Advertisement

ನಾಗಮಂಗಲ ಅಭಿವೃದ್ಧಿಗೆ ಮೊದಲ ಆದ್ಯತೆ

09:54 AM Feb 21, 2019 | Team Udayavani |

ನಾಗಮಂಗಲ : ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ಶಾಸಕರ ಕಚೇರಿ ಪ್ರಾರಂಭಿಸಲಾಗಿದೆ ಎಂದು ಶಾಸಕ ಕೆ.ಸುರೇಶ್‌ಗೌಡ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿ ನೂತನವಾಗಿ ಶಾಸಕರ ಕಚೇರಿ ಉದ್ಘಾಟಿಸಿ ಮಾತನಾಡಿ, ತಾಲೂಕಾದ್ಯಂತ ಸಾರ್ವಜನಿಕರು ತಮ್ಮ ಅನೇಕ ಕೆಲಸಗಳಿಗಾಗಿ ಮಿನಿವಿಧಾನಸೌಧಕ್ಕೆ ಬರುತ್ತಿದ್ದು, ಅದರಲ್ಲಿ ಬಹುತೇಕರು ರೈತರೇ ಆಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅವರಿಗೆ ಇರುವ ಕುಂದು ಕೊರತೆಗಳನ್ನು ಹೇಳಿಕೊಳ್ಳಲು ಅನುಕೂಲವಾಗಲೆಂದು ನೂತನ ಕಚೇರಿ ಉದ್ಘಾಟಿಸಲಾಗಿದೆ
ಎಂದರು.

Advertisement

ಸೂಕ್ತವಾಗಿ ಸ್ಪಂದಿಸುತ್ತೇನೆ: ನಾನು ಕಚೇರಿಯಲ್ಲಿ ಇಲ್ಲದಿದ್ದರೂ ನನ್ನ ಸಿಬ್ಬಂದಿ ಕಚೇರಿಯಲ್ಲಿ ಲಭ್ಯವಿರುವರು. ನನ್ನನ್ನೇ ನೇರವಾಗಿ ಕಾಣಬೇಕು ಎನ್ನುವ ಮನೋಭಾವ ಬಿಡಿ. ನೀವು ನೀಡುವ ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಿಮ್ಮ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತೇನೆ.

ಕಚೇರಿಯಲ್ಲಿ ಸಿಬ್ಬಂದಿ ಸ್ಪಂದಿಸದಿದ್ದರೆ ತುರ್ತಾಗಿ ನನ್ನ ಗಮನಕ್ಕೆ ತನ್ನಿ. ಎಷ್ಟೇ ಕಾರ್ಯಬಾಹುಳ್ಯವಿದ್ದರೂ ನಿಮ್ಮ ಸಮಸ್ಯೆ ಆಲಿಸಲು ನಾನು ಸದಾ ಸಿದ್ಧ. ಸಾರ್ವಜನಿಕರು ಕೂಡ ಏನೂ ಕೆಲಸವಿಲ್ಲದೆ ಸುಖಾ ಸುಮ್ಮನೆ ಕಚೇರಿಯಲ್ಲಿ ತುಂಬಿಕೊಳ್ಳಬೇಡಿ. ಅವಶ್ಯಕತೆ ಇದ್ದಾಗ ಕಚೇರಿಯಲ್ಲಿ ಇದ್ದು ನಿಮ್ಮ ಕೆಲಸ ಮುಗಿದ ಕೂಡಲೆ ಬೇರೆಯವರಿಗೆ ಸ್ಥಳಾವಕಾಶ ಕಲ್ಪಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದರು.

ಪಟ್ಟಣದ ಅಭಿವೃದ್ಧಿಗೆ ಕಾರ್ಯಸೂಚಿ : ಈಗಾಗಲೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ನೀಲ ನಕ್ಷೆ ತಯಾರಾಗಿದೆ. ಅದರ ಮೊದಲ ಹಂತದ ಕಾರ್ಯಸೂಚಿಯಾಗಿ ಪಟ್ಟಣದ ಹಿರಿಕೆರೆಯ ಏರಿಯನ್ನು ಈ ಮೊದಲು ನಾನು ಶಾಸಕನಾಗಿದ್ದಾಗಲೇ ಅಭಿವೃದ್ಧಿಪಡಿಸಿ ಸಾರ್ವಜನಿಕರ ವಾಯುವಿಹಾರಕ್ಕೆಂದು ಕಲ್ಪಿಸಲಾಗಿತ್ತು. ಈಗ ಮತ್ತೆ ಅದನ್ನು ಮೇಲ್ದರ್ಜೆಗೇರಿಸಿ ಉಳಿಕೆ ಜಾಗವನ್ನು ಕೂಡ ವಾಯುವಿಹಾರಕ್ಕೆ ಅನು ಕೂಲವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

