Advertisement

ಪಿಲಿಕುಳ: ಮೀನುಪ್ರಿಯರ ಮನಸೆಳೆದ ಮತ್ಸ್ಯೋತ್ಸವ

02:05 AM Jul 17, 2017 | Team Udayavani |

ಮಂಗಳೂರು: ಕೆರೆಯಿಂದ ಆಗತಾನೆ ಹಿಡಿದ ಮೀನುಗಳನ್ನು ನೇರ ಖರೀದಿಸುವ ಅವಕಾಶ, ಸಮುದ್ರದ ತಾಜಾ ಮೀನುಗಳ ವಿವಿಧ ಖಾದ್ಯಗಳನ್ನು ಸ್ಥಳದಲ್ಲೇ ತಯಾರಿಸಿ ಮಾರಾಟ, ಸಮುದ್ರ ಮೀನುಗಳ ಹಾಗೂ ಮೀನಿನ ಮೌಲ್ಯವರ್ಧಿತ ಉತ್ಪನ್ನ, ಅಲಂಕಾರಿಕಾ ಮೀನುಗಳ ಪ್ರದರ್ಶನ, ಮಾರಾಟ ಪಿಲಿಕುಳದ ಡಾ| ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ರವಿವಾರ ಆಯೋಜಿಸಿದ್ದ ಪಿಲಿಕುಳ ಮತ್ಸ್ಯೋತ್ಸವ ಹಾಗೂ ಕ್ಷೇತ್ರೋತ್ಸವ ಮೀನು ಪ್ರಿಯರ, ಸಾರ್ವಜನಿಕರ ಮನ ಸೆಳೆಯಿತು. ಕರ್ನಾಟಕ ಮೀನುಗಾರಿಕಾ ಇಲಾಖೆ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಹಾಗೂ ಪಿಲಿಕುಳ ಡಾ| ಶಿವರಾಮ ಕಾರಂತ ನಿಸರ್ಗಧಾಮದ ಜಂಟಿ ಆಶ್ರಯದಲ್ಲಿ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement

ಮೀನು ಹಿಡಿದು ಸ್ಥಳದಲ್ಲೇ ಹರಾಜು
ಪಿಲಿಕುಳದ ದೋಣಿ ವಿಹಾರ ಕೆರೆಯಲ್ಲಿ ಬೆಳೆಸಲಾಗಿದ್ದ ಕಾಟ್ಲಾ, ರೋಹ, ಮುರುಗಲ್‌ ಮೀನುಗಳನ್ನು ಸಾರ್ವಜನಿಕರ ಸಮ್ಮುಖದಲ್ಲೇ ಬಲೆಯಿಂದ ತೆಗೆದು ಹರಾಜು ಹಾಕಲಾಯಿತು. 5 ರಿಂದ 10 ಕಿಲೋ ತೂಕದವರೆಗಿನ ಮೀನುಗಳಿದ್ದು, ಕಿಲೋಗೆ ಕನಿಷ್ಠ 150 ರೂ.ನಿಂದ ಪ್ರಾರಂಭವಾಗಿ ಹರಾಜು ನಡೆಯಿತು. 2 ವರ್ಷಗಳ ಹಿಂದೆ ಕೆರೆಯಲ್ಲಿ ಬಿಡಲಾಗಿದ್ದ ಮೀನುಮರಿಗಳು ಬೆಳೆದಿದ್ದು, ಇವುಗಳನ್ನು ರವಿವಾರ ಬಲೆ ಹಾಕಿ ಹಿಡಿದು ಮಾರಾಟ ಮಾಡಲಾಯಿತು. ಒಂದೊಂದು ಮೀನು 600 ರಿಂದ 700 ರೂ. ವರೆಗೆ ಮಾರಾಟವಾಯಿತು.

