Advertisement

ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು

07:30 AM Mar 11, 2018 | |

ಇಂಡಿ: ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಅನುರಣಿಸಿದೆ. ತಾಲೂಕಿನ ಬರಡೋಲ ಗ್ರಾಮದ ಹೊರವಲಯದಲ್ಲಿ ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ ಭೀಮಾ ತೀರದ ಹಂತಕ ಶಶಿ ಮುಂಡೇವಾಡಿ ಹಾಗೂ ಸಹಚರನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಸಹಚರ ಪರಾರಿಯಾಗಿದ್ದು, ಗಾಯಗೊಂಡಿರುವ ಶಶಿ ಮುಂಡೇವಾಡಿಯನ್ನು
ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ದೇವರನಿಂಬರಗಿ ಗ್ರಾಮದಿಂದ ಬರಡೋಲ ಗ್ರಾಮಕ್ಕೆ ಶಶಿ ಹಾಗೂ ಅವನ ಸಹಚರ ಅಕ್ರಮ ಪಿಸ್ತೂಲ್‌ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಪಿಎಸ್‌ಐ ಗೋಪಾಲ ಹಳ್ಳೂರ ತಮ್ಮ ವಾಹನವನ್ನು ಗದ್ದೆಯೊಂದರಲ್ಲಿ ನಿಲ್ಲಿಸಿ ಅವರು ಬರುವಿಕೆಗೆ ಕಾದು ಕೂತಿದ್ದರು. ಇದೇ ಸಂದರ್ಭದಲ್ಲಿ ದ್ವಿಚಕ್ರ ವಾಹನದ ಮೇಲೆ ಬರುತ್ತಿದ್ದ ಶಶಿ ಹಾಗೂ ಆತನ ಸಹಚರನನ್ನು ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಪೊಲೀಸ್‌ ಪೇದೆ ಅರವಿಂದ ಮಾದರ ಹಿಡಿಯಲು ಯತ್ನಿಸಿದ್ದಾರೆ. ಇದ್ದಕ್ಕಿದ್ದಂತೆ ಶಶಿ ಮುಂಡೇವಾಡಿ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ಪೇದೆ ಹಾಗೂ ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ್ದಾನೆ. ಪಿಎಸ್‌ಐ ಗೋಪಾಲ ಅವರ ಎಡಗೈ ಹಾಗೂ ಪೇದೆ
ಅರವಿಂದ ಅವರ ಬಲಗೈ ತೀವ್ರ ಗಾಯಗಳಾಗಿವೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪಿಎಸ್‌ಐ ಗೋಪಾಲ ಹಳ್ಳೂರ ಅವರು ಪ್ರಾಣ ರಕ್ಷಣೆಗೆ ತಮ್ಮ ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.  ಆಗ ಆರೋಪಿಗಳಿಬ್ಬರೂಪರಾರಿಯಾಗಲು ಯತ್ನಿಸುತ್ತಿದ್ದಂತೆ ಪಿಎಸ್‌ಐ ಹಳ್ಳೂರ ಅವರು ಶಶಿ ಮುಂಡೇವಾಡಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಆದರೆ, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಶಶಿಗೆ ಗುಂಡು  ತಗುಲಿದ್ದರಿಂದ ಚಡಚಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಪೇದೆ ಅರವಿಂದ ಮಾದರ ಅವರನ್ನು ವಿಜಯಪುರದ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಶಿವಕುಮಾರ ಗುಣಾರೆ ಭೇಟಿ ನೀಡಿದ್ದಾರೆ. ಈ ಕುರಿತು ಚಡಚಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾರು ಈ ಮುಂಡೇವಾಡಿ?
ಭೀಮಾ ತೀರದ ಹಂತಕ ಎಂದೇ ಕುಖ್ಯಾತಿ ಪಡೆದಿರುವ ಶಶಿ ಮುಂಡೇವಾಡಿ ಚಡಚಣ ಮೂಲದವನು. ಅಕ್ರಮ ಪಿಸ್ತೂಲ್‌
ವ್ಯವಹಾರದಲ್ಲಿ ಹೆಸರುವಾಸಿ. ಪತ್ರಕರ್ತ ಸುನೀಲ್‌ ಹೆಗ್ಗರವಳ್ಳಿ ಹತ್ಯೆಗೆ  ಸುಪಾರಿ ಪಡೆದಿರುವ ಆರೋಪದಲ್ಲಿ ಈತನ ಹೆಸರು ಕೇಳಿ ಬಂದಿತ್ತು. ಮೂರು ಕೊಲೆ ಹಾಗೂ ಎರಡು ಅಕ್ರಮ ಪಿಸ್ತೂಲ್‌ ಮಾರಾಟ ಆರೋಪದಡಿ ಈತನ ಮೇಲೆ ಕೇಸ್‌ ದಾಖಲಾಗಿವೆ. ಜಾಮೀನಿನ ಮೇಲೆ ಹೊರಗಿದ್ದ ಶಶಿ ಈಗ ಮತ್ತೆ ಅಕ್ರಮ ಪಿಸ್ತೂಲ್‌ ಮಾರಾಟ ದಂಧೆಯಲ್ಲಿಯೇ ಮುಂದುವರಿದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next