Advertisement

ಚಾಮರಾಜನಗರಕ್ಕೂ ಕಾಲಿಟ್ಟ ಕೋವಿಡ್ ಸೋಂಕು

02:12 AM Jun 10, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಜೂನ್‌ನಲ್ಲಿಯೇ ಕಡಿಮೆ ಕೋವಿಡ್ ವೈರಸ್‌ ಸೋಂಕು ಪ್ರಕರಣಗಳು (161) ಮಂಗಳವಾರ ದೃಢಪಟ್ಟಿವೆ.

Advertisement

ಸೋಂಕು ಪರೀಕ್ಷಾ ಪ್ರಮಾಣ ಕೂಡ ಶೇ. 50ರಷ್ಟು ಇಳಿಕೆಯಾಗಿದ್ದು, ಸೋಂಕು ಇಳಿಮುಖವಾಗಲು ಕಾರಣ ಎನ್ನಲಾಗುತ್ತಿದೆ.

ಇನ್ನೊಂದೆಡೆ ಸೋಂಕಿತರ ಸಾವಿನ ಸರಣಿ ಮುಂದುವರಿದಿದ್ದು, ಬೆಂಗಳೂರು, ಕಲಬುರಗಿಯಲ್ಲಿ ತಲಾ ಒಬ್ಬ ಸೋಂಕಿತರು ಸಾವಿಗೀಡಾಗಿದ್ದಾರೆ.

ರಾಜ್ಯಕ್ಕೆ ಕೋವಿಡ್ ಸೋಂಕು ಕಾಲಿಟ್ಟು 92 ದಿನಗಳವರೆಗೂ ನಿಶ್ಚಿಂತವಾಗಿದ್ದ ಚಾಮರಾಜನಗರಕ್ಕೂ ಮಂಗಳವಾರ ಸೋಂಕು ಪ್ರವೇಶಿಸಿದೆ.

ಈ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸೋಂಕು ದೃಢಪಟ್ಟಂತಾಗಿದೆ. ಸದ್ಯ ರಾಜ್ಯದಲ್ಲಿ ಚಿಕ್ಕಮಗಳೂರು ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿಯೂ ಸಕ್ರಿಯ ಪ್ರಕರಣಗಳಿವೆ.

Advertisement

ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 5,921ಕ್ಕೆ, ಸೋಂಕು ಚಿಕಿತ್ಸೆ ಫ‌ಲಕಾರಿಯಾಗದೆ ಸಾವಿಗೀಡಾದವರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. ಸದ್ಯ 3,248 ಮಂದಿ ಸೋಂಕಿತರು ಆಸ್ಪತ್ರೆ ಮತ್ತು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 12 ಮಂದಿ ತುರ್ತು ನಿಗಾ ಘಟಕದಲ್ಲಿದ್ದು, ಬಾಕಿ ಸೋಂಕಿತರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. 2,605 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಮಂಗಳವಾರ ಸೋಂಕು ದೃಢಪಟ್ಟ 161 ಮಂದಿಯಲ್ಲಿ 91 ಮಂದಿ ಹೊರರಾಜ್ಯಗಳಿಂದ, 24 ಮಂದಿ ಹೊರದೇಶದಿಂದ ರಾಜ್ಯಕ್ಕೆ ಆಗಮಿಸಿದ್ದಾರೆ. 46 ಮಂದಿ ಸ್ಥಳಿಯರಿಗೆ ಸೋಂಕು ತಗಲಿದೆ. ಅತೀ ಹೆಚ್ಚು ಸೋಂಕಿತರು ಮೂರು ಜಿಲ್ಲೆಗಳಲ್ಲಿ ಪತ್ತೆಯಾಗಿದ್ದು, ಯಾದಗಿಯಲ್ಲಿ 61 ಮಂದಿ, ಬೆಂಗಳೂರು 29 ಮಂದಿ, ದಕ್ಷಿಣ ಕನ್ನಡ 23 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಸೋಂಕು, ಪರೀಕ್ಷೆ ಇಳಿಮುಖ
ರಾಜ್ಯದಲ್ಲಿ ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಾದರೂ ಸೋಂಕು ಪರೀಕ್ಷೆಗಳು ಇಳಿಮುಖವಾಗುತ್ತ ಸಾಗಿವೆ. ಜೂ. 3ರಂದು 15,197 ಮಾದರಿಗಳ ಸೋಂಕು ಪರೀಕ್ಷೆ ಮಾಡಲಾಗಿತ್ತು. ಮಂಗಳವಾರ (ಜೂ.9) 7,036ಕ್ಕೆ ಇಳಿಕೆಯಾಗಿದೆ. ಈ ಮೂಲಕ ಶೇ.50 ರಷ್ಟು ಸೋಂಕು ಪರೀಕ್ಷೆ ಇಳಿಕೆಯಾಗಿದೆ.

ಪರೀಕ್ಷೆ ಪ್ರಮಾಣ ಕಡಿಮೆಯಾಗಿರುವುದರಿಂದ ಸೋಂಕು ಪ್ರಕರಣಗಳು ಕಡಿಮೆಯಾಗಿರುವ ಸಾಧ್ಯತೆಗಳಿವೆ. ಕಳೆದ ರವಿವಾರ 11 ಸಾವಿರ, ಸೋಮವಾರ 8 ಸಾವಿರ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಸದ್ಯ ರಾಜ್ಯದಲ್ಲಿ ಸರಕಾರಿ ಮತ್ತು ಖಾಸಗಿ ಸೇರಿ ಒಟ್ಟು 70 ಕೋವಿಡ್ ಸೋಂಕು ಪರೀಕ್ಷಾ ಪ್ರಯೋಗಾಲಯಗಳಿವೆ.

ಗುಣಮುಖರೇ ಹೆಚ್ಚು
ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೆ ಹೆಚ್ಚಿದೆ. ಮಂಗಳವಾರ 161 ಮಂದಿ ಸೋಂಕಿತರಾಗಿದ್ದರೆ 164 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

17 ವರ್ಷದ ಸೋಂಕಿತೆ ಸಾವು
ಕಲಬುರಗಿಯಲ್ಲಿ 17 ವರ್ಷದ ಬಾಲಕಿ ಸಾವಿಗೀಡಾಗಿದ್ದು, ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ಬಲಿಯಾದ ಅತ್ಯಂತ ಚಿಕ್ಕ ವಯಸ್ಸಿನವರಾಗಿದ್ದಾರೆ. ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಜ್ವರ ಲಕ್ಷಣಗಳೊಂದಿಗೆ ಜೂ. 4ರಂದು ಆಸ್ಪತ್ರೆಗೆ ದಾಖಲಾಗಿದ್ದರು.

ಅಂದೇ ಮೃತಪಟ್ಟಿದ್ದು, ಸೋಂಕು ಪರೀಕ್ಷೆ ನಡೆಸಿದಾಗ ವರದಿ ಪಾಸಿಟಿವ್‌ ಬಂದಿದೆ. ಮತ್ತೂಂದು ಪ್ರಕರಣದಲ್ಲಿ ಬೆಂಗಳೂರಿನಲ್ಲಿ 65ರ ವೃದ್ಧ ಸೋಮವಾರ ಮೃತಪಟ್ಟಿದ್ದು, ಶೀತ ಜ್ವರ ಹಿನ್ನೆಲೆ ಸೋಂಕು ಪರೀಕ್ಷೆ ದೃಢಪಟ್ಟು ಆಸ್ಪತೆಗೆ ದಾಖಲಾಗಿದ್ದರು. ಕಿಡ್ನಿ, ಮಧುಮೇಹ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಆರೊಗ್ಯ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next