Advertisement

ಫ‌ಸ್ಟ್‌ ಡೇ, ಫ‌ಸ್ಟ್‌ ಶೋ, ಲೆಕ್ಚರರ್ ಕಂಡಂತೆ, ಹೊಚ್ಚ ಹೊಸಬರ ಮುಖಗಳು!

03:45 AM Jul 04, 2017 | Harsha Rao |

ಇವರಿಗೆ ಕಣ್ಣಿಗೆ ಕಂಡಿದ್ದೆಲ್ಲ ಹೊಸತು. ಇಲ್ಲಿ ಸೀನಿಯರ್‌ ಯಾರೋ? ಲೆಕ್ಚರರ್‌ ಯಾರೋ? ಕನ್‌ಫ್ಯೂಶನ್ನು! ಇಷ್ಟ್ ದೊಡ್ಡ ಕಾಲೇಜಲ್ಲಿ ನಾನು ಕೂರುವ ಗೂಡು ಯಾವುದೆಂಬ ತಣಿಯದ ಕುತೂಹಲ… ಇಂಥ ನೂರಾರು ಬೆರಗುಗಳನ್ನು ಮೊಗದಲ್ಲಿ ಹುದುಗಿಸಿಕೊಂಡು ಹೊಸ ಹುಡುಗರು ಕಾಲೇಜಿಗೆ ಕಾಲಿಟ್ಟಿದ್ದಾರೆ. ಉಪನ್ಯಾಸಕರ ಕಣ್ಣಿಗೆ ಈ ಫ್ರೆಶರ್ ಹೇಗೆ ಕಾಣಿಸುತ್ತಾರೆ? ಹೊಸಬರು ಅವರ ಮುಂದೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ಇಲ್ಲಿ ಕೆಲವು ಲೆಕ್ಚರರ್ ಸ್ವಾರಸ್ಯವಾಗಿ ತೆರೆದಿಟ್ಟಿದ್ದಾರೆ…

Advertisement

ಬೆರಗು, ಬೆರಗು ಮತ್ತು ಬೆರಗು. ಅದು ಬಿಟ್ಟರೆ ಕೊಂಚ ಆತಂಕ, ಇನ್ನೊಂದಿಷ್ಟು ಗೊಂದಲ. ಕ್ಯಾಂಪಸ್ಸಿಗೆ ಹೊಸದಾಗಿ ಕಾಲಿಟ್ಟ ಹುಡುಗ ಹುಡುಗಿಯರ ಕಂಗಳಲ್ಲಿ ನೂರೆಂಟು ಕಥಾನಕಗಳು. ಆಗಷ್ಟೇ ತೆರೆದುಕೊಂಡ ಆ ಗಂಧರ್ವಲೋಕದಲ್ಲಿ ಅವರಿಗೆ ಎಲ್ಲವೂ ಹೊಸತು, ಕಣ್ಣಿಗೆ ಬಿದ್ದಿದ್ದೆಲ್ಲ ಅಪರಿಚಿತ.

ಒಬ್ಬೊಬ್ಬರಾಗಿ ಬರುವವರು ಕೆಲವರು, ಗುಂಪುಗುಂಪಾಗಿ ನಡೆಯುವವರು ಹಲವರು. “ಏನಪಾ ಎಂಟ್ರೇನ್ಸೇ ಹೀಗಿದೆ, ಇನ್ನು ಒಳಗೆಲ್ಲಾ ಹೇಗಿದೆಯೋ?’ ಅವರ ನಡುವೆಯೇ ಗುಸುಗುಸು ಪಿಸಪಿಸ. “ಕ್ಲಾಸ್‌ ಎಷ್ಟೊತೊ? ಮೊದಲ ದಿನ ಅಲ್ವಾ? ಕ್ಲಾಸ್‌ ಮಾಡ್ತಾರೋ, ಬಿಟ್‌ಬಿಡ್ತಾರೋ? ಇವತ್ತೂಂದಿನ ಬೇಗ ಬಿಟ್ರೆ ಚೆನ್ನಾಗಿತ್ತು’- ಗುಂಪಿನೊಳಗೆ ಹಲವು ಮಾತು. “ತಡೀ ಮಗ, ಮೊದ್ಲು ಒಳಗೆ ಹೋಗೋಣ. ಒಂದು ಐಡಿಯಾ ಬರುತ್ತೆ’ , ಅವರಲ್ಲೊಬ್ಬ ಧೈರ್ಯವಂತ ನಾಯಕತ್ವ ವಹಿಸುತ್ತಾನೆ.

