ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ವ ಲಿಖಿತ ಉತ್ತರಗಳೊಂದಿಗೆ ಆಶು ಪ್ರಶ್ನೆಗಳನ್ನು ಎದುರಿಸುವ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಅವರು ಈಚೆಗೆ ಸಿಂಗಾಪುರದಲ್ಲಿನ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂವಾದದಲ್ಲಿ 21ನೇ ಶತಮಾನ ಏಶ್ಯಕ್ಕೆ ಸೇರಿದ್ದೆಂಬ ಕುರಿತ ಸಭಿಕರು ಕೇಳಿದ ಆಶು ಪ್ರಶ್ನೆಗಳಿಗೆ ಹಿಂದಿಯಲ್ಲಿ ಉತ್ತರಿಸಿದ್ದರು. ಆದರೆ ಅವರ ಹಿಂದಿ ಉತ್ತರವನ್ನು ಇಂಗ್ಲಿಷಿಗೆ ಪರಿವರ್ತಿಸಿ ಹೇಳಿದ ಭಾಷಾಂತರಕಾರ್ತಿ ಮೋದಿ ಹೇಳದ ಅನೇಕ ಮಾತುಗಳನ್ನು ಸೇರಿಸಿ ಪೂರ್ವ-ಲಿಖಿತ ಮಾದರಿಯಲ್ಲಿ ಹೇಳುತ್ತಿದ್ದರು ಎಂದು ರಾಹುಲ್ ಟೀಕಿಸಿದ್ದಾರೆ.
ಮೋದಿ ಅವರ ಹಿಂದಿ ಉತ್ತರ ಮತ್ತು ಭಾಷಾಂತರಕಾರ್ತಿ ಸಾದರ ಪಡಿಸಿದ ಇಂಗ್ಲಿಷ್ ತರ್ಜುಮೆಯ ವಿಡಿಯೋ ತುಣುಕನ್ನು ಟ್ವಿಟರ್‌ನಲ್ಲಿ ಅಪ್ ಲೋಡ್ ಮಾಡಿರುವ ರಾಹುಲ್, “ಪ್ರಧಾನಿ ಮೋದಿ ಅವರು ಆಶು ಪ್ರಶ್ನೆಗಳಿಗೆ ಪೂರ್ವ ಲಿಖೀತ ಉತ್ತರ ನೀಡುವ ದೇಶದ ಮೊದಲ ಪ್ರಧಾನಿ’ ಎಂದು ಟೀಕಿಸುವ ಬರಹವನ್ನು ಪ್ರಕಟಿಸಿದ್ದಾರೆ.
ರಾಹುಲ್ ಅವರ tweet ಹೀಗಿದೆ : ಆಶು ಪ್ರಶ್ನೆಗಳನ್ನು ಎದುರಿಸುವ ಭಾರತದ ಮೊದಲ ಪ್ರಧಾನಿ ಮೋದಿ ಅವರು ಭಾಷಾಂತರಕಾರರು ಸಿದ್ಧಪಡಿಸುವ ಪೂರ್ವ ಲಿಖಿತ ಉತ್ತರ ನೀಡುತ್ತಾರೆ. ನಿಜವಾದ ಪ್ರಶ್ನೆಗಳನ್ನು ಅವರು ಎದುರಿಸದಿರುವುದೇ ಒಳ್ಳೆಯದು. ಒಂದೊಮ್ಮೆ ಅವರು ಹಾಗೆ ಮಾಡಿದ್ದರೆ ನಮಗೆಲ್ಲ ಅದರಿಂದ ಇರಿಸು ಮುರಿಸು ಉಂಟಾಗುತ್ತಿತ್ತು.