Advertisement

Kolar: ಪಟಾಕಿ ವಿರುದ್ಧ ಕ್ರಮಕ್ಕೆ ಅನಾಹುತ ಆಗಲೇಬೇಕೆ?

06:17 PM Oct 12, 2023 | Team Udayavani |

ಕೋಲಾರ: ಅಕ್ರಮವಾಗಿ ದಾಸ್ತಾನಿಟ್ಟುಕೊಂಡು ಪಟಾಕಿ ಮಾರಾಟ ಮಾಡುವವರ ಮೇಲೆ ಕ್ರಮಕೈಗೊಳ್ಳಲು ಅನಾಹುತ ಸಂಭವಿಸಿ ಹಲವರ ಪ್ರಾಣಗಳು ಹೋಗಲೇಬೇಕೆ ಎಂಬ ಪ್ರಶ್ನೆ ಉದ್ಭವವಾಗಿದೆ. ಏಕೆಂದರೆ, ಕೋಲಾರ ಜಿಲ್ಲಾ ಕೇಂದ್ರ ಸೇರಿದಂತೆ ಪ್ರಮುಖ ನಗರ, ಪಟ್ಟಣ, ತಾಲೂಕು ಕೇಂದ್ರಗಳಲ್ಲಿ ಯಾವುದೇ ಹೊತ್ತಿನಲ್ಲಿ ಎಷ್ಟೇ ಪ್ರಮಾಣದ ಪಟಾಕಿ ಬೇಕೆಂದರೂ ಮಾರಾಟ ಮಾಡಲು ತಾವು ಸಿದ್ಧ ಎನ್ನುತ್ತಿದ್ದಾರೆ ಪಟಾಕಿ ವ್ಯಾಪಾರಿಗಳು.

Advertisement

ಅತ್ತಿಬೆಲೆ ದುರ್ಘ‌ಟನೆಯಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಅಪಾಯಕಾರಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಕಟ್ಟಾಜ್ಞೆ ವಿಧಿಸಿದೆ. ಆದರೆ, ಈ ನಿಷೇಧಾಜ್ಞೆ ಕೋಲಾರ ಸೇರಿದಂತೆ ಹಲವೆಡೆ ಜಾರಿಗೊಳ್ಳಬೇಕಾದರೆ, ಪಟಾಕಿ ಮಾರಾಟ ಮಾಡುವವರ ಮೇಲೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಾದರೆ ಅನಾಹುತ ಪ್ರಾಣ ಬಲಿ ಆಗಲೇಬೇಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಅಕ್ರಮ ದಾಸ್ತಾನು: ಕೋಲಾರ ಜಿಲ್ಲಾ ಕೇಂದ್ರದಲ್ಲಿಯೇ ಯಾವುದೇ ಸಮಯ ಸಂದರ್ಭದಲ್ಲಿ ತುರ್ತಾಗಿ ಪಟಾಕಿ ಬೇಕೆಂದರೆ ಕೊಡಲು ನಾವು ಸಿದ್ಧ ಎನ್ನುತ್ತಿದ್ದಾರೆ ಪಟಾಕಿಯ ಅಕ್ರಮ ದಾಸ್ತಾನುಗಾರರು. ಕೋಲಾರ ಜಿಲ್ಲಾ ಕೇಂದ್ರದ ಬಸ್‌ ನಿಲ್ದಾಣ ಸುತ್ತಮುತ್ತಲಿನ ಪ್ರದೇಶ, ಡೂಮ್‌ಲೈಟ್‌ ವೃತ್ತದ ಸಮೀಪ, ದೊಡ್ಡಪೇಟೆ, ಅಮ್ಮವಾರಿಪೇಟೆಯಲ್ಲದೆ ಇತರೇ ವಾರ್ಡ್‌ಗಳು, ಸುಗಟೂರು ಮತ್ತಿತರೆಡೆಯ ಗ್ರಾಮಾಂತರ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಪಟಾಕಿ ಯನ್ನು ದಾಸ್ತಾನು ಮಾಡಿ ವರ್ಷವಿಡೀ ಮಾರಾಟ ಮಾಡಲಾಗುತ್ತದೆ.