“ಏನೇ, ಎಷ್ಟೊಂದು ದುರುಗುಟ್ಕೊಂಡು ನೋಡ್ತಿದಾರೆ, ಈ ಹುಡುಗ್ರು? ಸೀನಿಯರ್ಶೇ ಇರಬೇಕು’ ಅನ್ಸುತ್ತೆ. “ಅಯ್ಯೋ, ಈ ಕಾಲೇಜ್‌ ತುಂಬಾ ಬರೀ ಹುಡುಗ್ರೇ ಇದಾರೇನೋ? ಸದ್ಯ ಅದೇನೋ ರ್ಯಾಗಿಂಗ್‌ ಅಂತಾರಲ್ಲ, ಅದಿಲ್ಲದಿದ್ರೆ ಸಾಕು… ಭಯ ಆಗುತ್ತೆ ಕಣೇ…’, ಇನ್ನೊಂದಷ್ಟು ಬೆದರಿದ ಹರಿಣಿಗಳ ತಂಡ ಮೆಲ್ಲಮೆಲ್ಲನೆ ಮುಂದಡಿಯಿಡುತ್ತದೆ.
“ಯಪ್ಪಾ… ಎಷ್ಟೊಂದು ನೋಟೀಸ್‌ ಬೋರ್ಡುಗಳು ಈ ಕಾಲೇಜಿನಲ್ಲಿ! ಗೋಡೆ ತುಂಬಾ ಬರೀ ನೋಟೀಸ್‌ ಬೋರ್ಡುಗಳೇ! ಯಾವ ಬೋರ್ಡಿನಲ್ಲಿ ಏನಿದೆಯೋ? ಮೂರಂತಸ್ತಿನ ಕಟ್ಟಡದಲ್ಲಿ ಎಷ್ಟು ಕ್ಲಾಸು ರೂಮುಗಳಿವೆಯೋ? ನಮ್ಮ ಕ್ಲಾಸು ಎಲ್ಲಿ ನಡೆಯುತ್ತೋ? ಮೇಲೆ ಹತ್ತಿದ ಮೇಲೆ ಕೆಳಗಿಳಿಯೋ ದಾರಿ ಕಾಣಿಸದಿದ್ದರೆ ಏನು ಗತಿ?’ ನೂರು ಮನಸ್ಸುಗಳಲ್ಲಿ ಮುನ್ನೂರು ಪ್ರಶ್ನೆಗಳು.

ಕಾಲೇಜಿನ ಕಾರಿಡಾರುಗಳ ತುದಿ ಬದಿಗಳಲ್ಲಿ ಅಯೋಮಯರಾಗಿ ನಿಂತು ಇನ್ನೆಲ್ಲಿಗೆ ಹೋಗುವುದೆಂದು ಅರ್ಥವಾಗದೆ ಕಳವಳವೇ ಜೀವ ತಳೆದು ಬಂದಂತೆ ನಿಂತ ಹುಡುಗ ಹುಡುಗಿಯರಿದ್ದಾರೆಂದರೆ ಅವರು ಹೊಚ್ಚಹೊಸಬರೆಂದೇ ಅರ್ಥ. “ಅಯ್ಯೋ, ಈ ಅನ್ಯಗ್ರಹದಲ್ಲಿ ನಮಗೆ ಸಹಾಯ ಮಾಡುವ ಮನುಷ್ಯ ಜೀವಿಗಳು ಯಾರಾದರೂ ಇದ್ದಾರೆಯೇ…?’, ಹಣೆಯಲ್ಲಿ ಬೆವರ ಹನಿಗಳು ಸಾಲುಗಟ್ಟುತ್ತವೆ. 

