ಹೊಸದಿಲ್ಲಿ:ರಾಮನಾಥ ಕೋವಿಂದ್ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಲೇ ಪತ್ನಿ ಸವಿತಾ ಕೋವಿಂದ್ ದೇಶದ ಪ್ರಥಮ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ ಇತಿಹಾಸ ಗಮನಿಸಿದಾಗ ರಾಷ್ಟ್ರಪತಿಗಳ ಪತ್ನಿಯರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿರುವುದು ಅತಿ ವಿರಳ.
ಇದೀಗ ಪ್ರಥಮ ಮಹಿಳೆ ಸವಿತಾ ಕೋವಿಂದ್ ಕೂಡ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.
ನಿಕಟಪೂರ್ವ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪತ್ನಿ ಸುವ್ರಾ ಮುಖರ್ಜಿ ದೇಶಕ್ಕೆ ಪರಿಚಯವಾಗಿದ್ದು, 2015ರಲ್ಲಿ ಅವರು ನಿಧನ ಹೊಂದಿದಾಗ ಎಂಬುದು ವಿಪರ್ಯಾಸ. ರಾಷ್ಟ್ರಪತಿಗಳ ಪತ್ನಿಯರು ಸಾರ್ವಜನಿಕ ಜೀವನದಿಂದ ದೂರ ಉಳಿಯುವ ಪ್ರಕ್ರಿಯೆಗೆ ಇತಿಹಾಸವೇ ಇದೆ. ದೇಶದ ಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಪತ್ನಿ, ದೇಶದ ಮೊಟ್ಟಮೊದಲ ಪ್ರಥಮ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದ ರಾಜವಂಶಿ ದೇವಿ ಅವರು ಒಮ್ಮೆ ಕೂಡ ಪತಿ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಪ್ರಸಾದ್‌ರ ಅನಂತರ ದೇಶದ ಪ್ರಥಮ ಪ್ರಜೆ ಹುದ್ದೆ ಅಲಂಕರಿಸಿದ ಎಸ್.ರಾಧಾಕೃಷ್ಣನ್ ವಿಧುರರಾಗಿದ್ದರು.
ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್‌ರ ಪತ್ನಿ ಶಹಜಹಾನ್ ಬೇಗಂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಹೆಚ್ಚು ಜನರಿಗೆ ಪರಿಚಯವಿದ್ದ ಪ್ರಥಮ ಮಹಿಳೆ, ಮಾಜಿ ರಾಷ್ಟ್ರಪತಿ ವಿ.ವಿ.ಗಿರಿ ಪತ್ನಿ ಸರಸ್ವತಿ ಭಾಯಿ. ಮತ್ತು ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರ ಪತ್ನಿ ಬೇಗಂ ಅಬೀಬಾ ಅಹಮದ್ ಮಾತ್ರ.