Advertisement

ಜಲಶಕ್ತಿ ಅಭಿಯಾನದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ

06:12 PM Aug 14, 2021 | Shreeram Nayak |

ಶಿವಮೊಗ್ಗ: ಜಲಶಕ್ತಿ ಅಭಿಯಾನದಲ್ಲಿ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ
ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ಜಲಶಕ್ತಿ ಅಭಿಯಾನಕ್ಕೆ (ಕ್ಯಾಚ್‌ ದಿ ರೇನ್‌) ಮಾರ್ಚ್‌ 22 ರಂದು ಪ್ರಧಾನ ಮಂತ್ರಿ ಮೋದಿಯವರು ಚಾಲನೆ ನೀಡಿದ್ದರು. ಏಪ್ರಿಲ್‌ 9 ರಂದು ರಾಜ್ಯದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈಗ ಅದನ್ನು ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಅಂತರ್ಜಲ ಹೆಚ್ಚಿಸುವುದು, ಕೆರೆಗಳ ನಿರ್ಮಾಣ, ಕೃಷಿ ಹೊಂಡ, ಚೆಕ್‌ ಡ್ಯಾಮ್‌ ಮುಂತಾದವುಗಳ ನಿರ್ಮಾಣ, ವಿಶೇಷವಾಗಿ ಬಯಲು ಸೀಮೆ ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಈ ಯೋಜನೆಯಡಿ ಇಡೀ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಡೆಯುತ್ತಿದ್ದು, ದೇಶದಲ್ಲಿಯೇ ಮೊದಲ ಸ್ಥಾನ ಪಡೆದಿದೆ ಎಂದರು.

ಇದನ್ನೂ ಓದಿ:ದಕ್ಷಿಣಕನ್ನಡ ಸೇರಿ ಎಂಟು ಜಿಲ್ಲೆಗಳಲ್ಲಿ ಈ ಹಿಂದಿನ ನಿಯಮಗಳೇ ಮುಂದುವರಿಕೆ : ಹೊಸ ನಿಯಮಗಳಿಲ್ಲ

ಕೇಂದ್ರ ಸರ್ಕಾರ ರಾಜ್ಯದ ಕೆಲಸ ಗುರುತಿಸಿ ಸುಮಾರು 13 ಕೋಟಿ ಮಾನವ ದಿನಗಳನ್ನು ನೀಡಿತ್ತು. ಅದನ್ನು ನವೆಂಬರ್‌ ತಿಂಗಳಲ್ಲಿಯೇ ಯಶಸ್ವಿಯಾಗಿ ಮುಗಿಸಿ ಕೇಂದ್ರಕ್ಕೆ ಮತ್ತೆ ಬೇಡಿಕೆ ಸಲ್ಲಿಸಿ ಎರಡು ಕೋಟಿ ಮಾನವ ದಿನಗಳನ್ನು ಹೆಚ್ಚುವರಿಯಾಗಿ ಪಡೆಯಲಾಗಿತ್ತು. ಅಲ್ಲದೆ
ಕೇಂದ್ರ ಸರಕಾರ 800 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಈಗಾಗಲೇ ಹಲವು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒಗಳಿಗೆ ತರಬೇತಿ ಶಿಬಿರ ಯಶಸ್ವಿಯಾಗಿ ನಡೆಸಲಾಗಿದೆ. ಶಿವಮೊಗ್ಗ ಜಿಲ್ಲೆಯಿಂದ ಆರಂಭಗೊಂಡ ತರಬೇತಿ ಶಿಬಿರ ರಾಜ್ಯಾದ್ಯಂತ ಮುಂದುವರೆಯುತ್ತಿದೆ. ಗ್ರಾಪಂ ಸದಸ್ಯರಿಗೂ
ಇದನ್ನು ವಿಸ್ತರಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಮೇಯರ್‌ ಸುನಿತಾ ಅಣ್ಣಪ್ಪ, ಉಪ ಮೇಯರ್‌ ಶಂಕರ್‌ ಗನ್ನಿ, ಚನ್ನಬಸಪ್ಪ, ನಾಗರಾಜ್‌, ಕೆ.ವಿ. ಅಣ್ಣಪ್ಪ, ಹಿರಣ್ಣಯ್ಯ ಇದ್ದರು

28 ಸಾವಿರ ಕೆರೆ ಅಭಿವೃದ್ಧಿ
ಜಿಪಂ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಸುಮಾರು 28 ಸಾವಿರ ಕೆರೆಗಳನ್ನು ಗ್ರಾಪಂ ವ್ಯಾಪ್ತಿಯಿಂದ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದರು. ಕೆರೆ ಒತ್ತುವರಿಯನ್ನು ಕಡ್ಡಾಯವಾಗಿ ತೆರವುಗೊಳಿಸಲಾಗುವುದು. ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವ ಶಾಲಿಗಳಾಗಿದ್ದರೂ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮೊದಲು ಮನವಿ ಮಾಡಲಾಗುವುದು. ನಂತರ ಕಾನೂನು ಕ್ರಮ
ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next