Advertisement

ಹಾ! ಕಾರಿಡಾರಿನ ಆ ತುದಿಯಿಂದ ಯಾರೋ ಒಬ್ಬರು ಬಿರಬಿರನೆ ನಡೆದು ಬರುತ್ತಿದ್ದಾರೆ. “ಅವರೇ ಪ್ರಿನ್ಸಿಪಾಲರೋ ಏನೋ? ನಮ್ಮ ಹಳೇ ಕಾಲೇಜಿನ ಪ್ರಿನ್ಸಿಪಾಲರ ಥರ ಭಯಂಕರ ಸಿಟ್ಟಿನ ಜಮದಗ್ನಿ ಮಹಾಮುನಿಗಳೇ ಇವರೂ ಆಗಿದ್ದರೆ ಏನ್ಮಾಡೋದು? ಕೆಂಗಣ್ಣು ಬಿಡ್ತಾ ಇಲ್ಯಾಕ್ರೋ ನಿಂತಿದ್ದೀರಾ ಎಂದು ಗದರಿದರೆ ಹೋಗೋದು ಎಲ್ಲಿಗೆ?’. “ಓಹ್‌, ಅವರು ಪ್ರಿನ್ಸಿಪಾಲರು ಅಲ್ಲ ಅನಿಸುತ್ತೆ. ಪ್ರಿನ್ಸಿಪಾಲರಾಗಿದ್ದರೆ ಒಂದಾದರೂ ಕೂದಲು ಬಿಳಿಯಾಗಿರೋದು, ಇವರ್ಯಾರೋ ಮೇಷ್ಟ್ರೇ ಇರಬೇಕು’. “ಅಲ್ಲಲ್ಲ, ಮೇಷ್ಟ್ರೇ ಅಂತ ಏನು ಗ್ಯಾರಂಟಿ? ಇನ್ನೂ ಹಾಗೆ ಮೀಸೆ ಮೊಳೆತಿದೆ ಅಷ್ಟೇ… ಸೀನಿಯರ್ಸ್‌ ಅಲ್ಲ ಅಂತ ಹೇಗೆ ಹೇಳ್ಳೋದು? ವಿಶ್‌ ಮಾಡೋದೋ ಬೇಡ್ವೋ? ಒಂದು ವೇಳೆ ಸ್ಟೂಡೆಂಟೇ ಆಗಿದ್ದು ನಾವು ಗುಡ್‌ ಮಾರ್ನಿಂಗ್‌ ಸರ್‌ ಅಂತ ಭಯಭಕ್ತಿಯಿಂದ ಹೇಳಿದ್ರೆ ಆ ಪುಣ್ಯಾತ್ಮ ಗೊಳ್‌ ಅಂತ ನಕ್ಕು ಮಾನ ಮರ್ಯಾದೆ ಕಳೀದೇ ಇರ್ತಾನಾ?’, ಹೊಸ ಹುಡುಗರ ಮುಖದ ತುಂಬಾ ಬರೀ ಪ್ರಶ್ನೆಗಳೇ.

ಅಂತೂ ಅವರಿವರಲ್ಲಿ ಕೇಳಿ, ಮಾಹಿತಿ ಪಡೆದು, ಕ್ಲಾಸ್‌ರೂಂ ಹೊಕ್ಕು ಮಿಸುಕಾಡದಂತೆ ಕುಳಿತಿರುತ್ತವೆ ಆತಂಕದ ಕಣ್ಣುಗಳು. ಬೆಳಗಿನಿಂದ ಯಾವ ಮಿಸ್ಸೂ ಕಣ್ಣಿಗೆ ಬಿದ್ದಿಲ್ಲ ಇವತ್ತು; ಬರೀ ಮೇಷ್ಟ್ರುಗಳೇ ತುಂಬಿದ್ದಾರೇನೋ ಈ ಕಾಲೇಜಿನಲ್ಲಿ? ಎಂತೆಂಥ ಮೇಷ್ಟ್ರುಗಳಿದ್ದಾರೋ ಏನೋ? ಕಾಲೇಜ್‌ ಅಂದ್ರೆ ಬರೀ ಇಂಗ್ಲಿಷಲ್ಲೇ ಮಾತಾಡ್ತಾರೆ ಅಂತ ಪಕ್ಕದ್ಮನೆ ಅಣ್ಣ ಹೇಳ್ತಿದ್ದ. ಇಲ್ಲೂ ಅದೇ ಕಥೆಯೋ ಏನೋ? ಇವರೆಲ್ಲಾ ಇಂಗ್ಲಿಷಲ್ಲೇ ಮಾತಾಡಕ್ಕೆ ಶುರು ಮಾಡಿದರೆ ನನ್ನ ಗತಿಯೇನು ಭಗವಂತಾ?’, ಆತಂಕದ ಹಿಂದಿನ ಪ್ರಶ್ನೆಗಳಿಗೆ ತುದಿಮೊದಲಿಲ್ಲ.

