ದಾವಣಗೆರೆ: ವಿಫಲಗೊಂಡ ಕೊಳವೆಬಾವಿ ಮುಚ್ಚದೆ ಇದ್ದ ಗುಂಡಿಗೆ ಬಿದ್ದು ಬಾಲಕ ಮೃತಪಟ್ಟ ಪ್ರಾಯಶಃ ದೇಶದಲ್ಲೇ ಪ್ರಪ್ರಥಮ ಘಟನೆ ಸಂಭವಿಸಿದ್ದು ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ!. ಹೌದು 2000ನೇ ಇಸ್ವಿ ಮಾ. 6 ರಂದು ದಾವಣಗೆರೆಯ ನಿಜಲಿಂಗಪ್ಪ ಬಡಾವಣೆ ಅಯ್ಯಪ್ಪಸ್ವಾಮಿ ದೇವಸ್ಥಾನ ಸಮೀಪ ಕಟ್ಟಡ ನಿರ್ಮಾಣಕ್ಕಾಗಿ ತೆಗೆಸಲಾಗಿದ್ದ ಕೊಳವೆಬಾವಿಯಲ್ಲಿ ಕರಿಯಪ್ಪ (6) ಎಂಬ ಬಾಲಕ ಮೃತಪಟ್ಟಿದ್ದ.
ಅಲ್ಲಿಯವರೆಗೆ ಕೊಳವೆಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಎಲ್ಲಿಯೂ ವರದಿಯಾಗಿರಲಿಲ್ಲ. ಹಾಗಾಗಿ ಕರಿಯಪ್ಪನ ಪ್ರಕರಣ ದೇಶದಲ್ಲೇ ವರದಿಯಾದ ಪ್ರಪ್ರಥಮ ಘಟನೆ ಎನ್ನಲಾಗುತ್ತದೆ. ಮೃತ ಕರಿಯಪ್ಪನ ತಂದೆ ಭರಮಪ್ಪ ನಿರ್ಮಾಣವಾಗುತ್ತಿದ್ದ ಕಟ್ಟಡದ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ.
ತನ್ನ ಅಣ್ಣ ಮಂಜುನಾಥ್‌ನೊಂದಿಗೆ ಆಟವಾಡುತ್ತಿದ್ದ ಕರಿಯಪ್ಪ ಕೊಳವೆಬಾವಿಯಲ್ಲಿ ಬಿದ್ದು, ನೋಡ ನೋಡುತ್ತಿದ್ದಂತೆ 30 ಅಡಿಗೂ ಹೆಚ್ಚು ಆಳಕ್ಕೆ ಕುಸಿದಿದ್ದನು. ಕರಿಯಪ್ಪನ ಜೊತೆ ಆಟವಾಡುತ್ತಿದ್ದ ಮಂಜುನಾಥ್ ತನ್ನ ತಂದೆ ಭರಮಪ್ಪನಿಗೆ ಕರಿಯಪ್ಪ ಕೊಳವೆಬಾವಿಯಲ್ಲಿ ಬಿದ್ದ ವಿಷಯ ತಿಳಿಸಿದಾಗ ಅವರು ನಂಬಿರಲಿಲ್ಲ.
ಯಾವುದೋ ಗುಂಡಿಗೆ ಬಿದ್ದಿರಬಹುದು ಅಂದುಕೊಂಡಿದ್ದರು. ಏಕೆಂದರೆ ಅಲ್ಲಿಯವರೆಗೂ ಯಾರೂ ಸಹ ಕೊಳವೆಬಾವಿಯಲ್ಲಿ ಬಿದ್ಧದ್ದನ್ನು ಅಪ್ಪಿತಪ್ಪಿಯೂ ಕೇಳಿರಲಿಲ್ಲ. ಕರಿಯಪ್ಪ ಕೊಳವೆಬಾವಿಗೆ ಬಿದ್ದ ವಿಷಯ ತಿಳಿದ ಪೊಲೀಸರು, ಅಧಿಕಾರಿಗಳು ಸಹ ಆಶ್ಚರ್ಯಕ್ಕೆ ಒಳಗಾಗಿದ್ದರು.
ಎರಡು ದಿನಗಳ ಸತತ ಕಾರ್ಯಾಚರಣೆ ಕೈಗೊಂಡಿದ್ದರೂ ಕರಿಯಪ್ಪನನ್ನು ಉಳಿಸಿಕೊಳ್ಳಲಿಕ್ಕೆ ಆಗಿರಲಿಲ್ಲ. ಕರಿಯಪ್ಪನ ತಂದೆ ಭರಮಪ್ಪ ಮೂಲತಃ ಹಿರೇಕೆರೂರು ತಾಲೂಕಿನ ಹಾಲಗೆರೆ ಗ್ರಾಮದವರು. ಜೀವನ ನಿರ್ವಹಣೆಗಾಗಿ ದಾವಣಗೆರೆಗೆ ಬಂದಿದ್ದರು.
ತಾಯಿ ಹನುಮಕ್ಕ ಮನೆ ಕೆಲಸಕ್ಕೆಂದು ಹೋಗಿದ್ದ ವೇಳೆ ಅಣ್ಣನ ಜೊತೆ ಆಟವಾಡಲಿಕ್ಕೆ ಹೋಗಿದ್ದ ಕರಿಯಪ್ಪ ಆಕಸ್ಮಿಕವಾಗಿ ಕೊಳವೆಬಾವಿಗೆ ಬಿದ್ದು ಬಾರದ ಲೋಕಕ್ಕೆ ಹೋಗಿ 17 ವರ್ಷ ಕಳೆದರೂ ಆ ಕುಟಂಬಕ್ಕೆ ಸಿಕ್ಕಿರುವುದು ಎಸ್.ಎಂ. ಕೃಷ್ಣ ನಗರದಲ್ಲಿ ನೀಡಿರುವ ಆಶ್ರಯ ಮನೆ ಮಾತ್ರ. ಆಗ ಭಾರೀ ಭರವಸೆ ನೀಡಿದ್ದವರು ಮತ್ತೆ ಕರಿಯಪ್ಪನ ಕುಟುಂಬದತ್ತ ತಿರುಗಿಯೂ ನೋಡಲಿಲ್ಲ. ಈ ಕ್ಷಣಕ್ಕೂ ನೋಡಿಲ್ಲ.