ವಿಜಯಪುರ: ಜಿಲ್ಲೆಯ ಮೊದಲ ಕೋವಿಡ್-19 ಸೋಂಕಿತೆ 60 ವರ್ಷದ ವೃದ್ದೆ, ವೈದ್ಯರ ಸತತ ಪರಿಶ್ರಮದ ಫಲವಾಗಿ ಚಿಕಿತ್ಸೆ ಫಲಕಾರಿಯಾಗಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದರು. ಇದರಿಂದ ಕೇವಲ ಸೋಂಕಿತರ ಸಂಖ್ಯೆ ಹೆಚ್ಚಳ, ಇಬ್ಬರ ಸಾವಿನ ಸುದ್ದಿಯಿಂದ ಕಂಗಾಲಾಗಿದ್ದ ಜಿಲ್ಲೆಯ ಜನರಿಗೆ ಸಂತಸದ ಸುದ್ದಿ ಹೊರಬಿದ್ದಿದೆ.
ವೈದ್ಯರು, ವೈದ್ಯ ಸಿಬ್ಬಂದಿಗಳು ಜಿಲ್ಲೆಯ ಕೋವಿಡ್-19 ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವಲ್ಲಿ ಯಶಸ್ವಿಯಾಗಿದ್ದು, ಮೊದಲ ಸೋಂಕಿತೆಯ ಬಿಡುಗಡೆಯೊಂದಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರೆ 36 ಸೋಂಕಿತರಲ್ಲಿಯೂ ಆತ್ಮವಿಶ್ವಾಸ ಮೂಡಿಸಿದ್ದಾರೆ.
ಭಾನುವಾರ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಸೋಂಕಿತೆ 221 ವೃದ್ಧೆಗೆ ತೀವ್ರ ಉಸಿರಾಟದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಥೈರಾಯ್ಡ್ ಕಾಯಿಲೆ ಮಾತ್ರವಲ್ಲದೇ ಎರಡು ಬಾರಿ ಪಾರ್ಶ್ವವಾಯು ಬಾಧೆಯಿಂದ ಬಳಲುತ್ತಿದ್ದರು. ಆದರೆ ವಿಜಯಪುರ ಜಿಲ್ಲೆಯ ವೈದ್ಯರ ಪರಿಶ್ರಮದ ಫಲವಾಗಿ ಕೋವಿಡ್-19 ಸೋಂಕಿನಿಂದ ಸಂಪೂರ್ಣ ಗುಣಮುಖಳಾಗಿ ಮನೆಗೆ ತೆರಳಿದ್ದಾರೆ.
ಸೋಂಕುಮುಕ್ತಳಾಗಿ ಮನೆಗೆ ಹೊರಟ ವೃದ್ಧೆಯನ್ನು ಆಸ್ಪತ್ರೆ ವೈದ್ಯರು, ದಾದಿಯರು ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಚಪ್ಪಾಳೆ ತಟ್ಟಿ, ಹೂಗುಚ್ಚ ಹೂವಿನ ಸಸಿಗಳನ್ನು ನೀಡಿ ಬೀಳ್ಕೊಟ್ಟರು.
ಬಿಡುಗಡೆ ಸಂದರ್ಭದಲ್ಲಿ ತನ್ನನ್ನು ಸೋಂಕು ಮುಕ್ತಳನ್ನಾಗಿ ಮಾಡುವಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆ ನೀಡಿದ ವೈದ್ಯರು, ದಾದಿಯರಿಗೆ ವೃದ್ಧೆ ಭಾವುಕಳಾಗಿ ಕೃತಜ್ಞತೆ ಸಲ್ಲಿಸಿದಳು.
ಜಿಲ್ಲಾಸ್ಪತ್ರೆ ಸರ್ಜನ್ ಡಾ.ಶರಣಪ್ಪ ಕಟ್ಟಿ, ಡಿಎಚ್ಓ ಡಾ.ಮಹೇಂದ್ರ ಕಾಪ್ಸೆ, ಆಸ್ಪತ್ರೆ ತಜ್ಞ ವೈದ್ಯ ಡಾ.ಹರೀಶ, ಸಿಬ್ಬಂದಿಗಳಾದ ಶರಣಬಸಪ್ಪ ಹಿಪ್ಪರಗಿ, ಶಾಂತಾ ಎಡಿಸಿ ಡಾ.ಔದ್ರಾಮ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಡಾ.ಎಂ.ಬಿ ಬಿರಾದಾರ, ಡಾ.ಕವಿತಾ, ಡಾ.ಲಕ್ಕಣ್ಣನವರ, ಡಾ.ಧಾರವಾಡಕರ, ಡಾ.ಸಂಪತ್ ಕುಮಾರ ಗುಣಾರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.