Advertisement

ವ್ಹಾ ಮೇರೆ ಷೇರು!

09:27 AM Jan 02, 2018 | |

ಪರಿಸ್ಥಿತಿಯ ಕೈಗೊಂಬೆಯಾಗಿ ನನ್ನದಲ್ಲದ ತಪ್ಪಿಗೆ ವಿದ್ಯಾಭ್ಯಾಸ ಹಳಿತಪ್ಪಿ, ಭವಿಷ್ಯದ ತಲ್ಲಣಗಳು ಅಧೀರಗೊಳಿಸಿ ಹೈರಾಣಾಗಿದ್ದೆ. ಮಗ ಕೈ ಬಿಟ್ಟು ಹೋದಾನು ಎಂದೆಣಿಸಿದ ಅಪ್ಪ, ವಾತಾವರಣ ಬದಲಾದಲ್ಲಿ ಸರಿಯಾದಾನು ಎಂದು ನನ್ನನ್ನು ತಲುಪಿಸಿದ್ದು ಬೆಂಗಳೂರಿನ ನನ್ನಣ್ಣನ ಮನೆಗೆ. 

Advertisement

 ಹೆಚ್ಚೇನೂ ಓದಿಲ್ಲದ ನನ್ನನ್ನು ಷೇರು ದಲ್ಲಾಳಿಯ ಬಳಿ ಕೆಲಸಕ್ಕೆ ಸೇರಿಸಲಾಯಿತು. ಹಳ್ಳಿಯಿಂದ ಬಂದ ನನಗೆ ಇಂಗ್ಲಿಷ್‌ ಮೇಲೆ ಹಿಡಿತವಿರಲಿಲ್ಲ. ಹಾಗಾಗಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಬಹಳ ತ್ರಾಸವಾಯಿತು. ನನ್ನ ಇತಿಮಿತಿಗಳನ್ನು ಅರಿತಿದ್ದ ಸಹೋದ್ಯೋಗಿಗಳು ಕನ್ನಡಿಗರಾಗಿದ್ದರೂ, ಇಂಗ್ಲಿಷನ್ನೇ ಮುಂದಿಟ್ಟುಕೊಂಡು ಬಹಳವೇ ಶೋಷಣೆ ಮಾಡಿದ್ರು. ಕೆಲಸವಿಲ್ಲದಿದ್ದರೂ ಹೆಚ್ಚಿನ ಸಮಯ ಆಫೀಸಿನಲ್ಲಿ ಉಳಿಯುವಂತೆ ಮಾಡ್ತಿದ್ರು. ನಾನಲ್ಲಿ ಸೇರಿಕೊಂಡದ್ದು ಲೆಕ್ಕಿಗನ ಸಹಾಯಕನಾಗಿಯಾದ್ರೂ, ಕಚೇರಿಯ ಪರಿಚಾರಕ ರಜೆಯಲ್ಲಿದ್ದಾಗ ನನ್ನಿಂದಲೇ ಕಾಫಿ ಕಪ್ಪುಗಳು ಶುಚಿಗೊಳಿಸಲ್ಪಡುತ್ತಿದುÌ. 

ಪ್ರತಿಕೂಲ ವಾತಾವರಣದ ಹೊರತಾಗಿಯೂ ನನಗೆ ಸಿಕ್ಕಿರೋ ಕೊನೆಯ ಅವಕಾಶವೆಂಬಂತೆ ಅದಕ್ಕೇ ಆತುಕೊಂಡ ನಾನು ಅಲ್ಲಿನ ಕೆಲಸಕಾರ್ಯಗಳನ್ನು ಬೇಗನೆ ಗ್ರಹಿಸಿಕೊಂಡೆ. ಕಾಲಕ್ರಮೇಣದಲ್ಲಿ ನನ್ನ ಕಾರ್ಯಕ್ಷಮತೆಯನ್ನು ಮನಗಂಡ ಸಹೋದ್ಯೋಗಿಗಳಿಂದ ಗೌರವವೂ ಸಿಕ್ಕಿತು. ಇನ್ನೇನು ಮುಗಿದೇಹೋಯ್ತು ಎಂದುಕೊಂಡ ಬದುಕಿಗೆ ಲಂಗರು ಹಾಕಲು ಸಾಧ್ಯವಾಗಿದ್ದು ಹಾಗೂ ಅವನತಿಯತ್ತ ಸಾಗಿದ್ದ ವಿಶ್ವಾಸ ಮರುಸ್ಥಾಪಿತಗೊಳ್ಳಲು ಸಾಧ್ಯವಾಗಿದ್ದು ಶ್ರದ್ಧೆ ಹಾಗೂ ಪರಿಶ್ರಮದಿಂದಲೇ. 

ನೆಲೆಗೊಂಡ ವಿಶ್ವಾಸ ನನ್ನ ಓದು ಮುಂದುವರಿಕೆಗೆ ಸಹಕಾರಿಯಾಗಿದ್ದಲ್ಲದೆ, ಪೂರ್ವಾಶ್ರಮದಲ್ಲಿ ಪ್ರಾಪ್ತಿಯಾದ ಅರಿವಿನಿಂದಾಗಿ ನಂತರದಲ್ಲಿ ಸ್ವಂತದ “ಬಂಡವಾಳ ನಿರ್ವಹಣೆ ಸೇವಾ’ ಸಂಸ್ಥೆ ಪ್ರಾರಂಭಿಸಲು ಪ್ರೇರಕವಾಯ್ತು. ಸ್ವಸಾಮರ್ಥ್ಯದ ಬಗ್ಗೆ ನೆಚ್ಚಿಕೆಯಿಟ್ಟು, ಮಾಡೋ ಕೆಲಸದಲ್ಲಿ ತನ್ಮಯತೆಯಿಂದ ಸಮರ್ಪಿಸಿಕೊಂಡಲ್ಲಿ ತಡವಾಗಿಯಾದ್ರೂ ಫ‌ಲ ಸಿಗುತ್ತೆ ಅನ್ನೋದು ನನ್ನ ನಂಬಿಕೆ. 

ಬಿ.ಸಿ. ನಾಗೇಂದ್ರ

Advertisement
Advertisement

Udayavani is now on Telegram. Click here to join our channel and stay updated with the latest news.

Next