ಕೋವಿಡ್ ಕಾರಣಕ್ಕೆ ಎಲ್ಲೂ ಕೆಲಸ ಸಿಗುವುದಿಲ್ಲ ಎಂದು ಖಚಿತವಾದಾಗ ತಮ್ಮದೇ ಸ್ವಂತ ಉದ್ಯಮ ಆರಂಭಿಸಿ ಗೆದ್ದ ಸಾಹಸೀ ಯುವಕರ ಯಶೋಗಾಥೆ ಇದು…
ಕೋವಿಡ್ ಕಾರಣದಿಂದ ಅಣ್ಣನಿಗೆ ಇದ್ದ ಇಂಜಿನಿಯರ್ ನೌಕರಿಯೂ ಹೋಯ್ತು. ಆಗಷ್ಟೇ ಇಂಜಿನಿಯರಿಂಗ್ ಮುಗಿಸಿದ್ದ ತಮ್ಮನಿಗೆ ನೌಕರಿ ಸಿಗಲಿಲ್ಲ. ಇಂಥ ಸಂದರ್ಭದಲ್ಲಿ ತಾವೇ ಉದ್ಯಮಿಗಳಾಗಲು ಯೋಚಿಸಿ, ಮೀನು ವ್ಯಾಪಾರಕ್ಕೆ ಮುಂದಾಗಿ, ಆ ಪ್ರಯತ್ನದಲ್ಲಿ ಗೆದ್ದ ರಿಷಭ್ -ಕಾರ್ತಿಕ್ ಎಂಬ ಇಬ್ಬರು ಸೋದರರ ಯಶಸ್ಸಿನ ಕಥೆ ಇಲ್ಲಿದೆ.
ಈ ಇಬ್ಬರೂ ಮೈಸೂರಿನ ನಿವಾಸಿಗಳು. ಇವರ ತಂದೆ ಬಿಇಎಂಎಲ್‌ನ ನಿವೃತ್ತ ಉದ್ಯೋಗಿ.ಕಾರ್ತಿಕ್‌ಗೆ ಮಿತ್ಸುಭಿಷಿ ಕಂಪನಿಯಲ್ಲಿ ಇಂಜಿನಿಯರ್ ಕೆಲಸವಿತ್ತು. ರಿಷಭ್, ಕುಂದಾಪುರಬಳಿಯ ಮೂಡ್ಲಕಟ್ಟೆಯಲ್ಲಿ, ಅಲ್ಲಿದ್ದ ಗೆಳೆಯ ಮೋನು ಮನೆಯಲ್ಲಿದ್ದುಕೊಂಡು ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಮಗಿಸಿ, ಕೆಲಸಕ್ಕೆ ಸೇರುವ ಕನಸು ಹೊತ್ತು ಊರಿನತ್ತ ಪ್ರಯಾಣ ಬೆಳೆಸಿದ್ದ. ಈ ಸಂದರ್ಭದಲ್ಲಿ ಕೋವಿಡ್ ಕಾರಣಕ್ಕೆ ದೇಶಾದ್ಯಂತ ಮೊದಲು ಲಾಕ್‌ಡೌನ್ ಘೋಷಣೆಯಾಯಿತು. ಕೆಲವು ದಿನಗಳ ನಂತರ ಕಾರ್ತಿಕ್‌ಗೆ ಇದ್ದ ನೌಕರಿಯೂ ಹೋಯಿತು.
ಸದ್ಯಕ್ಕಂತೂ ಎಲ್ಲಿಯೂ ನೌಕರಿ ಸಿಗುವುದಿಲ್ಲ ಎಂದು ಗೊತ್ತಾದಾಗ ತಾವೇ ಏನಾದರೂ ಮಾಡಬಾರದೇಕೆ ಎಂಬ ಯೋಚನೆ ಈ ಸೋದರರಿಗೆ ಬಂತು. ಮೈಸೂರು ಭಾಗದಲ್ಲಿ ಬಹಳ ಬೇಡಿಕೆ ಇದೆ. ಮೀನು ವ್ಯಾಪಾರಕ್ಕೆ ನಾವು ಮುಂದಾಗಬಾರದೇಕೆ ಎಂದು ರಿಷಭ್ ತನ್ನ ಅಣ್ಣನ ಜೊತೆ ಚರ್ಚಿಸಿದ. ನಂತರ ಇದೇ ವಿಷಯವನ್ನು ಕುಟುಂಬದ ಜೊತೆಯೂ ಚರ್ಚಿಸಿದಾಗ, ಈ ಸೋದರರ ತಂದೆ- “ಒಳ್ಳೆಯ ಐಡಿಯಾ, ಮುಂದುವರಿಯಿರಿ’ ಅಂದರು. ಕುಂದಾಪುರದ ಸ್ನೇಹಿತ ಮೋನು ಅವರ ಸಹಾಯ ಪಡೆದು ಈ ಸೋದರರು ಮೀನು ವ್ಯಾಪಾರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದರು.
