸದಾ ವಿವಾದದ ಸುದ್ದಿಯಲ್ಲಿರುತ್ತದೆ. ಪೊಲೀಸ್‌ ಠಾಣೆಯ ಬಳಿಯಲ್ಲಿರುವ ಹಳೆಯ ಮಾರುಕಟ್ಟೆಗೆ ಬದಲಾಗಿ ಹೊಸ ಕಟ್ಟಡವನ್ನು ಸ್ಥಳೀಯಾಡಳಿತದ ವತಿಯಿಂದ ನಿರ್ಮಿಸಿ ಕೊಡಲಾಗಿದೆ. ಆದರೆ ಈ ಕಟ್ಟಡದೊಳಗೆ ವ್ಯಾಪಾರ ಮಾಡಲು ಬೆಸ್ತರು ಸಿದ್ಧರಿಲ್ಲ.

Advertisement

ಬೆಳಗ್ಗೆ ಸ್ವಲ್ಪಹೊತ್ತು ಈ ಕಟ್ಟಡದೊಳಗೆ ವ್ಯಾಪಾರ ನಡೆಸುವ ಮೀನುಗಾರರು ಮಧ್ಯಾಹ್ನವಾಗುತ್ತಲೇ ಮೀನಿನ ಬುಟ್ಟಿ ಹಿಡಿದು ಹೊರಗಿನ ಇಂಟರ್‌ಲಾಕ್‌ ಬೀದಿಗಿಳಿಯುತ್ತಾರೆ. ಬಳಿಕ ಸಂಜೆ ತನಕ ರಸ್ತೆಯಲ್ಲೇ ವ್ಯಾಪಾರ. ಮೀನಿನ ಕುಕ್ಕೆಯ ನೀರು ಪ್ಲಾಸ್ಕಿಕ್‌ ತೊಟ್ಟೆಗಳು ರಸ್ತೆಯಲ್ಲಿ ಹರಿದು ರಸ್ತೆ ಪೂರ್ತಿ ಗಲೀಜಾಗುತ್ತದೆ. ಇದರಿಂದ ಸುತ್ತಮುತ್ತಲೂ ದುರ್ನಾತ ಬೀರುತ್ತಿದೆ.

ಹಿಂದಿನ ಮತ್ತು ಇಂದಿನ ಕುಂಬಳೆ ಗ್ರಾಮ ಪಂಚಾ ಯತ್‌ ಆಡಳಿತ ಪೊಲೀಸರ ನೆರವಿನಿಂದ ಈ ವ್ಯಾಪಾರಕ್ಕೆ ಕಡಿವಾಣ ಹಾಕಲು ಹಲವುಬಾರಿ ಪ್ರಯತ್ನಿಸಿದರೂ ಇದು ಫಲಕಾರಿಯಾಗಿಲ್ಲ. ಹಿಂದೊಮ್ಮೆ ಅಧಿಕಾರದಲ್ಲಿದ್ದ ಕುಂಬಳೆ ಸಿ.ಐ. ಅವರು ಪೊಲೀಸ್‌ ಠಾಣೆ ರಸ್ತೆ ಬದಿಯಲ್ಲಿ ಮೀನು ವ್ಯಾಪಾರ ನಡೆಸುತ್ತಿರುವ ಬೆಸ್ತರಿಗೆ ತೆರವುಗೊಳಿಸಲು ಹಲವುಬಾರಿ ಆಜ್ಞಾಪಿಸಿದರೂ ಕದಲದ ಇವರ ಮೀನು ತುಂಬಿದ ಬುಟ್ಟಿಗೆ ಒಂದುದಿನ ಸೀಮೆ ಎಣ್ಣೆ ಚೆಲ್ಲಿದ್ದರು. ಬೆತ್ತ ಬೀಸಲು ಮುಂದಾಗಿದ್ದರು. ಬಳಿಕ ಬೆಸ್ತರು ಬಿಟ್ಟು ಓಡಿದ ಮೀನುಗಳ ಬುಟ್ಟಿಗಳನ್ನು ಠಾಣೆಗೆ ಒಯ್ದು ಠಾಣೆಯ ಮುಂದೆ ನೆಟ್ಟಿದ್ದ ತೆಂಗಿನ ಮರದ ಬುಡಕ್ಕೆ ಹಾಕಿದ್ದರು. ಆದರೆ ಸೀಮೆ ಎಣ್ಣೆ ಮಿಶ್ರಿತ ಮೀನುಗಳಿದಿಂದ ಹುಲುಸಾಗಿ ಬೆಳೆದಿದ್ದ ತೆಂಗಿನ ಮರಗಳೆಲ್ಲವೂ ಸತ್ತು ಹೋಗಿ ಸಿ.ಐ. ಅವರು ಪಶ್ಚಾತ್ತಾಪ ಹೊಂದಿದ್ದರು. ಆದರೆ ಆ ಬಳಿಕ ಅಪಘಾತದಲ್ಲಿ ಮಡಿದ ಈ ದಕ್ಷ ಅಧಿಕಾರಿಯವರ ಆಸೆ ಕೊನೆಗೂ ಈಡೇರಿಸಲು ಸಾಧ್ಯವಾಗಿಲ್ಲ. ಮುಂದೆ ಅಧಿಕಾರ ವಹಿಸಿದ ಪೊಲೀಸ್‌ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತ್ತು ಸ್ಥಳೀಯಾಡಳಿತದ ಮೃದು ನಿಲುವಿನಿಂದ ಮೀನು ಮಾರ್ಕೆಟಿನ ಈ ಅವ್ಯವಸ್ಥೆ ಇಂದಿಗೂ ಹಿಂದಿನಂತೆಯೇ ಮುಂದುವರಿಯುತ್ತಿದೆ. ನಿತ್ಯ ಸಂಜೆ ವರೆಗೆ ರಸ್ತೆಯಲ್ಲೇ ವ್ಯಾಪಾರ ನಡೆಯುತ್ತಿದೆ. ವ್ಯಾಪಾರದ ಮಧ್ಯೆ ಈ ರಸ್ತೆಯಲ್ಲಿ ವಾಹನಗಳು ಆಗಮಿಸಿದಾಗ ರಸ್ತೆ ಬ್ಲಾಕ್‌ ಆಗುವುದು. ಇದರಿಂದ ರಸ್ತೆಯಲ್ಲಿ ಸಂಚಾರಕ್ಕೆೆ ತೊಡಕಾಗಿದೆ.

