ಬೆಂಗಳೂರು: ಸ್ನೇಹಿತನ ಜತೆ ಮಾತನಾಡುತ್ತ ನಿಂತಿದ್ದ ಮಾಜಿ ರೌಡಿಶೀಟರ್ ಸಲೀಂ ಅಲಿಯಾಸ್ ಚಟ್ನಿ ಸಲೀಂ ಮೇಲೆ ನಾಲ್ವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೈದ್ಯರೊಬ್ಬರಿಗೆ ಗುಂಡೇಟು ತಗುಲಿ ಗಾಯಗೊಂಡಿರುವ ಘಟನೆ ಸೋಮವಾರ ತಡರಾತ್ರಿ ಕೆ.ಜಿ.ಹಳ್ಳಿಯ ಬಿ.ಎಂ ಲೇಔಟ್‌ನಲ್ಲಿ ನಡೆದಿದೆ.
ಘಟನೆಯಲ್ಲಿ ಎರಡು ಗುಂಡುಗಳು ಚಟ್ನಿ ಸಲೀಂನ ಹೊಟ್ಟೆ ಮತ್ತು ಕೈಗೆ ತಗುಲಿದ್ದು, ಮತ್ತೂಂದು ಗುಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಖಾಸಗಿ ಕ್ಲಿನಿಕ್ ವೈದ್ಯ ಡಾ. ಬಷೀರ್ ಎಂಬುವರ ಪೃಷ್ಟ ಭಾಗಕ್ಕೆ ತಗುಲಿದೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಟ್ನಿ ಸಲೀಂ ಸ್ಥಿತಿ ಚಿಂತಾಜನಕವಾಗಿದ್ದು, ಡಾ ಬಷೀರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು.
ಅಪರಾಧ ಚಟುವಟಿಕೆಗಳಿಂದ ದೂರು ಉಳಿದಿದ್ದ ಸಲೀಂ, ರಿಯಲ್ ಎಸ್ಟೇಟ್ ಹಾಗೂ ಚಿಟ್ ಫಂಡ್‌ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ಸೋಮವಾರ ರಾತ್ರಿ 11.30ರ ಸುಮಾರಿಗೆ ಊಟ ಮುಗಿಸಿದ ಸಲೀಂ ಸ್ನೇಹಿತ ಜಾಫರ್ ಜತೆ ಮನೆ ಸಮೀಪದ ರಸ್ತೆಯಲ್ಲಿ ನಿಂತು ಮಾತನಾಡುತ್ತಿದ್ದರು. ಇದೇ ವೇಳೆ ಎರಡು ಪಲ್ಸರ್ ಬೈಕ್‌ಗಳಲ್ಲಿ ಹೆಲ್ಮೆಟ್ ಧರಿಸಿ ಬಂದು ನಾಲ್ವರು ದಾಳಿಕೋರರು ಏಕಾಏಕಿ ಸಲೀಂ ಕಡೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ಒಂದು ಗುಂಡು ಸಲೀಂಗೆ ತಗುಲಿದೆ. ಮತ್ತೂಂದು ಗುಂಡು ಗಾಳಿಯಲ್ಲಿ ಹಾರಿದೆ ಎಂದು ಪೊಲೀಸರು ಹೇಳಿದರು.
ಯಾರೆಂಬುದು ತಿಳಿದಿಲ್ಲ: ಸಲೀಂ ಅಲಿಯಾಸ್ ಚಟ್ನಿ ಸಲೀಂ ಸ್ಥಿತಿ ಗಂಭೀರವಾಗಿರುವುದರಿಂದ ದುಷ್ಕರ್ಮಿಗಳು ಯಾರೆಂಬುದು ತಿಳಿದಿಲ್ಲ. ಚೇತರಿಸಿಕೊಂಡ ಬಳಿಕ ಆತನ ಹೇಳಿಕೆ ಆಧರಿಸಿ ಆರೋಪಿಗಳ ಪತ್ತೆ ಕಾರ್ಯ ನಡೆಯಲಿದೆ. ಆತನ ಸ್ನೇಹಿತ ಜಾಫರ್‌ಗೂ ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹಳೇ ದ್ವೇಷ ಅಥವಾ ಹಣಕಾಸು ವ್ಯವಹಾರದ ಹಿನ್ನೆಲೆಯಲ್ಲಿ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ವೈದ್ಯ ಬಲಿಪಶು: ದಾಳಿಕೋರರು ಹಾಗೂ ಸಲೀಂ ನಡುವಿನ ಕಾಳಗದಲ್ಲಿ ವೈದ್ಯ ಡಾ. ಬಷೀರ್ ಬಲಿಪಶು ಆಗಿದ್ದಾರೆ. ಬಿ.ಎಂ.ಲೇಔಟ್‌ನಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಬಷೀರ್, ಸೋಮವಾರ ರಾತ್ರಿ 11 .30ರ ಸುಮಾರಿಗೆ ಕ್ಲಿನಿಕ್ ಮುಚ್ಚಿ ಮನೆಗೆ ಹೋಗುತ್ತಿದ್ದರು. ಇದೇ ವೇಳೆ ದುಷ್ಕರ್ಮಿಗಳು ಸಲೀಂ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದನ್ನು ಅರಿಯದ ವೈದ್ಯರು ತಮ್ಮ ದ್ವಿಚಕ್ರ ವಾಹನದಲ್ಲಿ ಮುಂದೆ ಸಾಗಿದ್ದಾರೆ. ಆಗ ದಾಳಿಕೋರರು ಹಾರಿಸಿದ ಒಂದು ಗುಂಡು ವೈದ್ಯ ಬಷೀರ್ ಪೃಷ್ಟ ಭಾಗಕ್ಕೆ ತಗುಲಿದೆ ಎಂದು ಪೊಲೀಸರು ತಿಳಿಸಿದರು.