“ಒಬ್ಬಳು ಆರ್ಟಿಸ್ಟ್ ಆರತಿ, ಮತ್ತೊಬ್ಬಳು ಮೀಟ್ರಾ ಮಂಜುಳ, ಇನ್ನೊಬ್ಬಳು ಬಾಯºಡುಕಿ ಭವ್ಯಾ, ಮಗದೊಬ್ಬಳು ಸುಳ್ಳಿ ಸುಜಾತ…’
– ಇಷ್ಟು ಹೇಳಿದ ಮೇಲೆ ಇದೊಂದು ಪಕ್ಕಾ ಗಂಡುಬೀರಿ ಹುಡುಗಿಯರ ಕಥೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೌದು, ಇದು ನಾಯಕಿಯರ ಪ್ರಧಾನ ಚಿತ್ರ. ಹೆಸರು “ಪುಣ್ಯಾತ್‌ಗಿತ್ತೀರು’. ಹೆಸರಲ್ಲೇ ಎಲ್ಲವೂ ಇದೆ. ಹಾಗಂತ, ಇನ್ನೇನೋ ಕಲ್ಪನೆ ಮಾಡಿಕೊಳ್ಳೋದು ಬೇಡ. ಇದೊಂದು ಸಮಾಜಕ್ಕೆ ಸಂದೇಶ ಸಾರುವ ಚಿತ್ರ. ಹಾಗಂತ ದೊಡ್ಡ ಸಂದೇಶ ಸಾರದಿದ್ದರೂ, ನಮ್ಮ ನಡುವಿನ ಸತ್ಯಘಟನೆಗಳನ್ನು ವಿವರಿಸುವಂತಹ ಚಿತ್ರ. ಈ ಚಿತ್ರಕ್ಕೆ ರಾಜು ಬಿ.ಎನ್. ನಿರ್ದೇಶಕರು. ಸತ್ಯನಾರಾಯಣ ಮನ್ನೆ ನಿರ್ಮಾಪಕರು. ಚಿತ್ರ ಪೂರ್ಣಗೊಂಡಿದ್ದು, ಇನ್ನೇನು ಎಲ್ಲವೂ ಅಂದುಕೊಂಡಂತೆ ನಡೆದರೆ, ನವೆಂಬರ್ ಅಂತ್ಯ ಇಲ್ಲವೇ ಡಿಸೆಂಬರ್ ಮೊದಲ ವಾರದಲ್ಲಿ ತೆರೆಗೆ ಬರಲಿದೆ. ಇತ್ತೀಚೆಗೆ ಚಿತ್ರದ ಹಾಡಿನ ತುಣುಕು ಮತ್ತು ಟ್ರೇಲರ್ ತೋರಿಸುವ ಮೂಲಕ ಚಿತ್ರದ ಮಾಹಿತಿ ಹಂಚಿಕೊಳ್ಳಲೆಂದು ತಂಡದೊಂದಿಗೆ ಮಾಧ್ಯಮ ಮುಂದೆ ಬಂದಿದ್ದರು ನಿರ್ದೇಶಕ ರಾಜು ಬಿ.ಎನ್.
ಮೊದಲು ಮಾತಿಗಿಳಿದ ರಾಜು ಹೇಳಿದ್ದಿಷ್ಟು. “ಮೊದಲರ್ಧ ಚಿತ್ರ ನೋಡುವಾಗ, ಈ ನಾಯಕಿಯರನ್ನು ಬೈಯೋರ ಸಂಖ್ಯೆ ಜಾಸ್ತಿ. ಅದೇ ದ್ವಿತಿಯಾರ್ಧದಲ್ಲಿ ಬೈಯ್ದವರೇ ಹೊಗಳುವುದು ಗ್ಯಾರಂಟಿ. ಇಲ್ಲಿ ನಾಲ್ವರು ಹುಡುಗಿಯರು, ತಮ್ಮ ಬದುಕಿಗಾಗಿ ಹೋರಾಡುತ್ತಾರೆ. ತಮಗೆ ಅವಮಾನ ಆದಾಗ ಸಿಡಿದೇಳುತ್ತಾರೆ, ಪಕ್ಕಾ ಮಾಸ್ ಅಂಶಗಳೊಂದಿಗೆ ಚಿತ್ರ ಮಾಡಿದ್ದೇನೆ. ಇದೊಂದು ಮನರಂಜನೆ ಜೊತೆಗೆ ಬದುಕಿನ ಮೌಲ್ಯ, ವಾಸ್ತವತೆಯ ಸ್ಥಿತಿಯನ್ನು ಬಿಂಬಿಸುವ ಚಿತ್ರ. ನಾಯಕಿಯರೆಲ್ಲರೂ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕಿ, ಸಹಕರಿಸಿದ್ದರಿಂದಲೇ ಚಿತ್ರ ನಿರೀಕ್ಷೆ ಮೀರಿ ಮೂಡಿಬಂದಿದೆ’ ಎಂದು ವಿವರ ಕೊಟ್ಟರು ರಾಜು.
