Advertisement
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ರವಿವಾರ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ದುಬಾೖಯಿಂದ ಮಾ. 19ರಂದು ಸಂಜೆ 5.45ಕ್ಕೆ ಸ್ಪೈಸ್ ಜೆಟ್ ವಿಮಾನದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವ್ಯಕ್ತಿ ಬಂದಿಳಿದಿದ್ದ. ಈ ವೇಳೆ ಆತನನ್ನು ತಪಾಸಣೆ ನಡೆಸಿದಾಗ ರೋಗ ಲಕ್ಷಣಗಳಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ನೇರವಾಗಿ ವಿಮಾನ ನಿಲ್ದಾಣದಿಂದ ಆ್ಯಂಬುಲೆನ್ಸ್ ಮುಖಾಂತರ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಮಾ. 20ರಂದು ವೆನ್ಲಾಕ್ ಆಸ್ಪತ್ರೆಯಿಂದ ಆತನ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ರವಿವಾರ ವರದಿ ಕೈ ಸೇರಿದ್ದು, ಆತನಲ್ಲಿ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದರು.
ಕೋವಿಡ್-19 ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಭಟ್ಕಳದ ವ್ಯಕ್ತಿಯೊಂದಿಗೆ ಅಂದು ವಿಮಾನದಲ್ಲಿ ಸಂಚರಿಸಿದ್ದ ಎಲ್ಲ 165 ಮಂದಿಯ ವೈಯಕ್ತಿಕ ಮಾಹಿತಿಗಳನ್ನು ಪಡೆಯಲಾಗಿದ್ದು, ಅವರ ಮೇಲೆ ನಿಗಾ ವಹಿಸಿ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಂಧೂ ಬಿ. ರೂಪೇಶ್ ವಿವರಿಸಿದರು.ಎಡಿಸಿ ಎಂ.ಜೆ. ರೂಪಾ, ಜಿಲ್ಲಾ ಆರೋಗ್ಯಾ ಧಿಕಾರಿ ಡಾ| ರಾಜೇಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ಉಪಸ್ಥಿತರಿದ್ದರು.
Related Articles
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೋವಿಡ್-19 ವೈರಸ್‌ಗೆ ಸಂಬಂಧಿಸಿದಂತೆ 104 ಮಂದಿಯ ಗಂಟಲು ಸ್ರಾವವನ್ನು ಇಲ್ಲಿಯವರೆಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ರವಿವಾರದಂದು 1 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 15 ಪರೀಕ್ಷಾ ವರದಿಗಳು ಸ್ವೀಕೃತಿಗೆ ಬಾಕಿ ಇವೆ. ಪಾಸಿಟಿವ್ ಪ್ರಕರಣ ಕಂಡು ಬಂದ ಯುವಕ 22 ವರ್ಷದವರನಾಗಿರುವುದರಿಂದ ಅವನಿಗೆ ಯಾವುದೇ ಸಮಸ್ಯೆ ಆಗದೆಂದು ವೈದ್ಯರು ಹೇಳಿದ್ದಾರೆ. ಆತನೊಂದಿಗೆ ಸಹ ಪ್ರಯಾಣಿಕರಾಗಿದ್ದ 165 ಮಂದಿಯನ್ನೂ ನಿಗಾದಲ್ಲಿಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
Advertisement
