ಕಾರವಾರ : ಕೇಂದ್ರ ಚುನಾವಣಾ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಡಾ. ಸಂಜೀವ್ ಕುಮಾರ್, ಹಳಿಯಾಳ ತಾಲೂಕು ಸಾಂಬ್ರಾಣಿ ಹೋಬಳಿಯಲ್ಲಿನ ಬುಡಕಟ್ಟು ಸಮುದಾಯವಿರುವ ಗ್ರಾಮವಾದ ಗರಡೊಳ್ಳಿಗೆ ಮಂಗಳವಾರ ಭೇಟಿ ನೀಡಿದರು.
ಮುಖ್ಯ ಚುನಾವಣಾಧಿಕಾರಿಯಾಗಿ ಮೊದಲ ಭಾರಿಗೆ ಖುದ್ದು ಪರಿಶೀಲನೆಯನ್ನು ನಡೆಸಿದರು. ಗರಡೊಳ್ಳಿ ಗ್ರಾಮದ ಮತದಾರರ ಜೊತೆಗೆ ಬೆರೆತು ಅವರ ಅಹವಾಲುಗಳನ್ನು ಸ್ವೀಕರಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದೆಯೋ ಇಲ್ಲವೋ ಎಂಬುವುದರ ಬಗ್ಗೆ ಪರಿಶೀಲನೆ ನಡೆಸಿದರು.
ವಿಶೇಷ ಪರಿಶೀಲನೆಯಲ್ಲಿ ಹೆಸರು ಸೇರ್ಪಡೆ, ಯುವ ಮತದಾರರ ಹೆಸರು ನೋಂದಣಿ, PWD ಮತದಾರರ ಸೇರ್ಪಡೆ ಬಗ್ಗೆ ಕೂಲಂಕುಶವಾಗಿ ವೀಕ್ಷಿಸಿದರು. ಇದಾದ ನಂತರ ಗ್ರಾಮದ ಜನರಿಗೆ ತಿಳುವಳಿಕೆ ಹಾಗೂ ಚುನಾವಣಾ ಮಹತ್ವವನ್ನು ತಿಳಿಸುತ್ತಾ, ತಾವು ಬುಡಕಟ್ಟು ಜನಾಂಗಕ್ಕೆ ಸೇರಿರುತ್ತೀರಿ, ಹಾಗೆಂದ ಮಾತ್ರಕ್ಕೆ ಯಾವುದೇ ಕಾರಣಕ್ಕೆ ಹಿಂದುಳಿಯದೇ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುವುದರ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತಾವು ಬರಬೇಕು. ಈ ನಿಟ್ಟಿನಲ್ಲಿ ಮತದಾನದ ಪ್ರಕ್ರಿಯೆಯಲ್ಲಿ ತಾವೆಲ್ಲರೂ ಭಾಗವಹಿಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಕೆಲಸವು ಆಗಬೇಕಾಗಿದೆ ಎಂಬುವುದು ನಮ್ಮ ಆಶಯವಾಗಿರುವುದರಿಂದ ಸ್ವತಃ ನಾನು ಇವತ್ತು ಖುದ್ದು ಈ ಹಳ್ಳಿಗೆ ಭೇಟಿಯನ್ನು ನೀಡಿ ಹೆಸರು ನೋಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಿರುತ್ತೇನೆ. ಹಾಗೂ ನಿಮ್ಮ ಜೊತೆಗೆ ಬೆರತ್ತಿದ್ದು ನನಗೆ ಅತೀವ ಸಂತೋಷವಾಗಿರುತ್ತದೆ ಎಂದರು.
ಇದನ್ನೂ ಓದಿ:ಸೋಫಾ ಮಾರಲು ಹೋಗಿ 34 ಸಾವಿರ ಕಳೆದುಕೊಂಡ ಸಿಎಂ ಕೇಜ್ರಿವಾಲ್ ಮಗಳು: ಏನಿದು QR Code Scam ?
ಮುಖ್ಯ ಚುನಾವಣಾಧಿಕಾರಿಗಳೊಂದಿಗೆ, ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಸಹಿತ ಹಾಜರಿದ್ದು, ಮಾಹಿತಿಯನ್ನು ನೀಡಿದರು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬುಡಕಟ್ಟು ಸಮುದಾಯವಿರುವ ಗರಡೊಳ್ಳಿ ಗ್ರಾಮ ಸುಮಾರು 80 ಮನೆಗಳನ್ನು ಹೊಂದಿದ್ದು, ಸುಮಾರು 150 ಕ್ಕೂ ಅಧಿಕ ಮತದಾರರನ್ನು ಹೊಂದಿದ ಗ್ರಾಮವಾಗಿದೆ. ಇಂತಹ ಹಿಂದುಳಿದ ಬುಡಕಟ್ಟು ಗ್ರಾಮಕ್ಕೆ ರಾಜ್ಯದ ಒಬ್ಬ ಮುಖ್ಯ ಚುನಾವಣಾಧಿಕಾರಿಯಾಗಿ ಮೊದಲ ಭಾರಿಗೆ ಭೇಟಿ ನೀಡಿರುವುದು ವಿಶೇಷವಾದ ಸಂಗತಿಯಾಗಿದೆ ಎಂದು ಹೇಳಿದರು.