Advertisement

ಹಾಲಿ ಚಾಂಪಿಯನ್‌ ಸೈನಾಗೆ ಮೊದಲ ಸುತ್ತಿನ ಆಘಾತ, ಗೆದ್ದದ್ದು ಪಿ. ವಿ.ಸಿಂಧು ಮಾತ್ರ

09:22 AM Jan 16, 2020 | Team Udayavani |

ಜಕಾರ್ತಾ: “ಇಂಡೋನೇಶ್ಯ ಮಾಸ್ಟರ್‌ ಸೂಪರ್‌ 500′ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಬುಧವಾರ ಭಾರತದ ಪಾಲಿಗೆ ಸೋಲಿನ ದಿನವಾಗಿ ಪರಿಣಮಿಸಿದೆ. ಹಾಲಿ ಚಾಂಪಿಯನ್‌ ಸೈನಾ ನೆಹ್ವಾಲ್‌, ಭರವಸೆಯ ಶಟ್ಲರ್‌ಗಳಾದ ಕೆ. ಶ್ರೀಕಾಂತ್‌, ಬಿ. ಸಾಯಿ ಪ್ರಣೀತ್‌, ಪ್ರಣವ್‌ ಜೆರ್ರಿ ಚೋಪ್ರ-ಸಿಕ್ಕಿ ರೆಡ್ಡಿ… ಎಲ್ಲರೂ ಸೋಲುಂಡು ನಿರ್ಗಮಿಸಿದ್ದಾರೆ. ದ್ವಿತೀಯ ಸುತ್ತು ಪ್ರವೇಶಿಸಿದ್ದು ಪಿ.ವಿ. ಸಿಂಧು ಮಾತ್ರ.

Advertisement

5ನೇ ಶ್ರೇಯಾಂಕದ ಸಿಂಧು ಜಪಾನಿನ ಅಯಾ ಒಹೊರಿ ವಿರುದ್ಧ ಮೊದಲ ಗೇಮ್‌ ಕಳೆದುಕೊಂಡರೂ ದಿಟ್ಟ ಹೋರಾಟ ನೀಡಿ 14-21, 21-15, 21-11 ಅಂತರದಿಂದ ಗೆದ್ದು ಬಂದರು.

ಕಳೆದ ವರ್ಷ ಇಲ್ಲಿ ವನಿತಾ ಸಿಂಗಲ್ಸ್‌ ಪ್ರಶಸ್ತಿಯನ್ನೆತ್ತಿ ಮೆರೆದಿದ್ದ ಸೈನಾ ನೆಹ್ವಾಲ್‌ ಈ ಬಾರಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು. ಅವರನ್ನು ಜಪಾನಿನ ಸಯಾಕಾ ಟಕಹಾಶಿ 21 -19, 13-21, 5-21 ಅಂತರದಿಂದ ಮಣಿಸಿದರು. 50 ನಿಮಿಷಗಳ ತನಕ ಇವರ ಹೋರಾಟ ಸಾಗಿತು. ಮೊದಲ ಗೇಮನ್ನು ರೋಚಕವಾಗಿ ಗೆದ್ದ ಸೈನಾ, ಬಳಿಕ ಹಿಡಿತ ಕಳೆದುಕೊಳ್ಳುತ್ತ ಹೋದರು.

ವರ್ಷಾರಂಭದ ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಸೈನಾ ಕ್ವಾರ್ಟರ್‌ ಫೈನಲ್‌ ತನಕ ಸಾಗಿದ್ದರು.

ಪುರುಷರಿಗೆ 3 ಸೋಲು
ಪುರುಷರ ಸಿಂಗಲ್ಸ್‌ನಲ್ಲಿ ಅನುಭವಿ ಶಟ್ಲರ್‌ ಕೆ. ಶ್ರೀಕಾಂತ್‌ ಆತಿಥೇಯ ನಾಡಿನ ಶೆಸರ್‌ ಹಿರೆನ್‌ ರುಸ್ತಾವಿಟೊ ವಿರುದ್ಧ 21-18, 12-21, 14-21 ಅಂತರದ ಸೋಲುಂಡರು.

Advertisement

ವಿಶ್ವದ 12ನೇ ರ್‍ಯಾಂಕಿಂಗ್‌ ಆಟಗಾರನಾಗಿರುವ ಶ್ರೀಕಾಂತ್‌ ಪ್ರಸಕ್ತ ಋತುವಿನಲ್ಲಿ ಮೊದಲ ಸುತ್ತಿನಲ್ಲೇ ಎಡವಿದ 2ನೇ ನಿದರ್ಶನ ಇದಾಗಿದೆ. ಕಳೆದ ವಾರವಷ್ಟೇ “ಮಲೇಶ್ಯ ಮಾಸ್ಟರ್’ ಪಂದ್ಯಾವಳಿಯಲ್ಲೂ ಇದೇ ಸಂಕಟಕ್ಕೆ ಸಿಲುಕಿದ್ದರು. ಮೊದಲ ಗೇಮನ್ನು 21-18 ಅಂತರದಿಂದ ಗೆದ್ದ ಶ್ರೀಕಾಂತ್‌, ಇದೇ ಲಯದಲ್ಲಿ ಸಾಗುವ ಸೂಚನೆ ನೀಡಿದರು. ಆದರೆ ಅನಂತರ ಆತಿಥೇಯ ಆಟಗಾರನ ಆಕ್ರಮಣಕಾರಿ ಹೊಡೆತಕ್ಕೆ ಸಾಟಿಯಾಗಲು ಅವರಿಗೆ ಸಾಧ್ಯವಾಗಲಿಲ್ಲ.

ಶ್ರೀಕಾಂತ್‌ ಅವರಂತೆ ಮಲೇಶ್ಯ ಮಾಸ್ಟರ್ ನಲ್ಲಿ ಮೊದಲ ಸುತ್ತಿನಲ್ಲೇ ಎಡವಿದ್ದ ಬಿ. ಸಾಯಿ ಪ್ರಣೀತ್‌ ಇಲ್ಲೂ ಇದೇ ಸಂಕಟಕ್ಕೆ ಸಿಲುಕಿದರು. ಅವರನ್ನು 8ನೇ ಶ್ರೇಯಾಂಕದ ಚೀನೀ ಆಟಗಾರ ಶಿ ಯು ಕ್ವಿ 21-16, 18-21, 10-21ರಿಂದ ಮಣಿಸಿದರು. ಸೌರಭ್‌ ವರ್ಮ ಅವರನ್ನು ಚೀನದ ಮತ್ತೂಬ್ಬ ಆಟಗಾರ ಲು ಗುವಾಂಗ್‌ ಜು 21-17, 15-21, 10-21 ಅಂತರದಿಂದ ಹಿಮ್ಮೆಟ್ಟಿಸಿದರು.

ಮಿಕ್ಸೆಡ್‌ ಡಬಲ್ಸ್‌ನಲ್ಲೂ ಭಾರತಕ್ಕೆ ಸೋಲಿನ ಬಿಸಿ ತಟ್ಟಿದೆ. ಪ್ರಣವ್‌ ಜೆರ್ರಿ ಚೋಪ್ರ-ಸಿಕ್ಕಿ ರೆಡ್ಡಿ ದಕ್ಷಿಣ ಕೊರಿಯಾದ ಕೊ ಸುಂಗ್‌ ಹ್ಯೂನ್‌- ಇಯೋಮ್‌ ಹೆ ವೋನ್‌ ವಿರುದ್ಧ 8-21, 14-21 ನೇರ ಗೇಮ್‌ಗಳ ಸೋಲನುಭವಿಸಿ ಹೊರಬಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next