Advertisement

‘ಉಂಡೆನಾಮ’ಚಿತ್ರ ಮೊದಲ ಹಾಡು ಬಂತು; ಏ.14ಕ್ಕೆ ಕೋಮಲ್ ಚಿತ್ರ ರಿಲೀಸ್

12:41 PM Apr 03, 2023 | Team Udayavani |

ನಟ ಕೋಮಲ್‌ ಅಭಿನಯದ ಹೊಸಚಿತ್ರ “ಉಂಡೆನಾಮ’ ಬಿಡುಗಡೆಗೆ ದಿನಾಂಕ ಫಿಕ್ಸ್‌ ಆಗಿದೆ. ಇದೇ ಏ. 14ಕ್ಕೆ “ಉಂಡೆನಾಮ’ ತೆರೆಗೆ ಬರಲಿದ್ದು, ಸದ್ಯ ಚಿತ್ರತಂಡ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸದಲ್ಲಿ ನಿರತವಾಗಿದೆ. ಕೆಲ ದಿನಗಳ ಹಿಂದಷ್ಟೇ “ಉಂಡೆನಾಮ’ ಸಿನಿಮಾದ ಪೋಸ್ಟರ್‌ ಮತ್ತು ಟೀಸರ್‌ ಬಿಡುಗಡೆಯಾಗಿದ್ದು, ಸಿನಿ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಇದೀಗ “ಉಂಡೆನಾಮ’ ಸಿನಿಮಾದಲ್ಲಿ ಬರುವ “ಮೊದಲ ರಾತ್ರಿ’ ಹಾಡನ್ನು ಬಿಡುಗಡೆ ಮಾಡಿದೆ.

Advertisement

ಮಾಮೂಲಿ ಧಾಟಿಗಿಂತ ವಿಭಿನ್ನವಾಗಿರುವ “ಉಂಡೆನಾಮ’ ಸಿನಿಮಾದ ಈ ಗೀತೆ ನಿಧಾನವಾಗಿ ಕೇಳುಗರನ್ನು ತನ್ನ ಸೆಳೆಯುತ್ತಿದೆ. ಕೋಮಲ್‌ ವಿಭಿನ್ನ ಮ್ಯಾನರಿಸಂ, ಕಾಮಿಡಿ ಝಲಕ್‌ ಹಾಸ್ಯ ಪ್ರಿಯರನ್ನು ಆಕರ್ಷಿಸುವಂತಿದ್ದು, ಸಿನಿಮಾ ಥಿಯೇಟರ್‌ನಲ್ಲೂ ಭರಪೂರ ಮನರಂಜನೆ ನೀಡಲಿದೆ ಎಂಬುದು ಚಿತ್ರತಂಡದ ವಿಶ್ವಾಸದ ಮಾತು.

ಇನ್ನು “ಉಂಡೆನಾಮ’ ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಕಥಾಹಂದರದ ಸಿನಿಮಾ. ಕೋಮಲ್‌ ಅವರೊಂದಿಗೆ ಹರೀಶ್‌ ರಾಜ್‌, ಧನ್ಯಾ ಬಾಲಕೃಷ್ಣ, ತಬಲಾನಾಣಿ, ಅಪೂರ್ವಾ, ವೈಷ್ಣವಿ, ತನಿಷಾ ಕುಪ್ಪಂಡ, ಬ್ಯಾಂಕ್‌ ಜನಾರ್ಧನ್‌ ಮುಂತಾದವರು “ಉಂಡೆನಾಮ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಎನ್‌. ಕೆ ಸ್ಟುಡಿಯೋಸ್‌’ ಬ್ಯಾನರ್‌ ಅಡಿಯಲ್ಲಿ ಸಿ. ನಂದ ಕಿಶೋರ್‌ ನಿರ್ಮಿಸಿರುವ “ಉಂಡೆನಾಮ’ ಸಿನಿಮಾಕ್ಕೆ “ಮಜಾ ಟಾಕೀಸ್‌’ ಖ್ಯಾತಿಯ ಸಂಭಾಷಾಣೆಗಾರ ಕೆ. ಎಲ್. ರಾಜಶೇಖರ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಶ್ರೀಧರ್‌ ಸಂಭ್ರಮ ಸಂಗೀತ ಸಂಯೋಜಿಸಿದ್ದು, ನವೀನ್‌ ಕುಮಾರ್‌ ಛಾಯಾಗ್ರಹಣ, ಕೆ. ಎಂ ಪ್ರಕಾಶ್‌ ಸಂಕಲನವಿದೆ.

ಇನ್ನು ಲಾಂಗ್‌ ಗ್ಯಾಪ್‌ ಬಳಿಕ “ಉಂಡೆನಾಮ’ ಹಾಕಿಕೊಂಡು ಪ್ರೇಕ್ಷಕರ ಮುಂದೆ ಬರುತ್ತಿರುವ ನಟ ಕೋಮಲ್‌ ಕಾಮಿಡಿ ಕಮಾಲ್‌ ಹೇಗಿರಲಿದೆ ಎಂಬ ಕುತೂಹಲಕ್ಕೆ ಮುಂದಿನವಾರ ಉತ್ತರ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next