ರಾಂಚಿ/ಚತ್ತೀಸ್ ಗಢ್: ಜಾರ್ಖಂಡ್ ನ ಮೊದಲ ಹಂತದಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿದ್ದ ಚುನಾವಣಾ ಸಿಬ್ಬಂದಿಗಳನ್ನು ಐಎಎಫ್ ಹೆಲಿಕಾಪ್ಟರ್ ಜಾರ್ಖಂಡ್ ಬದಲು ನೆರೆಯ ಚತ್ತೀಸ್ ಗಢದಲ್ಲಿ ಇಳಿಸಿರುವ ಘಟನೆ ಗುರುವಾರ ನಡೆದಿರುವುದಾಗಿ ವರದಿ ತಿಳಿಸಿದೆ.
ಹದಿನೆಂಟು ಮಂದಿ ಚುನಾವಣಾ ಸಿಬ್ಬಂದಿಗಳು ಹಾಗೂ ಸಾಮಾಗ್ರಿಗಳನ್ನು ಹೊತ್ತೊಯ್ದಿದ್ದ ಐಎಎಫ್ ಹೆಲಿಕಾಪ್ಟರ್ ಜಾರ್ಖಂಡ್ ನ ಲಾಟೇಹಾರ್ ಜಿಲ್ಲೆಯ ಚಾಟಕಾಪುರ್ ನಲ್ಲಿ ಲ್ಯಾಂಡ್ ಆಗಬೇಕಾಗಿತ್ತು. ಆದರೆ ಫೈಲಟ್ ತಪ್ಪು ಗ್ರಹಿಕೆಯಿಂದಾಗಿ ಚುನಾವಣಾ ಸಿಬ್ಬಂದಿಗಳನ್ನು ಚತ್ತೀಸ್ ಗಢದ ಸುರ್ಜಾಪುರ್ ಜಿಲ್ಲೆಯ ಪ್ರತಾಪ್ಪುರ್ ಭೈನ್ಸಾಮುಂಡಾ ಪ್ರದೇಶದಲ್ಲಿ ಇಳಿಸಿರುವುದಾಗಿ ವರದಿ ವಿವರಿಸಿದೆ.
ಲಾಟೇಹಾರ್ ಜಿಲ್ಲಾಡಳಿತ ಚಾಟಕಾಪುರ್ ಕ್ಲಷ್ಟರ್ ನಲ್ಲಿ ನವೆಂಬರ್ 30ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯ ಹಿನ್ನೆಲೆಯಲ್ಲಿ 13 ವಿಧಾನಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಲು ಐಎಎಫ್ ಹೆಲಿಕಾಪ್ಟರ್ ನಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳು ಸೇರಿದಂತೆ ಚುನಾವಣಾ ಸಿಬ್ಬಂದಿಗಳನ್ನು ಕಳುಹಿಸಿತ್ತು.
ಆದರೆ ತಮ್ಮ ಹೆಲಿಕಾಪ್ಟರ್ ಚತ್ತೀಸ್ ಗಢದಲ್ಲಿ ಇಳಿದಿರುವುದು ಮನವರಿಕೆಯಾಗುತ್ತಿದ್ದಂತೆಯೇ ಲಾಟೇಹಾರ್ ಡೆಪ್ಯುಟಿ ಕಮಿಷನರ್ ಗೆ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಝೇಶಾನ್ ಓಮರ್ ಅವರಿಗೆ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅವರು ಚತ್ತೀಸ್ ಗಢದ ಅಧಿಕಾರಿ ದೀಪಕ್ ಸೋನಿಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
ಕೂಡಲೇ ಚತ್ತೀಸ್ ಗಢದಿಂದ ಆಗಮಿಸಿದ್ದ ಪೊಲೀಸರು ಅಗತ್ಯವಾದ ಭದ್ರತೆ ನೀಡಿದ್ದರು. ನಂತರ ಮತ್ತೊಂದು ಐಎಎಫ್ ಹೆಲಿಕಾಪ್ಟರ್ ನಲ್ಲಿ 18 ಮಂದಿ ಚುನಾವಣಾ ಸಿಬ್ಬಂದಿಗಳನ್ನು ಜಾರ್ಖಂಡ್ ನ ಲಾಟೇಹಾರ್ ಗೆ ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಎಎಫ್ ಹೆಲಿಕಾಪ್ಟರ್ ದಿಕ್ಕುತಪ್ಪಿ ಚತ್ತೀಸ್ ಗಢಕ್ಕೆ ಬಂದಿಳಿದಿರುವುದಾಗಿ ಲಾಟೇಹಾರ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ತಾನು ತಪ್ಪಾಗಿ ಇಳಿಸಿ ಬಂದಿರುವ ಪ್ರದೇಶದ ಮಾಹಿತಿಯನ್ನು ಪೈಲಟ್ ನೀಡಿದ್ದು, ಅವರೆಲ್ಲರೂ ಸುರಕ್ಷಿತವಾಗಿ ಜಾರ್ಖಂಡ್ ಗೆ ವಾಪಸ್ ಬಂದಿರುವುದಾಗಿ ತಿಳಿಸಿದ್ದಾರೆ.