ದಾಂಡೇಲಿ: ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಉದ್ಯೋಗ ನೀಡಿ ಎಂದು ಡಿವೈಎಫ್‌ಐ ಸಂಘಟನೆ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸರಕಾರವನ್ನು ಆಗ್ರಹಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಬಂದ ನಂತರ ದೇಶದ ಪರಿಸ್ಥಿತಿ ತೀರಾ ಬದಲಾಗಿದೆ. ರಾಜ್ಯದಲ್ಲಿ ಎರಡು ಲಕ್ಷ ಅರ್ವತ್ತು ಸಾವಿರ ಉದ್ಯೋಗ ಖಾಲಿಯಿದೆ. ಸರೋಜಿನಿ ಮಹಿಷಿ ವರದಿಯು ಆದ್ಯತೆಯ ಮೇರೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕೆಂದು ಹೇಳಿದ್ದರೂ ಸ್ಥಳೀಯರಿಗೆ ಉದ್ಯೋಗ ನೀಡಲಾಗುತ್ತಿಲ್ಲ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಕೈಗಾರಿಕೆ ಬಿಟ್ಟರೆ ಬೇರೆ ಕಡೆ ಯಾವ ತಾಲೂಕಿನಲ್ಲಿಯೂ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಲಾಗಿಲ್ಲ. ದಾಂಡೇಲಿಯಲ್ಲಿ ಕಾಗದ ಕಾರ್ಖಾನೆ ಬಿಟ್ಟರೆ, ಸ್ಥಗಿತಗೊಂಡ ಕಾರ್ಖಾನೆಗೆ ಪರ್ಯಾಯವಾಗಿ ಯಾವೊಂದು ಕಾರ್ಖಾನೆಯನ್ನು ಪ್ರಾರಂಭಿಸಲಾಗಿಲ್ಲ ಎಂದು ಮುನೀರ್ ಕಾಟಿಪಳ್ಳ ಕಿಡಿಕಾರಿದರು.
ರಾಜ್ಯ ಮತ್ತು ಕೇಂದ್ರ ಸರಕಾರ ಉದ್ಯೋಗ ಸೃಷ್ಟಿಸುವಲ್ಲಿ ಸಂಪೂರ್ಣ ಸೋತಿದೆ. ಕೇವಲ ನಾಮಕಾವಸ್ಥೆ ಯೋಜನೆ ಜಾರಿ ಮಾಡಿದರೆ ಸಾಕಾಗಲ್ಲ. ಪರಿಪಕ್ವವಾದ ಮತ್ತು ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗುವ ನಿಟ್ಟಿನಲ್ಲಿ ಯೋಜನೆ ಜಾರಿಯಾಗಿಲ್ಲ. ಅದೇರೀತಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದ್ದರೂ, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಬಲ್ಲ ಯೋಜನಾಬದ್ಧ ನಿಯಾಮವಳಿಗಳನ್ನು ಜಾರಿಗೊಳಿಸಲಾಗಿಲ್ಲ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಸ್ಪಷ್ಟ ನೀತಿ, ನಿಯಮಗಳನ್ನು ಅಳವಡಿಸಿ, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗುವ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಮೀನುಗಾರಿಕೆ ಅಭಿವೃದ್ಧಿಗೆ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಉ.ಕ ಜಿಲ್ಲೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಆರಂಭಿಸಬೇಕು ಎಂದು ಡಿವೈಎಫ್‌ಐ ಸಂಘಟನೆ ಹೋರಾಟ ಮಾಡುತ್ತಾ ಬಂದರೂ, ಈ ಬಗ್ಗೆ ಸರಕಾರವಾಗಲೀ, ಜನಪ್ರತಿನಿಧಿ ಗಳಾಗಿ ಮುಂದಾಗಿಲ್ಲ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು. ಜಿಲ್ಲೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇಲ್ಲದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಚಿಕಿತ್ಸೆಗಾಗಿ ಹೊರ ಜಿಲ್ಲೆಗೆ, ಹೊರ ರಾಜ್ಯಕ್ಕೆ ಹೋಗಬೇಕಾದ ಸಂದಿಗ್ಧ ಸ್ಥಿತಿಯಿದೆ. ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡು ಸಂಪೂರ್ಣ ವಿಫಲವಾಗಿವೆ. ಕೊರೊನಾದಿಂದಾಗಿ ಹಲವಾರು ಕ್ಷೇತ್ರದಲ್ಲಿ ಉದ್ಯೋಗ ನಷ್ಟವಾಗಿದೆ ಎಂದು ಸರಕಾರ ಹೇಳುತ್ತಿದೆ. ಆದರೆ ಕೊರೊನಾ ಪೂರ್ವದಲ್ಲೆ ಅನೇಕ ಉದ್ಯಮಗಳು ಕಾರ್ಮಿಕರನ್ನು, ಯುವಕರನ್ನು ಕೆಲಸದಿಂದ ತೆಗೆದು ಹಾಕಿವೆ. ಸರಕಾರ ಅನುಸರಿಸುತ್ತಿರುವ ಆರ್ಥಿಕ ನೀತಿ ಮತ್ತು ಕಾರ್ಪೊರೇಟ್ ನೀತಿಯಿಂದ ಅನೇಕ ಸಾರ್ವಜನಿಕ ಉದ್ಯಮಗಳು ಮುಚ್ಚುತ್ತಿವೆ. ಇದು ದೇಶದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದ ಮುನೀರ್ ಕಾಟಿಪಳ್ಳ, ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಉದ್ಯೋಗ ದೊರಕಿಸಿ ಎಂದು ಡಿವೈಎಫ್‌ಐ ರಾಜ್ಯಾದಾದ್ಯಂತ ಚಳವಳಿ ಆರಂಭಿಸಲಿದೆ ಎಂದರು.
ಡಿವೈಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಸ್ಯಾಮಸನ್, ಸಂಘಟನೆ ಪ್ರಮುಖರಾದ ಇಮ್ರಾನ್, ಕಾಂತರಾಜ್ ಉಪಸ್ಥಿತರಿದ್ದರು.