ಮಳೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕ ವಯಸ್ಸಿನಿಂದಲೂ ನನಗೆ ಮಳೆಯಲ್ಲಿ ನೆನೆಯಬೇಕೆಂಬ ಆಸೆ. ಆದರೆ ಅಮ್ಮನ ಭಯ. ಮಳೆ ಬರುತ್ತಿರುವಾಗ “ಅಮ್ಮ ಒಂದೇ ಒಂದು ಬಾರಿ ಹೊರಗೆ ಹೋಗುತ್ತೇನೆ’ ಎಂದು ಕೇಳಿದರೆ ಆಕೆ ಬೇಡ ಎನ್ನುತ್ತಿರಲಿಲ್ಲ. ಬದಲಾಗಿ ನನ್ನನ್ನೊಮ್ಮೆ ಕೋಪದಿಂದ ನೋಡುತ್ತಿದ್ದಳು. ಅಪ್ಪನಲ್ಲಿ ಹೇಳುತ್ತೇನೆ ನೋಡು ಎಂದಾಗ ನಾನು ಹೆದರಿ ಸುಮ್ಮನಾಗುತ್ತಿದ್ದೆ. ಆದರೆ ಈ ಬಾರಿಯ ಮಳೆ ನನಗೆ ಹೊಸ ಹುರುಪನ್ನು ತಂದಿತ್ತು. ಆ ದಿನ ಸಂಜೆ. ಸೂರ್ಯ ಇನ್ನೇನೂ ಮುಳುಗಿ ಕತ್ತಲು ಆವರಿಸಿತು.
ಜೋರಾಗಿ ಗಾಳಿ ಮಳೆ ಬರಲು ಆರಂಭವಾಯಿತು. ಕೆಂಡದಂತೆ ಉರಿಯುತ್ತಿದ್ದ ಧರೆ ಮಳೆರಾಯನ ಆಗಮನದಿಂದ ತಂಪಾಯಿತು. ಹಾಡು ಕೇಳುತ್ತಾ ಕುಳಿತಿದ್ದ ನನಗೆ ಹೊರಗೆ ನೋಡುವಾಗ ಮಳೆಯಲ್ಲಿ ನೆನೆಯುವ ಆಸೆ ಇನ್ನಷ್ಟು ಹೆಚ್ಚಾಯಿತು.
ನಾನು ಸುಮ್ಮನೆ “ಅಮ್ಮಾ’ ಎಂದೆ. ಅಷ್ಟರಲ್ಲೇ ಅಮ್ಮ “ಮೊದಲ ಮಳೆಯಲ್ಲಿ ಒದ್ದೆ ಆಗಬೇಡ, ಜ್ವರ, ಶೀತ ಬರುತ್ತೇ ಎಂದಳು. ಅಪ್ಪ ಕೂಡ ಅಮ್ಮನ ಜತೆ ಸೇರಿ “ಏನು ಮಕ್ಕಳಾಟ ನಿನ್ನದು’ ಎಂದು ಗದರಿದರು. ಆದರೆ ಈ ಬಾರಿ ನನ್ನ ಮನಸ್ಸು ಯಾರ ಮಾತನ್ನೂ ಕೇಳುವಂತಿರಲಿಲ್ಲ. ಆದದ್ದು ಆಗಲಿ ಎಂದು ಅಂಗಳದ ಕಡೆ ಹೆಜ್ಜೆ ಹಾಕಿಯೇ ಬಿಟ್ಟೆ. ವಾ ! ಆ ಕ್ಷಣದಲ್ಲಿ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಳೆಯಲ್ಲಿ ನೆನೆಯುತ್ತಾ ಒಂದು ಕ್ಷಣ ಮಗುವಾಗಿ ಬಿಟ್ಟೆ. ಕಿವಿಗೆ ಮಳೆರಾಯನು ಧರೆಯನ್ನು ಚುಂಬಿಸುವ ಸದ್ದು ಬಿಟ್ಟರೆ ಬೇರೇನೂ ಕೇಳುತ್ತಿರಲಿಲ್ಲ. ಮಳೆ ನಿಂತ ಬಳಿಕ ಮೆಲ್ಲನೆ ಒಳ ಬಂದ ನನಗೆ ಅಪ್ಪ, ಅಮ್ಮನ ಬಿಸಿ ಬಿಸಿ ಬೈಗುಳ ಸಿದ್ಧವಾಗಿಯೇ ಇತ್ತು. ಆದರೆ ಮಳೆಗೆ ನೆನೆದೆನಲ್ಲ ಎಂಬ ಸಂತೋಷದ ಮಧ್ಯೆ ಅದೇನೂ ದೊಡ್ಡದಾಗಿ ಕಾಣಲಿಲ್ಲ. ಕಾರಣ ಆ ಮೊದಲ ಮಳೆ ನನ್ನ ಮನಸ್ಸಿನಲ್ಲಿ ಆಗಲೇ ಮನೆಮಾಡಿತ್ತು.
- ಲಾವಣ್ಯಾ ಎಸ್. ಸಂತ ಫಿಲೋಮಿನಾ, ಪುತ್ತೂರು