ಅಧಿಕಾರಿ ವರ್ಗದಲ್ಲಿ ಸ್ಪಷ್ಟತೆ ಇಲ್ಲ: ಪಟಾಕಿಗಳ ಅಕ್ರಮ ದಾಸ್ತಾನು ಮನೆಗಳಲ್ಲಿಟ್ಟುಕೊಂಡು ಮಾರಾಟ ಮಾಡಲು ಪರವಾನಗಿ ಇದೆಯೇ ಇಲ್ಲವೇ ಎಂಬುದರ ಕುರಿತು ಅಧಿಕಾರಿ ವರ್ಗದಲ್ಲಿ ಸ್ಪಷ್ಟತೆ ಇಲ್ಲವಾಗಿದೆ. ಹೇರಳ ಪ್ರಮಾಣದ ಪಟಾಕಿಗಳನ್ನು ವ್ಯಾಪಾರಿಗಳು ತಮ್ಮ ಮನೆಗಳಲ್ಲಿಯೇ ಇಟ್ಟುಕೊಂಡು ವ್ಯಾಪಾರ ಮಾಡಲು ಪರವಾನಗಿ ಕೊಟ್ಟವರಾರು ಎಂಬುದರ ಬಗ್ಗೆ ಪ್ರಶ್ನೆ ಮಾಡುವವರು ಇಲ್ಲವಾಗಿದ್ದಾರೆ. ಇದರಿಂದ ಯಾವುದೇ ಯಾರದೇ ಭಯವಿಲ್ಲದೆ ಪಟಾಕಿ ಮಾರಾಟಗಾರರು ವರ್ಷವಿಡೀ ಪಟಾಕಿಗಳನ್ನು ತಮ್ಮ ದಾಸ್ತಾನಿನಿಂದ ಮಾರಾಟ ಮಾಡುತ್ತಲೇ ಇರುತ್ತಾರೆ. ಅಗತ್ಯ ಕ್ರಮವಹಿಸಿ: ಹೀಗೆ ಮಾರಾಟ ಮಾಡಿದ ಪಟಾಕಿಗಳಲ್ಲಿ ಹಸಿರು ಪಟಾಕಿ ಯಾವುದೇ ಅಪಾಯಕಾರಿ ಪಟಾಕಿ ಯಾವುದು ಎಂಬುದನ್ನು ಪರಿಶೀಲಿಸುವವರು ಯಾರು ಎನ್ನು ವುದೇ ಪ್ರಶ್ನೆ. ಹೀಗೆ ಅಕ್ರಮವಾಗಿ ದಾಸ್ತಾನು ಮಾಡಿದ ಕಡೆಗಳಲ್ಲಿ ಆಕಸ್ಮಿಕವಾಗಿ ಪಟಾಕಿಗಳು ಸಿಡಿದು ಅನಾಹುತವಾದರೆ ಮಾತ್ರವೇ ಜಿಲ್ಲಾಡಳಿತ ಮಾತ್ರವಲ್ಲದೆ ರಾಜ್ಯ ಸರ್ಕಾರವೇ ಗಮನ ಹರಿಸುತ್ತದೆ. ಅನಾಹುತ ಆಗುವ ಮೊದಲೇ ಗಮನ ಹರಿಸುವುದಕ್ಕೆ ಇರುವ ಸಮಸ್ಯೆಯಾದರೂ ಏನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಮನೆಗಳಲ್ಲೇ ಪಟಾಕಿ ದಾಸ್ತಾನು, ಮಾರಾಟ: ಇತ್ತೀಚಿಗೆ ಗಣೇಶ ಹಬ್ಬ ಮತ್ತಿತರ ಮೆರವಣಿಗೆ, ಪ್ರತಿಭಟನೆ ಇನ್ನಿತರ ಸಂದರ್ಭಗಳಲ್ಲಿ ಕೋಲಾರದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಪಟಾಕಿಗಳನ್ನು ಸಿಡಿಸಲಾಗುತ್ತದೆ. ಆದರೆ, ಇವುಗಳನ್ನು ತಂದಿದ್ದೆಲ್ಲಿ ಇವು ದಾಸ್ತಾನು ಇರುವುದೆಲ್ಲಿ ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕಿಂಚಿತ್ತೂ ಗಮನ ಹರಿಸುವುದಿಲ್ಲ. ಬಹುತೇಕ ಪಟಾಕಿ ಮಾರಾಟಗಾರರು ಜನವಸತಿ ಪ್ರದೇಶಗಳಲ್ಲಿಯೇ ವಾಸವಾಗಿದ್ದಾರೆ. ತಮ್ಮದೇ ಮ ನೆಗಳಲ್ಲಿ ರಾಜಾರೋಷವಾಗಿ ಪಟಾಕಿ ಮಾರಾಟ ಮಾಡುತ್ತಿದ್ದಾರೆ. ಆದರೂ ಕ್ರಮವ ಹಿಸುವವರಿಲ್ಲದಂತಾಗಿದೆ. ಅನಾಹುತವಾದರೆ ಸರ್ಕಾರವೇ ಮಧ್ಯ ಪ್ರವೇಶ ಮಾಡುತ್ತದೆ ಎಂಬ ನಿರ್ಲಕ್ಷ್ಯವೇ ಇದಕ್ಕೆ ಕಾರಣವಿರಬಹುದು ಎನ್ನಲಾಗುತ್ತಿದೆ.