ಮೊದಲು ಒಂದು ಬೊಲೆರೋ ವಾಹನ ಖರೀದಿಸಿದರು. ನಂತರ ಒಂದು ವ್ಯಾಟ್ಸಾéಪ್ ಗ್ರೂಪ್ ರಚಿಸಿಕೊಂಡು 18 ಮಂದಿಯ ಗ್ರಾಹಕರ ಪಟ್ಟಿ ಮಾಡಿಕೊಂಡರು. ಬೋಟ್‌ನಲ್ಲಿ ಬರುವ ಮೀನುಗಳ ಬಗ್ಗೆ ಮಾಹಿತಿ ಕಲೆಹಾಕಿ, ಗ್ರಾಹಕರಿಗೆ ಮಾಹಿತಿ ನೀಡಿ, ಅವರಿಂದ ಬೇಡಿಕೆ ಬಂದಾಗ ತಾಜಾ ಮೀನನ್ನೇ ಸರಬರಾಜು ಮಾಡುವುದು ಇವರ ಉದ್ಯೋಗವಾಯಿತು. ಪ್ರಾರಂಭದಲ್ಲಿ ಗ್ರಾಹಕರು ಕಡಿಮೆಯಾಗಿ ಖರ್ಚು ಹೆಚ್ಚಾಗಿ, 10-12 ಸಾವಿರದವರೆಗೆ ಲಾಸ್ ಆಯಿತು. ಆದರೂ ಎದೆಗುಂದದ ಇವರು ತಂದೆ ಅಮರ್‌ನಾಥ್ ಹಾಗೂ ಮೈಸೂರಿನ ಸ್ನೇಹಿತರ ಸಹಕಾರ ಪಡೆದು 3 ತಿಂಗಳಿನಲ್ಲೇ ಮಡಿಕೇರಿ, ಕುಶಾಲನಗರ, ಹುಣಸೂರು, ಮೈಸೂರಿನಲ್ಲಿರುವ 600 ಮಂದಿಯ ಗ್ರೂಪ್ ರಚಿಸಿಕೊಂಡಿದ್ದಾರೆ. ಕುಂದಾಪುರ, ಮಲ್ಪೆ, ಮಂಗಳೂರು ಬೀಚ್‌ಗಳಲ್ಲಿ ಬೋಟ್‌ನವರ ಸಂಪರ್ಕವಿಟ್ಟುಕೊಂಡು ವಾರಕ್ಕೆರಡು ಬಾರಿ 40-50 ಸಾವಿರಕ್ಕೆ ಮೀನು ಖರೀದಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಮೀನು ಖರೀದಿಸಿದ ನಂತರ ತಮ್ಮ ಬಳಿ ಯಾವ್ಯಾವ ವೆರೈಟಿ ಮೀನಿದೆ ಎಂಬುದನ್ನು ಗ್ರೂಪ್‌ಗೆ ಅಪ್‌ಲೋಡ್ ಮಾಡುತ್ತಾರೆ. ಮಡಿಕೇರಿಗೆ ಬರುವಷ್ಟರಲ್ಲಿ ಬೇಡಿಕೆ ಪಟ್ಟಿಯೂ ರೆಡಿಯಾಗಿ
ರುತ್ತದೆ. ಒಂದು ಕಡೆಯಿಂದ ಮನೆಗಳ ಬಳಿಗೆ ಹೋಗಿ ಮಾರಾಟ ಮಾಡಿಕೊಂಡು ಮೈಸೂರು ಸೇರುತ್ತಾರೆ. ಉಳಿದದ್ದನ್ನು ಸಂಜೆ ವೇಳೆ ಮೈಸೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾರುತ್ತಾರೆ. ವಾರಕ್ಕೆರಡು ಬಾರಿ ಮೀನು ವ್ಯಾಪಾರ ನಡೆಸುವ ಈ ಮೂವರ ಜೋಡಿ, ತಿಂಗಳಿಗೆ ಖರ್ಚು ಕಳೆದು 60 ಸಾವಿರ ಸಂಪಾದಿಸುತ್ತಿದೆ.
ಮನೆ ಮುಂದೆ ಹೋಗಿ ಮೀನು ಸಾರ್, ಸಮುದ್ರದ ಮೀನು ಎಂದರೂ ಒಂದು ಸಂದರ್ಭದಲ್ಲಿ ನಮ್ಮನ್ನು ಕೇಳುವವರೇ ಇರಲಿಲ್ಲ. ಆದರೀಗ ಸಮುದ್ರದ ಮೀನಿನ ಸವಿ ಉಂಡವರು ನಿತ್ಯ ಫೋನ್ ಮಾಡಿ ವಿಚಾರಿಸುತ್ತಿದ್ದಾರೆ. ಸಮುದ್ರದ ಮೀನುಗಳಾದ ಬಂಗುಡೆ, ಮತ್ತಿ, ವೈಟ್ ಪಾಂಫ್ರೆಟ್, ಕ್ರ್ಯಾಬ್, ಬೋಂಡಾ, ಕಾಣೆ, ನಂಗ್ ಸೇರಿದಂತೆ ಬಗೆಬಗೆಯ ಫ್ರೆಶ್ ಮೀನುಗಳು ಸಿಗುವುದರಿಂದ ಗ್ರಾಹಕರು ವಾಟ್ಸಾಪ್‌ನಲ್ಲೇ ಬೇಡಿಕೆ ಸಲ್ಲಿಸುತ್ತಿದ್ದಾರೆ. ಕಷ್ಟಪಟ್ಟು ಎಂಜಿನಿಯರಿಂಗ್ ಕಲಿತೆವು, ಕೋವಿಡ್ ದಿಂದಾಗಿ ಇಷ್ಟಪಟ್ಟು ಮೀನು ವ್ಯಾಪಾರಿಗಳಾಗಿದ್ದೇವೆ.
– ರಿಷಭ್
– ಸಂಪತ್ ಕುಮಾರ್