Advertisement
ಯಾವುದೇ ಕ್ರೀಡಾ ಕ್ಷೇತ್ರ ಇರಬಹುದು ಒಂದು ನಿವೃತ್ತಿಗೆ ವಯಸ್ಸು ಇರುತ್ತದೆ. ಅಬ್ಟಾಬ್ಬ! ಅಂದರೆ ಸುಮಾರು 30ರಿಂದ 35 ವರ್ಷದೊಳಗೆ ಯಾವುದೇ ಆಟಗಾರ ತನ್ನ ಆಟಕ್ಕೆ ದೇಹ ಸ್ಪಂದಿಸುತ್ತಿಲ್ಲ. ತನ್ನ ಪ್ರದರ್ಶನ ಕಳಪೆಯಾಗುತ್ತಿದೆ ಎಂದು ನಿವೃತ್ತಿ ಘೋಷಿಸುತ್ತಾರೆ. ಆದರೆ, ಭಾರತ ಮಹಿಳಾ ಕ್ರಿಕೆಟ್ ತಂಡ ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿ ಅದಕ್ಕೆ ವಿರುದ್ಧವಾಗಿದ್ದಾರೆ ಎಂದರೆ ತಪ್ಪಲ್ಲ. ವಯಸ್ಸು 35 ಆದರೂ ಆಟ ಮುಪ್ಪಾಗಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಅದಕ್ಕೆ ಉದಾಹರಣೆ ಇತ್ತೀಚಿಗೆ ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸುವ ಮೂಲಕ ವಿಶ್ವ ದಾಖಲೆ ಮಾಡಿ ಮೆರೆದಿದ್ದಾರೆ. ಈಗಾಗಲೇ ಹಲವಾರು ದಾಖಲೆಗಳನ್ನು ಬರೆದಿರುವ ಪಶ್ಚಿಮ ಬಂಗಾಳದ ಮೂಲದ ಜೂಲನ್ ಗೋಸ್ವಾಮಿ ಸಾಧನೆ ಸಾಮಾನ್ಯವಾದುದ್ದಲ್ಲ.
Related Articles
Advertisement
ಸಾಮಾನ್ಯ ಕುಟುಂಬದಿಂದ ಬಂದ ಛಲಗಾತಿಭಾರತ ಮಹಿಳಾ ತಂಡದ ಮಾಜಿ ನಾಯಕಿ ಜೂಲನ್ ಗೋಸ್ವಾಮಿ ಪಶ್ಚಿಮ ಬಂಗಾಳ ನಾಡಿಯಾ ಜಿಲ್ಲೆಯ ಸಾಮಾನ್ಯ ಕುಟುಂಬದಲ್ಲಿ 1982ರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಕಡೆ ಆಕರ್ಷಿತರಾದ ಜೂಲನ್ ಮನೆಯ ಸಮೀಪದಲ್ಲಿ ಗಂಡು ಮಕ್ಕಳೊಂದಿಗೆ ಕ್ರಿಕೆಟ್ ಆಡಲು ಆರಂಭಿಸಿದ್ದರು. ಪ್ರಾರಂಭದಲ್ಲಿ ಮುಜುಗರ ಅನುಭವಿಸಿದರು. ಆದರೆ, ಕ್ರಿಕೆಟ್ ಮೇಲಿನ ಪ್ರೀತಿ ಮಾತ್ರ ಕಡಿಮೆ ಆಗಲಿಲ್ಲ. ತಾನು ಕ್ರಿಕೆಟ್‌ನಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಬೆಳೆಯಿತು. ಎಷ್ಟೇ ಆದರೂ ಪುರುಷರು ಆಡುವ ಆಟ ಎಂದೇ ಅನಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಮಹಿಳೆಯರಿಗೆ ಆದ್ಯತೆ ಕಡಿಮೆ. ಅದನ್ನು ಲೆಕ್ಕಿಸದೇ ತನ್ನ ಜೀವನವನ್ನು ಕ್ರಿಕೆಟ್‌ನಲ್ಲಿ ಕಂಡುಕೊಳ್ಳಬೇಕೆಂಬ ಹಟಕ್ಕೆ ಬಿದ್ದ ಜೂಲನ್ ಕೊನೆಗೂ ಕ್ರಿಕೆಟ್ ಅಭ್ಯಾಸ ಮಾಡಲು ತನ್ನ ತಂದೆ-ತಾಯಿಯ ಪ್ರೋತ್ಸಾಹದಿಂದ ಕೋಲ್ಕತ್ತಕ್ಕೆ ಹೊರಟು ನಿಂತರು. ಪ್ರತಿ ದಿನ ಕೋಲ್ಕತ್ತದಿಂದ ರೈಲಿನಲ್ಲಿ ಪ್ರಯಾಣ ಮಾಡಿ ತರಬೇತಿ ಪಡೆಯುತ್ತಿದ್ದರು. ಕೊನೆಗೂ ಶ್ರಮಕ್ಕೆ ಫಲ ಫಲಿಸಿ 2002ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಲ್ಲದೆ, ತಂಡದಲ್ಲಿ ಇದ್ದ ವೇಗದ ಬೌಲರ್ ಕೊರತೆ ನೀಗಿಸಿದರು. ಬ್ಯಾಟಿಂಗ್‌ನಲ್ಲಿ ಇತರೆ ಆಟಗಾರ್ತಿಯರು ಕೈಕೊಟ್ಟರೂ ತಾನೊಬ್ಬ ಆಲ್‌ರೌಂಡರ್ ಎನ್ನುವುದನ್ನು ಕೆಲವು ಸಲ ಸಾಬೀತು ಮಾಡಿ ತೋರಿಸಿದ್ದಾರೆ. ತಂಡದ ಆಧಾರ ಸ್ತಂಭವಾಗಿ, ವೇಗದ ಬೌಲಿಂಗ್ ಸಾರಥಿಯಾಗಿ, ತಂಡವನ್ನು ಮುನ್ನಡಿಸಿದ ಓರ್ವ ಸಮರ್ಥ ನಾಯಕಿಯಾಗಿ, ಕಿರಿಯರ ಆಟಗಾರ್ತಿಯರ ಪಾಲಿಗೆ ಮಾರ್ಗದರ್ಶಿಯಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಹಲವು ಪ್ರಶಸ್ತಿಗೆ ಕೊರಳೊಡ್ಡಿರುವ ಜೂಲನ್ ಗೋಸ್ವಾಮಿ 2007ರಲ್ಲಿ ಐಸಿಸಿ ವರ್ಷದ ಆಟಗಾರ್ತಿ, ಭಾರತದ ನಾಲ್ಕನೇ ಪುರಸ್ಕಾರ ಪದ್ಮಶ್ರೀ ಹಾಗೂ ಅರ್ಜುನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಪಾತ್ರರಾಗಿರುವ ಜೂಲನ್ ಗೋಸ್ವಾಮಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸೋಣ. ದೇವಲಾಪುರ ಮಹದೇವಸ್ವಾಮಿ