Advertisement

ಪರವಾನಗಿ ನೀಡಿದವರು ಯಾರು?: ಸಾಮಾನ್ಯವಾಗಿ ದೀಪಾವಳಿ ಹಬ್ಬಕ್ಕೆ ಒಂದು ವಾರದ ಮುಂಚಿತವಾಗಿ ಹತ್ತಾರು ಮಂದಿಗೆ ಪಟಾಕಿ ಮಾರಾಟ ಮಾಡಲು ಪರವಾನಗಿ ನೀಡಲಾಗುತ್ತದೆ. ಮೊದಲೆಲ್ಲಾ ಪಟಾಕಿಗಳನ್ನು ಎಲ್ಲೆಂದರಲ್ಲಿ ಹೇಗೆಂದರಲ್ಲೇ ಮಾರಾಟ ಮಾಡಲಾಗುತ್ತಿತ್ತು. ಆದರೆ, ತಮಿಳುನಾಡಿನಲ್ಲಿ ಪಟಾಕಿ ದುರಂತಗಳು ಸಂಭವಿಸುತ್ತಿದ್ದಂತೆಯೇ ಇತ್ತೀಚಿನ ವರ್ಷಗಳಲ್ಲಿ ಆಟದ ಮೈದಾನ ಹಾಗೂ ನಿರ್ದಿಷ್ಟ ಪ್ರದೇಶಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಪಟಾಕಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.

ಹೀಗೆ ನೀಡಿದ ಪರವಾನಗಿ ದೀಪಾವಳಿ ಮಾರಾಟಕ್ಕೆ ಮಾತ್ರವೇ ಸೀಮಿತವಾಗಿದೆ. ಆದರೆ, ಬಹುತೇಕ ಪಟಾಕಿ ಮಾರಾ ಟಗಾರರು ಮಾರಾಟವಾಗದೆ ಉಳಿದ ಪಟಾಕಿಗಳನ್ನು ತಮ್ಮದೇ ಮನೆಗಳಲ್ಲಿ ಯಾವುದೇ ಸುರಕ್ಷತೆ ಕ್ರಮಗಳಿಲ್ಲದೆ ದಾಸ್ತಾನು ಮಾಡಿ ಕೊಂಡು ಬೇಡಿಕೆ ಬಂದ ಸಂದರ್ಭ ಗಳಲ್ಲಿ ಮಾರಾಟ ಮಾಡುತ್ತಿರುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಪೊಲೀಸರು ಕೂಡ ಇವರಲ್ಲೇ ಪಟಾಕಿ ತರುವುದು ವಿಶೇಷ.

ಕೋಲಾರ ನಗರದಲ್ಲಿ ಏಳೆಂಟು ಕಡೆಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳ ಜನವಸತಿ ಪ್ರದೇಶಗಳಲ್ಲೇ ಪಟಾಕಿ ವ್ಯಾಪಾರಿಗಳು ಅಕ್ರಮವಾಗಿ ತಮ್ಮ ಮನೆಗಳಲ್ಲಿ ಪಟಾಕಿ ದಾಸ್ತಾನು ಮಾಡಿಕೊಂಡು ವರ್ಷವಿಡೀ ಯಾರದೇ ಅಂಜಿಕೆ ಇಲ್ಲದೆ ಮಾರಾಟ ಮಾಡುತ್ತಾರೆ.  ಸರ್ಕಾರ ಪಟಾಕಿ ನಿಷೇಧಿಸಿದ ಮೇಲೂ ಇಂತ ಅಕ್ರಮ ದಾಸ್ತಾನು ಪತ್ತೆ ಹಚ್ಚಿ ಕ್ರಮಕೈಗೊಳ್ಳದಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸಂಬಂಧಪಟ್ಟವರು ತುರ್ತು ಕ್ರಮಕೈಗೊಳ್ಳುವುದು ಉತ್ತಮ.

– ಮುರಳೀಗೌಡ, ನಗರಸಭಾ ಸದಸ್ಯ, ಕೋಲಾರ

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next