ನಿರ್ಮಾಪಕ ಸತ್ಯನಾರಾಯಣ ಮನ್ನೆ ಅವರಿಗೆ ಇದು ಮೊದಲ ಅನುಭವ. ಕಥೆ ಕೇಳಿದ ಕೂಡಲೇ, ಸಮಾಜಕ್ಕೊಂದು ಸಂದೇಶ ಕೊಡುವ ಚಿತ್ರವಾಗಿದ್ದರಿಂದ ನಿರ್ಮಾಣಕ್ಕೆ ಮುಂದಾದರಂತೆ. ಇಲ್ಲಿ ನಾಲ್ವರು ನಾಯಕಿಯರ ಬದುಕು, ಬವಣೆ ಕಥೆ ಇದೆ. ಅವರೆಲ್ಲರೂ ಬದುಕಿಗಾಗಿ ಏನೆಲ್ಲಾ ಮಾಡ್ತಾರೆ ಎಂಬುದು ಕಥೆ. ಆರಂಭದಲ್ಲಿ ನಾಯಕಿಯರನ್ನು ಬೈದುಕೊಳ್ಳುವ ಜನರ, ದ್ವಿತಿಯಾರ್ಧದಲ್ಲಿ ಹೊಗಳುತ್ತಾರೆ. ಯಾಕೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು’ ಎಂಬುದು ನಿರ್ಮಾಪಕರ ಮಾತು.
ಮಮತಾ ರಾವತ್ ಇಲ್ಲಿ ಆರ್ಟಿಸ್ಟ್ ಆರತಿ ಪಾತ್ರ ಮಾಡಿದ್ದಾರೆ. ಅವರಿಗೆ ಈ ಚಿತ್ರದ ಪಾತ್ರ ನೆನಪಿಸಿಕೊಂಡರೆ, ಇಷ್ಟು ವರ್ಷಗಳಲ್ಲಿ ಮಾಡಿದ್ದಕ್ಕಿಂತಲೂ ಭಿನ್ನ ಎನಿಸುತ್ತದೆಯಂತೆ. ಸಿನಿಮಾ ರಂಗದಲ್ಲಿ ಆರ್ಟಿಸ್ಟ್ ಆರತಿ ಅವಕಾಶಕ್ಕಾಗಿ ಎಷ್ಟೊಂದು ಸ್ಟ್ರಗಲ್ ಮಾಡ್ತಾಳೆ. ಅವಳಿಗೆ ಒಂದು ಹಂತದಲ್ಲಿ ಅವಮಾನ ಆದಾಗ, ಹೇಗೆ ರಗಡ್ ಹುಡುಗಿಯಾಗ್ತಾಳೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ’ ಎನ್ನುತ್ತಾರೆ ಮಮತಾ. ದಿವ್ಯಾಶ್ರೀ ಇಲ್ಲಿ ಮೀಟ್ರಾ ಮಂಜುಳ ಪಾತ್ರ ಮಾಡಿದ್ದು, ಅವರು ಲಾಂಗ್ ಹಿಡಿದಿದ್ದಾರಂತೆ. ಅದೊಂದು ರೀತಿಯ ಟಾಮ್‌ಬಾಯ್ ಪಾತ್ರವಂತೆ. ಮೊದಲ ಚಿತ್ರದಲ್ಲೇ ಒಳ್ಳೇ ಅವಕಾಶ ಸಿಕ್ಕ ಖುಷಿ ಅವರದು. ಇನ್ನು, “ಜಂತರ್ ಮಂತರ್’ ಚಿತ್ರದಲ್ಲಿ ನಟಿಸಿದ್ದ ಸಂಭ್ರಮಶ್ರೀ, ಸುಳ್ಳಿ ಸುಜಾತ ಪಾತ್ರ ಮಾಡಿದ್ದಾರಂತೆ. ಲೈಫಲ್ಲಿ ಸುಳ್ಳು ಹೇಳಿ ಹೇಗೆಲ್ಲಾ ಯಾಮಾರಿಸುತ್ತಾಳೆ ಎಂಬ ಪಾತ್ರದ ಮೂಲಕ ಗಮನಸೆಳೆಯುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಇವರೊಂದಿಗೆ ಬಾಯºಡುಕಿ ಭವ್ಯಾ ಪಾತ್ರದಲ್ಲಿ ಐಶ್ವರ್ಯ ನಟಿಸಿದ್ದು, ಬರೀ ಬಜಾರಿಯಾಗಿ ಹುಡುಗಿಯಾಗಿ ಪಟ ಪಟ ಮಾತಾಡುವ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಶೋಭರಾಜ್, ಸುಧಿ, ಕುರಿ ರಂಗ ಇತರರು ನಟಿಸಿದ್ದಾರೆ.
ತ್ರಿಭುವನ್ ಎಲ್ಲಾ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಈ ಪುಣ್ಯಾತ್‌ಗಿತ್ತೀರು ಪುಂಡರ ಜೊತೆ ಯದ್ವಾ ತದ್ವಾ ಫೈಟ್ ಮಾಡಿದ್ದಾರೆ. ಶರತ್ ಛಾಯಾಗ್ರಹಣವಿದೆ. ರಾಮಾನುಜಂ ಸಂಗೀತವಿದೆ.