ಸಮಯಕ್ಕೆ ಸರಿಯಾಗಿ ಅಟೆಂಡೆನ್ಸ್‌ ಬುಕ್‌ ಹಿಡಕೊಂಡು ಒಳಹೊಕ್ಕು ಪೋಡಿಯಂ ಏರುತ್ತೇನೆ ನಾನು. ಎಲ್ಲರೂ ಮಿಕಮಿಕ ನೋಡುತ್ತಾ ಧಡಬಡನೆ ಎದ್ದುನಿಂತು ನಮಸ್ಕಾರ ಹೇಳಬೇಕೋ ಬೇಡವೋ ಅನುಮಾನದಿಂದ ನೋಡುತ್ತಾರೆ. “ಗುಡ್‌ ಮಾರ್ನಿಂಗ್‌. ಹೌ ಆರ್‌ ಯೂ? ವೆಲ್‌ಕಂ ಟು ದಿ ನ್ಯೂ ಕಾಲೇಜ್‌…’ ನಾನೇ ಮಾತು ಆರಂಭಿಸುತ್ತೇನೆ. ಅವರ ಮುಖದಲ್ಲಿನ ಗಾಬರಿ ಇಮ್ಮಡಿಯಾಗುತ್ತದೆ. “ಅಂದ್ಕೊಂಡಂಗೇ ಆಯ್ತು… ಯಾರೋ ಬ್ರಿಟಿಷ್‌ ಮಹಾಪ್ರಜೆ ಇರಬೇಕು. ಇಂಗಿಷ್‌ ಬಿಟ್ಟು ಇನ್ನೇನೂ ಬರಲ್ಲ ಅನ್ಸುತ್ತೆ’ ಎಂಬಹಾಗೆ ಹಿಂದಿನ ಸಾಲಿನ ಹುಡುಗಿ ಪಕ್ಕದವಳ ಕಿವಿಯಲ್ಲಿ ಅದೇನೋ ಉಸುರುತ್ತಾಳೆ.

“ಎಲ್ಲರೂ ಚೆನ್ನಾಗಿದ್ದೀರೇನ್ರೊ? ಕುಳಿತುಕೊಳ್ರೋ’ - ನಾನೇ ಮತ್ತೆ ನಕ್ಕು ಅಚ್ಚಗನ್ನಡದಲ್ಲಿ ಮಾತಾಡುತ್ತೇನೆ. ಗರಬಡಿದಂತೆ ನಿಂತ ತರಗತಿ ಮೊತ್ತಮೊದಲ ಬಾರಿಗೆ “ಉಸ್ಸಪ್ಪಾ’ ಎಂದು ಸಾವರಿಸಿಕೊಂಡು ತಣ್ಣನೆ ಕುಳಿತುಕೊಳ್ಳುತ್ತದೆ. “ಪರವಾಗಿಲ್ವೋ, ಈ ಮನುಷ್ಯನಿಗೆ ಕನ್ನಡಾನೂ ಬರುತ್ತೆ!’- ಹಾಗಂತ ಅವರವರ ಮನಸ್ಸು ಮಾತಾಡಿಕೊಂಡದ್ದು ಮುಖದ ಮೇಲೆ ಢಾಳಾಗಿ ಕಾಣುತ್ತದೆ. ಅರವತ್ತರಲ್ಲಿ ಐವತ್ತೆಂಟು ಮಂದಿಯೂ ಹಳ್ಳಿಗಳ ಸಂದಿಗೊಂದಿಗಳಿಂದ ಎದ್ದು ಬರುವ ಮಣ್ಣಿನ ಮಕ್ಕಳು. ಅದ್ಯಾಕೋ ಇಂಗ್ಲಿಷ್‌ ಅಂದ ತಕ್ಷಣ ಅವರ ಅರ್ಧ ಉತ್ಸಾಹವೇ ಉಡುಗಿಬಿಡುತ್ತದೆ. ಅದರ ಹೆಸರು ಕೇಳಿದರೇ ಬಹುತೇಕರು ನಿದ್ದೆಯಲ್ಲೂ ಬೆಚ್ಚಿಬೀಳುವುದಿದೆ.