ಅಲಂಕಾರಿಕಾ ಮೀನುಗಳ ಆಕರ್ಷಣೆ
ಕರ್ನಾಟಕ ಮೀನುಗಾರಿಕಾ ಕಾಲೇಜಿನ ವತಿಯಿಂದ ಅಲಂಕಾರಿಕಾ ಮೀನು ಮರಿಗಳ  ಪ್ರದರ್ಶನ ಹಾಗೂ ಮಾರಾಟ ಆಯೋಜಿಸಲಾಗಿತ್ತು. ವಿವಿಧ ಜಾತಿಯ ಮೀನುಮರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಯಿತು. ಮೀನು ಸಂತತಿ ವೃದ್ಧಿಸುವ ನಿಟ್ಟಿನಲ್ಲಿ ಕೆರೆಗೆ ಹೊಸದಾಗಿ ಮೀನಿನ ಮರಿಗಳನ್ನು ಬಿಡಲಾಯಿತು. ರೋಟರಿ ಕ್ಲಬ್‌ ಮಂಗಳೂರು ಇದಕ್ಕೆ ಪ್ರಾಯೋಜಕತ್ವ ನೀಡಿತ್ತು. ಪ್ರವಾಸಿಗರಿಗಾಗಿ ದೋಣಿ ವಿಹಾರ ಕಲ್ಪಿಸಲಾಗಿತ್ತು.

ರಾಜ್ಯ ಮೀನುಗಾರಿಕಾ ಹಾಗೂ ಯುವ ಜನ ಖಾತೆ ಸಚಿವ  ಪ್ರಮೋದ್‌ ಮಧ್ವರಾಜ್‌ ಮತ್ಸ್ಯೋತ್ಸವವನ್ನು ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕರಾದ ಅಭಯಚಂದ್ರ ಜೈನ್‌, ಜೆ.ಆರ್‌. ಲೋಬೋ, ವಿಧಾನ ಪರಿಷತ್‌ ಮುಖ್ಯ ಸಚೇತಕ  ಐವನ್‌ ಡಿ’ಸೋಜಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ  ಶಾಂತಿಗೋಡು, ಮೂಡುಶೆಡ್ಡೆ  ಗ್ರಾ.ಪಂ. ಅಧ್ಯಕ್ಷ  ಹರಿ ಪ್ರಸಾದ್‌ ಶೆಟ್ಟಿ, ಮೀನುಗಾರಿಕಾ ನಿಗಮದ ಅಧ್ಯಕ್ಷ  ವಿ.ಕೆ. ಶೆಟ್ಟಿ, ರೋಟರಿ ಕ್ಲಬ್‌ ಮಂಗಳೂರು ಅಧ್ಯಕ್ಷ  ವಸಂತ್‌ ಶೆಣೈ, ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ, ಜೈವಿಕ ಉದ್ಯಾನದ ಜಯಪ್ರಕಾಶ್‌ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.


ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ

ಕರ್ನಾಟಕ ಮೀನುಗಾರಿಕಾ ನಿಗಮದ ವತಿಯಿಂದ ತಯಾರಿಸಲಾಗಿದ್ದ ಮೀನುಗಳ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಆಯೋಜಿಸಲಾಗಿತ್ತು. ಮೀನಿನ ಚಟ್ನಿ ಪುಡಿ, ಸಿಗಡಿಯ ಉಪ್ಪಿನಕಾಯಿ, ವೇವ್ಸ್‌, ಒಣಗಿಸಿದ ಬಂಗುಡೆ ಮೀನು ಒಂದೆಡೆಯಾದರೆ ಇನ್ನೊಂದೆಡೆ ಮೀನಿನ ಕಟ್ಲೆಟ್‌, ಸಿಗಡಿ ಪಾಪ್‌ಕಾರ್ನ್, ಮೀನಿನ ಸಮೋಸ, ಫಿಶ್‌ ಕಬಾಬ್‌ಗಳು, ಮೀನು ಬಿರಿಯಾನಿ, ಸಿಗಡಿ ಬಿರಿಯಾನಿ, ಮೀನಿನ ಸಾಸೆಜ್‌ ಗಮನ ಸೆಳೆಯಿತು. ಬಿಳಿ ಮಾಂಜಿ, ಕಾಣೆ, ಮಾಲ, ಅಂಜಲ್‌, ನಂಗ್‌, ಬಂಗುಡೆ, ಮೆಲುಗು, ನಂಗ್‌, ಬೊಳೆಂಜಿರ್‌ ಫ್ತೈಗಳನ್ನು ಸ್ಥಳದಲ್ಲೇ ತಯಾರಿಸಿ ಗ್ರಾಹಕರಿಗೆ ನೀಡಲಾಗುತ್ತಿತ್ತು. ಇದಲ್ಲದೆ ಸಮುದ್ರ ಮೀನುಗಳ ಮಾರಾಟವೂ ಇತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next