Advertisement
ಈ ನಡುವೆ ಮೇಯರ್ ಸ್ಥಾನವನ್ನು ವೇಲು ನಾಯಕರ್ ಅಥವಾ ಆಂಜನಪ್ಪ ಅವರಿಗೇ ನೀಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಮುನಿರತ್ನ ಕೊನೇ ಹಂತದ ಒತ್ತಡ ಹೇರಿದ್ದು, ಅಂತಿಮವಾಗಿ ಸಿಎಂ ತೀರ್ಮಾನಕ್ಕೆ ಬಿಡಲಾಗಿದೆ. ಉಪ ಮೇಯರ್ ಆಯ್ಕೆ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿ ರಮಿಳಾ ಉಮಾಶಂಕರ್, ಪದ್ಮಾವತಿ ನರಸಿಂಹಮೂರ್ತಿ, ನೇತ್ರಾ ನಾರಾಯಣ್ ಅವರ ಹೆಸರು ಸೂಚಿಸಿ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಒಪ್ಪಿಗೆಗೆ ಕಳುಹಿಸಿದ್ದಾರೆ.
Related Articles
Advertisement
ಮ್ಯಾಜಿಕ್ ನಂಬರ್ 134: ಬಿಬಿಎಂಪಿ ಅಧಿಕಾರಿಗಳು ಸಿದ್ಧಪಡಿಸಿರುವ ಮತದಾರರ ಪಟ್ಟಿಯಂತೆ ಬಿಬಿಎಂಪಿಯ 198 ಸದಸ್ಯರೂ ಸೇರಿ ಒಟ್ಟು 266 ಜನರು ಮತದಾರರಿದ್ದಾರೆ. ಆ ಪೈಕಿ 28 ಶಾಸಕರು, 25 ವಿಧಾನ ಪರಿಷತ್ ಸದಸ್ಯರು, 10 ರಾಜ್ಯಸಭಾ ಸದಸ್ಯರು ಮತ್ತು 5 ಲೋಕಸಭಾ ಸದಸ್ಯರಿದ್ದಾರೆ.
ಮೇಯರ್ ಮತ್ತು ಉಪಮೇಯರ್ ಹುದ್ದೆಗೇರಲು ಅಭ್ಯರ್ಥಿಯು 134 ಮತಗಳನ್ನು ಪಡೆಯಬೇಕಿದೆ. ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿರುವವರು ಕೈ ಮೇಲೆತ್ತುವ ಮೂಲಕ ಮತ ಚಲಾವಣೆ ಮಾಡಬೇಕು. ಯಾವ ಅಭ್ಯರ್ಥಿ ಪರ ಎಷ್ಟು ಮತದಾರರು ಕೈ ಮೇಲೆತ್ತಲಿದ್ದಾರೆ ಅದನ್ನು ಆಧರಿಸಿ ಮೇಯರ್ ಮತ್ತು ಉಪಮೇಯರ್ ಯಾರು ಎಂಬುದನ್ನು ಘೋಷಿಸಲಾಗುತ್ತದೆ.
ಕಾಂಗ್ರೆಸ್ ಪಾಳಯದಲ್ಲಿ ಬಂಡಾಯದ ಭಯ: ಮೇಯರ್ ಆಯ್ಕೆಗೆ ಕಾಂಗ್ರೆಸ್‌ನಲ್ಲಿ ಕೊನೆ ಹಂತದ ಕಸರತ್ತು ನಡೆದಿರುವ ಜತೆಗೇ, ಬಂಡಾಯದ ಭೀತಿ ಕೂಡ ಆವರಿಸಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ಗುರುವಾರ ನಗರದ ಶಾಸಕರು, ಸಂಸದರ ಸಭೆ ನಡೆದಿದೆ. ಈ ವೇಳೆ ಸಂಸದರಾದ ಡಿ.ಕೆ. ಸುರೇಶ್, ಬಿ.ಕೆ.ಹರಿಪ್ರಸಾದ್, ಕೆ.ಸಿ.ರಾಮಮೂರ್ತಿ, ಶಾಸಕ ಮುನಿರತ್ನ ಹಾಗೂ ಬೈರತಿ ಬಸವರಾಜ್ ಅವರು, ಮೇಯರ್ ಹುದ್ದೆಗೆ ವೇಲು ನಾಯಕ್ ಅವರನ್ನೇ ಆಯ್ಕೆ ಮಾಡುವಂತೆ ಒತ್ತಡ ಹೇರಿದ್ದಾರೆ. ಒಂದೊಮ್ಮೆ ಬೇಡಿಕೆ ಈಡೇರದಿದ್ದರೆ ಚುನಾವಣೆಗೆ ಕೆಲ ಶಾಸಕರು ಗೈರಾಗುವ ಭಯವಿದೆ.
ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, “ನಗರದ ಹೊರ ವಲಯದ ಕಾರ್ಪೊರೇಟರ್‌ಗಳಲ್ಲಿ ಒಬ್ಬರನ್ನು ಮೇಯರ್ ಆಗಿ ಆಯ್ಕೆ ಮಾಡುವಂತೆ ಮನವಿ ಮಾಡಿದ್ದೇವೆ. ಅದಕ್ಕೆ ಬಹುತೇಕ ಸಂಸದರು ಒಪ್ಪಿದ್ದಾರೆ. ಮೇಯರ್ ಚುನಾವಣೆ ವೇಳೆ ಏನಾಗುತ್ತದೋ ನೋಡೋಣ. ಚುನಾವಣೆ ಬಹಿಷ್ಕರಿಸುವ ಕುರಿತು ಶಾಸಕ ಎಸ್.ಟಿ. ಸೋಮಶೇಖರ್ ನೀಡಿರುವ ಹೇಳಿಕೆಗೆ ನಮ್ಮ ಸಹಮತ ಇಲ್ಲ,’ ಎಂದು ಅವರು ಹೇಳಿದರು.
ವಿಪ್ ಜಾರಿ: ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಮಾತನಾಡಿ, ಮೇಯರ್ ಆಯ್ಕೆ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಶಾಸಕರು, ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಹೈ ಕಮಾಂಡ್ ತೀರ್ಮಾನ ಮಾಡಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಎಲ್ಲರಿಗೂ ವಿಪ್ ಜಾರಿ ಮಾಡಲಾಗುವುದು ಎಂದು ಹೇಳಿದರು. ಮೇಯರ್ ಅಭ್ಯರ್ಥಿ ಆಯ್ಕೆ ಕುರಿತು ನಡೆದ ಸಭೆಗೆ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್, ಗೋವಿಂದರಾಜ ನಗರ ಕ್ಷೇತ್ರದ ಶಾಸಕ ಪ್ರಿಯ ಕೃಷ್ಣ ಹಾಗೂ ಕೃಷಿ ಸಚಿವ ಕೃಷ್ಣ ಬೈರೇಗೌಡ ಗೈರು ಹಾಜರಾಗಿದ್ದರು.
ಸಿಎಂ ಅಭ್ಯರ್ಥಿ ಘೋಷಿಸುವ ಸಂಪ್ರದಾಯವೇ ಇಲ್ಲ: ಇದೇ ಸಂದರ್ಭದಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕೆಪಿಸಿಸಿ ಐಟಿ ಸೆಲ್ ನಡೆಸುತ್ತಿರುವ ಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗೂ ಮೊದಲು ಸಿಎಂ ಅಭ್ಯರ್ಥಿ ಘೋಷಣೆ ಮಾಡುವ ಸಂಪ್ರದಾಯ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಪಕ್ಷಕ್ಕೆ ಬಹುಮತ ಬಂದ ಮೇಲೆ ಯಾರು ಮುಖ್ಯಮಂತ್ರಿಯಾಗಬೇಕೆಂದು ಶಾಸಕಾಂಗ ಸಭೆಯಲ್ಲಿ ತೀರ್ಮಾನ ಆಗುತ್ತದೆ. ಸಿದ್ದರಾಮಯ್ಯ ಹಾಗೂ ನನ್ನ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಯ ನಂತರ ಸಿಎಂ ಅಭ್ಯರ್ಥಿ ಯಾರೆಂದು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.
-8 ಗಂಟೆ ಗುರುವಾರ ಬೆಳಗ್ಗೆ ನಾಮಪತ್ರ ಸಲ್ಲಿಕೆ ಪ್ರಾರಂಭ-11.30 ಚುನಾವಣೆ ಪ್ರಕ್ರಿಯೆ ಪ್ರಾರಂಭ
-266 ಹಕ್ಕು ಹೊಂದಿರುವ ಮತದಾರರು
-142 ಕಾಂಗ್ರೆಸ್-ಜೆಡಿಎಸ್-ಪಕ್ಷೇತರರ ಬಲ
-124 ಬಿಜೆಪಿ ಹೊಂದಿರುವ ಸದಸ್ಯ ಬಲ