ಬೀದರ: ಕೋವಿಡ್-19 ಪಾಸಿಟಿವ್ ದೃಢಪಟ್ಟ 24 ತಾಸಿನೊಳಗೆ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಹಚ್ಚಲು ಪ್ರಥಮ ಆದ್ಯತೆ ಆಗಬೇಕು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು. ಯಾವುದೇ ಕಾರ್ಯವಿರಲಿ ಅದನ್ನು ಬದಿಗೊತ್ತಿ, ಕೋವಿಡ್ -19 ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಸಬೇಕು ಎಂದರು.
ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯಲ್ಲಿ ಗುರುತಿಸಿ ಪಟ್ಟಿ ಮಾಡಿದ ಐಎಲ್‌ಐ ಮತ್ತು ಸಾರಿ ಪ್ರಕರಣಗಳ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ವಿಳಂಬ ಸಲ್ಲದು. ಪ್ರಯೋಗಾಲಯದಿಂದ ಬೇಗನೆ ವರದಿ ಪಡೆಯಲು ಕ್ರಮ ವಹಿಸಬೇಕು ಎಂದು ಸೂಚಿಸಿದರು. ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಪೂರ್ಣಗೊಳಿಸಿದವರು ಮತ್ತೆ ಏಳು ದಿನ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಈ ಅವಧಿಯಲ್ಲಿ ಕ್ವಾರಂಟೈನ್‌ಗೆ ಒಳಗಾದವರು ಹೊರಗಡೆ ಸುತ್ತಾಡುವುದು ಮತ್ತು ಹೋಮ್ ಕ್ವಾರಂಟೈನ್‌ಗೆ ವಿರೋಧಿಸುವುದು ಕಂಡು ಬಂದಲ್ಲಿ ಅಂಥವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಡಿಎಚ್‌ಒ ಡಾ| ವಿ.ಜಿ. ರೆಡ್ಡಿ ಮತ್ತು ತಾಲೂಕು ವೈದ್ಯಾಧಿಕಾರಿಗಳಿಗೆ ಡಿಸಿ ನಿರ್ದೇಶನ ನೀಡಿದರು.
ಕೋವಿಡ್-19 ತಡೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ನಿತ್ಯದ ಕಚೇರಿ ಕೆಲಸದ ಜೊತೆಗೆ ಕೋವಿಡ್-19 ಕೆಲಸಕ್ಕೂ ಆದ್ಯತೆ ಕೊಡಬೇಕು ಎಂದು ಡಿಸಿ ಸೂಚಿಸಿದರು. ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್‌ಪಿ ಡಿ.ಎಲ್.ನಾಗೇಶ, ಸಹಾಯಕ ಆಯುಕ್ತರಾದ ಅಕ್ಷಯ ಶ್ರೀಧರ, ಭಂವರಸಿಂಗ್ ಮೀನಾ, ಡಿಎಸ್‌ಒ ಡಾ| ಕೃಷ್ಣಾ ರೆಡ್ಡಿ ಇತರರಿದ್ದರು.