ಕ್ರಮ ಕೈಗೊಳ್ಳಲಾಗುವುದು
2015ರಲ್ಲಿ ಆರು ತಿಂಗಳಲ್ಲಿ ಮಾರುಕಟ್ಟೆಯೊಳಗೆ ವ್ಯಾಪಾರ ನಡೆಸಬೇಕೆಂದು ಆದೇಶಿಸಿದರೂ ಇದಕ್ಕೆ ಮುಂದಾಗದಾಗ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಯಿತು. ಆದರೆ ವ್ಯಾಪಾರಿಗಳು ಬಡವ ರಾದ ನಮ್ಮ ಮೇಲೆ ಕರುಣೆ ತೋರಬೇಕೆಂದು ಅಲವತ್ತು ಕೊಂಡಾಗ ಇವರಿಗೆ ಸಮಯಾವಕಾಶ ನೀಡಿದರೂ ರಸ್ತೆಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಇಂಟರ್‌ಲಾಕ್‌ ರಸ್ತೆ ಮಲಿನವಾಗುತ್ತಿರುವ ಕಾರಣ ಮುಂದೆ ಮಾಲಿನ್ಯ ತಡೆಗಾಗಿ ಬಿಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮುಂದಿನ ವರ್ಷದ ಯೋಜನೆಯಲ್ಲಿ ಮಾರುಕಟ್ಟೆಯ ನವೀಕರಣಕ್ಕೆ 5 ಲಕ್ಷ ರೂ. ನಿಧಿ ಮೀಸಲಿರಿಸಲಾಗಿದೆ. 
-ಪುಂಡರೀಕಾಕ್ಷ ಕೆ.ಎಲ್‌.
ಅಧ್ಯಕ್ಷರು ಗ್ರಾಮ ಪಂಚಾಯತ್‌

ವ್ಯವಸ್ಥಿತ ಮಾರುಕಟ್ಟೆಯಿಲ್ಲ
ನಮ್ಮ ಬೇಡಿಕೆಯಂತೆ ಮೀನು ಮಾರುಕಟ್ಟೆ ಯನ್ನು ವ್ಯಾಪಾರಕ್ಕೆ ಸಜ್ಜುಗೊಳಿಸಿಲ್ಲ. ಸರಿಯಾದ ಶೌಚಾಲಯವಿಲ್ಲ. ಇದು ಪದೇಪದೇ ತುಂಬುತ್ತದೆ.ಮೀನಿನ ಮಲಿನ ನೀರು ಹರಿಯಲು ಕಾಲುವೆ ಇಲ್ಲ. ಇದರಿಂದಲಾಗಿ ಮೀನು ಖರೀದಿಸು ವವರು ಮಾರುಕಟ್ಟೆಯೊಳಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದುದರಿಂದ ಸ್ವಲ್ಪ ಹೊತ್ತು ಅನಿವಾರ್ಯವಾಗಿ ಹೊರಗೆ ಬೀದಿಯಲ್ಲಿ ಮೀನು ಮಾರಾಟಮಾಡಬೇಕಾಗಿದೆ. ಗ್ರಾಮ ಪಂಚಾಯತ್‌ ವತಿಯಿಂದ ವ್ಯವಸ್ಥಿತ ಮಾರುಕಟ್ಟೆ ರಚನೆಯಾದಲ್ಲಿ ಮಾರುಕಟ್ಟೆಯೊಳಗೇ ಮಾರಲಾಗುವುದು. 
-ಮೀನು ವ್ಯಾಪಾರಿಗಳು,
 ಕುಂಬಳೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next