ಹತ್ತು ನಿಮಿಷ ಕಳೆಯುವ ಹೊತ್ತಿಗೆ ಸಂಪೂರ್ಣ ಬಿಳಿಚಿಕೊಂಡ ಹೊಸಮುಖವೊಂದು ಬಾಗಿಲಲ್ಲಿ ಪ್ರತ್ಯಕ್ಷವಾಗುತ್ತದೆ. “ಸಾರಿ ಸರ್‌… ಲೇಟ್‌ ಆಗೋಯ್ತು. ಕ್ಲಾಸ್‌ರೂಂ ಎಲ್ಲಿ ಅಂತ ಗೊತ್ತಾಗ್ಲಿಲ್ಲ…’ ಮೇಷ್ಟ್ರಿಂದ ಏನು ಕಾದಿದೆಯೋ ಎಂಬ ಭಯಕ್ಕೆ ಆತ ಅಳುವುದೊಂದೇ ಬಾಕಿ. “ಅಯ್ಯೋ, ಬಾರಪ್ಪಾ… ನಾಳೆಯಿಂದ ಎಲ್ಲ ಸರಿಹೋಗತ್ತೆ…’, ಒಳಗೆ ಕರೆಯುತ್ತೇನೆ. ಎಲ್ಲರ ಕಣ್ಣುಗಳೂ ತನ್ನನ್ನೇ ನೋಡುತ್ತಿವೆಯೇನೋ ಎಂಬ ಆತಂಕದಲ್ಲಿ ಆತನಿಗೆ ಸುತ್ತಲೆಲ್ಲ ಆಯೋಮಯ.

ನಿಧಾನವಾಗಿ ಒಬ್ಬೊಬ್ಬರ ಪರಿಚಯ ಕೇಳಿಕೊಂಡು ನಾಲ್ಕು ತಮಾಷೆಯ ಮಾತಾಡುತ್ತೇನೆ. ಒಂದು ಗಂಟೆ ಮುಗಿಯುವ ಮುನ್ನವೇ ಎಲ್ಲರೂ ಮೈಕೊಡವಿಕೊಂಡು ನಿರುಮ್ಮಳವಾಗಿ ಕುಳಿತಿರುತ್ತಾರೆ. “ನೋಡ್ರಪ್ಪಾ… ಭಯಪಡುವಂಥದ್ದು ಏನೂ ಇಲ್ಲ. ಈ ಸಬೆjಕ್ಟ್ ಆಯ್ಕೆ ಮಾಡ್ಕೊಂಡು ತುಂಬಾ ಒಳ್ಳೆ ಕೆಲಸ ಮಾಡಿದೀರ. ಉಳಿದೋರಿಗಿಂತ ಒಂದು ಹೆಜ್ಜೆ ಮುಂದೆ ನಿಂತಿದೀರ ಅಂದ್ಕೊಳ್ಳಿ. ಕ್ಲಾಸುಗಳನ್ನ ಸರಿಯಾಗಿ ಅಟೆಂಡ್‌ ಮಾಡಿ ಮೇಷ್ಟ್ರು ಹೇಳ್ಳೋ ಕೆಲಸಗಳನ್ನ ಸರಿಯಾಗಿ ಮಾಡ್ತಾ ಇದ್ರೆ ಕಲಿಯೋದು ಕಷ್ಟಾನೇ ಅಲ್ಲ. ಡಿಗ್ರಿ ಮುಗಿದ್ಮೇಲೆ ಯಾರ್ಯಾರು ಏನೇನು ಆಗ್ತಿàರೋ ನನಗೊತ್ತಿಲ್ಲ; ಬದುಕಕ್ಕೆ ಬೇಕಾಗಿರೋದು ಧೈರ್ಯ, ಆತ್ಮವಿಶ್ವಾಸ ಮತ್ತು ಶ್ರದ್ಧೆ. ಅದನ್ನ ಈ ಕ್ಲಾಸು ನಿಮಗೆ ಖಂಡಿತಾ ಕೊಡುತ್ತೆ. ನಿಮ್ಮ ಜತೆ ನಾನಿದೀನಿ’- ಅವರ ಕಣ್ಣಲ್ಲಿ ಕಣ್ಣಿಟ್ಟು ದೃಢವಾಗಿ ಮಾತನಾಡಿ, ಮೊದಲ ತರಗತಿ ಮುಗಿಸುತ್ತೇನೆ. ಆಗ ಅವರ ಮೊಗದಲ್ಲಿ ಮೂಡುವ ಹೊಸ ಹೊಳಪು ಇದೆಯಲ್ಲ, ಅದಕ್ಕಂತೂ ಬೆಲೆಕಟ್ಟಲಾಗದು.

– ಸಿಬಂತಿ ಪದ್ಮನಾಭ ಕೆ.ವಿ., ವಿಶ್ವವಿದ್ಯಾನಿಲಯ, ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next