Advertisement

ವಿಮಾನದಲ್ಲಿ ಬರಲಿದೆ ಲಸಿಕೆ: ಸ್ವೀಕಾರಕ್ಕೆ ಸಿದ್ಧರಾಗಿ ಎಂದು ರಾಜ್ಯಗಳಿಗೆ ಸೂಚನೆ

10:23 PM Jan 07, 2021 | Team Udayavani |

ಹೊಸದಿಲ್ಲಿ: ಕೋವಿಡ್ ಲಸಿಕೆ ವಿತರಣೆಗೆ ದಿನಗಣನೆ ಆರಂಭವಾಗಿದ್ದು, “ಮೊದಲ ಹಂತದ ಲಸಿಕೆಗಳ ಸ್ವೀಕಾರಕ್ಕೆ ಸಿದ್ಧರಾಗಿ’ ಎಂಬ ಸಂದೇಶವನ್ನು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ ಗುರುವಾರ ರವಾನಿಸಿದೆ.

Advertisement

ಇದಕ್ಕೆ ಪೂರಕವಾಗಿ ದೇಶದ ಮೂಲೆ ಮೂಲೆಗಳಿಗೂ ಲಸಿಕೆಗಳನ್ನು ತಲುಪಿಸಲು ಎಲ್ಲ ಸಿದ್ಧತೆಗಳು ನಡೆಯುತ್ತಿದ್ದು, ಇದಕ್ಕಾಗಿ ವಾಯುಪಡೆಯ ಸರಕು ಸಾಗಣೆ ವಿಮಾನಗಳನ್ನು ಸರಕಾರ ಬಳಸಿಕೊಳ್ಳಲಿದೆ.

ಆರಂಭದಲ್ಲಿ ಕರ್ನಾಟಕ ಸಹಿತ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಗುರುತಿಸಲಾಗಿರುವ ಕೇಂದ್ರಗಳಿಗೆ ಲಸಿಕೆ ಸರಬರಾಜು ಮಾಡಲಾಗುತ್ತದೆ. ಉಳಿದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಿ ಔಷಧ ಡಿಪೋಗಳಿಗೆ ಲಸಿಕೆ ರವಾನಿಸಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಲಸಿಕೆಗಳನ್ನು ಸ್ವೀಕರಿಸಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದೂ ಸೂಚಿಸಿದೆ.

ವಿಶೇಷ ಕಂಟೈನರ್‌ಗಳು
ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ನ ನಿರ್ಬಂಧಿತ ತುರ್ತು ಬಳಕೆಗೆ ಅನುಮತಿ ಸಿಕ್ಕಿರುವ ಕಾರಣ ಎರಡೂ ಕಂಪೆನಿಗಳು ಸೂಕ್ತ ತಾಪಮಾನದಲ್ಲಿ ಲಸಿಕೆಗಳ ಸಾಗಾಟಕ್ಕೆ ವಿಶೇಷ ಕಂಟೈನರ್‌ಗಳನ್ನು ಸಿದ್ಧಪಡಿಸಿವೆ. ಅರುಣಾಚಲ, ಲಡಾಖ್‌ನಂಥ ಪ್ರದೇಶಗಳಿಗೆ ಲಸಿಕೆ ತಲುಪಿಸಲು ವಾಯುಪಡೆ ತನ್ನ ವಿಶೇಷ ಸೇನಾ ವಾಯುನೆಲೆಗಳು ಮತ್ತು ಸುಧಾರಿತ ಲ್ಯಾಂಡಿಂಗ್‌ ಪ್ರದೇಶಗಳನ್ನು ಬಳಸಿಕೊಳ್ಳಲಿದೆ ಎನ್ನಲಾಗಿದೆ. ಅಗತ್ಯಬಿದ್ದರೆ ಹೆಲಿಕಾಪ್ಟರ್‌ಗಳನ್ನೂ ಉಪಯೋಗಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next