ತಿರುಗಾಡಿದರೆ ಕ್ರಮಸ್ವಯಂ ಪ್ರೇರಿತ ಬಂದ್ ಮಾಡುವ ಮೂಲಕ ರವಿವಾರ ಜನ ಉತ್ತಮ ಸ್ಪಂದನೆ ನೀಡಿದ್ದಾರೆ. ಮಾ. 31ರವರೆಗೆ ಜಿಲ್ಲೆಯಲ್ಲಿ ಇದು ಮುಂದುವರಿಯಲಿದ್ದು, ಜನ ಇದೇ ರೀತಿ ಸಹಕರಿಸಬೇಕು. ಅಗತ್ಯ ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ಇರುತ್ತದೆ. ಜನ ಗುಂಪುಗೂಡುವಿಕೆ, ಕಾರ್ಯಕ್ರಮಗಳನ್ನು ಏರ್ಪಡಿಸುವಿಕೆ ಮಾಡಬಾರದು. ತುರ್ತು ಸಂದರ್ಭ ಇದ್ದಲ್ಲಿ ಮಾತ್ರ ವೈಯಕ್ತಿಕ ವಾಹನಗಳಲ್ಲಿ ಪ್ರಯಾಣ ಮಾಡಬಹುದು. ಶಿಕ್ಷಕರಿಗೆ ರಜೆ ನೀಡಲಾಗುವುದು. ರಸ್ತೆಯಲ್ಲಿ ಅನಗತ್ಯ ತಿರುಗಾಡುವುದು, ವಿದೇಶದಿಂದ ಬಂದವರಿಗೆ ಕೈಗೆ ಹಾಕಿರುವ ಗುರುತನ್ನು ಅಳಿಸಿರುವ ಬಗ್ಗೆ ದೂರುಗಳು ಬಂದಿದ್ದು, ಅಂತಹವರಿಗೆ ಪೊಲೀಸರ ಮುಖಾಂತರ ಎಚ್ಚರಿಕೆ ನೀಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಮುಂಜಾಗ್ರತೆಯೇ ಮದ್ದು
ಮಂಗಳೂರಿನಲ್ಲಿ ಮೊದಲ ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದರಿಂದ ಜನ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳುವುದು, ಅವಶ್ಯವಿದ್ದಲ್ಲಿ ಮಾತ್ರ ಹೊರಗಡೆ ತೆರಳುವುದು, ಕಾರ್ಯಕ್ರಮಗಳನ್ನು ಆಯೋಜಿಸದೇ ಇರುವುದು, ಆಗಾಗ ಕೈ ತೊಳೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಆದಷ್ಟು ಮನೆಯಲ್ಲೇ ಇದ್ದು, ಕರ್ತವ್ಯ ನಿರ್ವಹಿಸಬೇಕು. ಮಕ್ಕಳು ಮತ್ತು ವಯೋವೃದ್ಧರನ್ನು ಹೊರಗೆ ಹೋಗಲು ಬಿಡದೆ, ಮನೆಯೊಳಗೇ ಇರುವಂತೆ ನೋಡಿಕೊಳ್ಳಬೇಕು ಎಂಬುದು “ಉದಯವಾಣಿ’ ಕಳಕಳಿ. ಕೊಲ್ಲಿ ವಿಮಾನ ಹಾರಾಟ ಸ್ಥಗಿತ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಲ್ಲಿ ರಾಷ್ಟ್ರಗಳಿಂದ ಬರುವ ಎಲ್ಲ ವಿಮಾನಗಳು ರವಿವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ದುಬಾೖಯಿಂದ ಶನಿವಾರ ರಾತ್ರಿ ಹೊರಟ ವಿಮಾನ ರವಿವಾರ ಮುಂಜಾನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಇದರಲ್ಲಿ ಒಟ್ಟು 109 ಮಂದಿ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗಿದೆ. ಎಲ್ಲರನ್ನು ಮನೆಯಲ್ಲೇ ನಿಗಾದಲ್ಲಿರಿಸಲು ಸೂಚಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ. ದೇಶೀಯ ವಿಮಾನಗಳು ಬೆಂಗಳೂರು, ಮುಂಬಯಿ, ಚೆನ್ನೈ, ಹೈದರಾಬಾದ್‌ಗೆ ರವಿವಾರ ಸಂಚಾರ ನಡೆಸಿದ್ದು, ಸೋಮವಾರವೂ ದೇಶದ ವಿವಿಧ ಭಾಗಗಳಿಗೆ ಹಾರಾಟ ನಡೆಸಲಿವೆ.