 ವಾಯುವಿಹಾರಕ್ಕೆ ಸಜ್ಜು: ಇದೇ ಮಾದರಿಯಲ್ಲಿ ಮಂಡ್ಯ ರಸ್ತೆಯಲ್ಲಿರುವ ಅಮ್ಮನಕಟ್ಟೆ ಕೆರೆಯನ್ನು ಕೂಡ ಅಭಿವೃದ್ಧಿ ಪಡಿಸಿ ಅದರ ಏರಿಯನ್ನು ಜನರಿಗೆ ಅನುಕೂಲವಾಗುವಂತೆ ರೂಪಾಂತರಿಸಲಾಗುವುದು. ಮಂಡ್ಯ ರಸ್ತೆಯಲ್ಲಿ ಅನೇಕ ಮುಸ್ಲಿಮರು, ಮಹಿಳೆಯರು ರಸ್ತೆ ಬದಿಯಲ್ಲಿ ವಾಯುವಿಹಾರ
ಮಾಡುವುದನ್ನು ಗಮನಿಸಿದ್ದೇನೆ. ಹಾಗಾಗಿ ಮಂಡ್ಯ ರಸ್ತೆ, ಬಳಪದಮಂಟಿಕೊಪ್ಪಲು ಹಾಗೂ ಗದ್ದೆಭೂವನಹಳ್ಳಿಯ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಅಮ್ಮನಕಟ್ಟೆ ಕೆರೆಯನ್ನು ವಾಯುವಿಹಾರಕ್ಕೆ ಸಜ್ಜುಗೊಳಿಸಿಕೊಡಲಾಗುವುದು ಎಂದರು.

Advertisement

ಪಟ್ಟಣದಾದ್ಯಂತ ಒಳಚರಂಡಿ ವ್ಯವಸ್ಥೆ ಅಸಮರ್ಪಕವಾಗಿದೆ. ಒಳಚರಂಡಿ ವ್ಯವಸ್ಥೆಗೆ ಕಾಯಕಲ್ಪ ನೀಡಿ ಸಮಸ್ಯೆಯಿಂದ ಮುಕ್ತಿಗೊಳಿಸಲಾಗುವುದು. ಕುಡಿಯುವ ನೀರಿನ ಸಮರ್ಪಕ ಪೂರೈಕೆ ಯೋಜನೆ ತಯಾರಿಸಿದ್ದು ಪ್ರತಿಯೊಂದು ಮನೆ ಮನೆಗೂ ಕುಡಿಯುವ ನೀರಿಗೆ ವಾಟರ್‌ ಪೈಪ್‌ ಅಳವಡಿಸಲಾಗುವುದು. ಇದರಿಂದ ಜನರು ನೀರನ್ನು ಪೋಲು ಮಾಡುವುದು ನಿಲ್ಲುತ್ತದೆ. ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತದೆ.

ಹಿರಿಕೆರೆಗೆ ನಾಲೆ ನಿರ್ಮಾಣ : ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಸೂಳೆಕೆರೆಯಿಂದ ಪಟ್ಟಣದಲ್ಲಿರುವ ಹಿರಿಕೆರೆಗೆ ನಾಲೆ ನಿರ್ಮಿಸಿ ಅದರಿಂದ ಸೂಳೆಕೆರೆಯಿಂದ ಹೆಚ್ಚಾದ ನೀರು ಹೊರ ಹೋಗುವುದನ್ನು ತಡೆದು ಹಿರಿಕರೆ ತುಂಬಿಸುವ ಯೋಜನೆಯನ್ನು ಕೂಡ ಪ್ರಾರಂಭಿಸಲಾಗುವುದು ಎಂದರು.

ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಈ ಎಲ್ಲಾ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಖಾಸಗಿ ಏಜೆನ್ಸಿಯೊಂದಿಗೆ ಚರ್ಚಿಸಿದ ಶಾಸಕರು ಎಲ್ಲಾ ಕಾಮಗಾರಿಗಳ ಗುಣಮಟ್ಟ ಉತ್ತಮವಾಗಿರಬೇಕು. ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಪರಿಣಾಮ ತುಂಬಾ ಕೆಟ್ಟದಾಗಿರುತ್ತದೆ. ಇಂದು ನಾನು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದು ಕನಿಷ್ಠ 20 ವರ್ಷಗಳಾದರು ಯಾವುದೇ ಲೋಪ ದೋಷಗಳಿಗೆ ಒಳಗಾಗಬಾರದು. ಒಟ್ಟಾರೆಯಾಗಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಕಂಕಣ ಬದ್ಧನಾಗಿದ್ದೇನೆ ಎಂದರು.

ತಹಶೀಲ್ದಾರ್‌ ಎಂ.ವಿ.ರೂಪ, ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ತಾ.ಪಂ ಮುಖ್ಯ ಕಾರ್ಯನಿರ್ವಹನಾಧಿಕಾರಿ ಎಂ.ಆರ್‌.ಅನಂತರಾಜು, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್‌ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು 

ಕಂಚಿನ ಪ್ರತಿಮೆ ಸ್ಥಾಪನೆ ಪಟ್ಟಣದ ಸೌಂದರ್ಯ ಹೆಚ್ಚಿಸಲು ಹಾಗೂ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದ ಮಹನೀಯರ ಸ್ಮರಣಾರ್ಥ ಅವರಿಗೆ ಗೌರವ ಸಲ್ಲಿಸಲು ಪಟ್ಟಣದ ಟಿ. ಮರಿಯಪ್ಪ ವೃತ್ತವನ್ನು ಅಗಲೀಕರಣಗೊಳಿಸಿ ವೃತ್ತದ ಮಧ್ಯೆ ಟಿ.ಮರಿಯಪ್ಪನವರ ಕಂಚಿನ ಪ್ರತಿಮೆ ನಿರ್ಮಾಣ ಹಾಗೂ ಟಿ.ಬಿ ಬಡಾವಣೆಯ ವೃತ್ತವನ್ನು ಅಭಿವೃದ್ಧಿ ಪಡಿಸಿ ವೃತ್ತದ ಮಧ್ಯೆ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next