Advertisement

ಪಟಾಕಿ ನಂತರ ಪಟಾಕ!

08:32 PM Nov 05, 2019 | Lakshmi GovindaRaju |

ಒಂದೆಡೆ ಪಟಾಕಿ ಹಬ್ಬದ ಹವಾ ಮುಗಿದಿದೆ. ಅದೇ ಸಂದರ್ಭದಲ್ಲಿ ಫ್ಯಾಷನ್‌ ರಂಗದಲ್ಲಿ ಪಟಾಕಾದ ಹವಾ ಜೋರಾಗಿದೆ. ಪಟಾಕಿಗಳ ಆಕಾರದ ಒಡವೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು, ಹೊಸದೊಂದು ಟ್ರೆಂಡ್‌ಗೆ ಕಾರಣವಾಗಿವೆ…

Advertisement

ದೀಪಾವಳಿ ಮುಗಿದು ವಾರವಾಯ್ತು.ಆದರೂ, ಹಬ್ಬದ ಉತ್ಸಾಹ ಕಡಿಮೆ ಆಗಿಲ್ಲ. ಮಕ್ಕಳು ಅಳಿದುಳಿದ ಪಟಾಕಿ ಸುಡುವುದರಲ್ಲಿ ಬ್ಯುಸಿಯಾಗಿದ್ದಾರೆ.ಯುವತಿಯರು? ಅವರೂ ಕೂಡಾ ಪಟಾಕ ಒಡವೆಗಳನ್ನು ಖರೀದಿಸುವಲ್ಲಿ ತೊಡಗಿದ್ದಾರೆ. ದೀಪಾವಳಿಯ ಪಟಾಕಿಗಳನ್ನೇ ಕಲ್ಪನೆಯಲ್ಲಿಟ್ಟುಕೊಂಡು, ಪಟಾಕಿ ಆಕಾರದ ಒಡವೆಗಳು ಮಾರುಕಟ್ಟೆಗೆ ಬಂದಿವೆ.

ಚಿನ್ನದ ಅಂಗಡಿಯಲ್ಲಿ ನಿಮಗೆ ಬೇಕಾದ ವಿನ್ಯಾಸದಲ್ಲಿ ಪಟಾಕ ಎಂದು ಬರೆದಿರುವ ಕಿವಿಯೋಲೆ, ಬಳೆ, ಸರದ ಪೆಂಡೆಂಟ್‌, ಬುಗುಡಿ, ಉಂಗುರ, ಕಾಲ್ಗೆಜ್ಜೆ, ಜುಮ್ಕಿ, ಮೂಗುತಿ, ಇತ್ಯಾದಿಗಳನ್ನು ಮಾಡಿಸಬಹುದು. ಇಲ್ಲವೇ ಆನ್‌ಲೈನ್‌ ಮೂಲಕ ಪಟಾಕಾ ಜೂಲಿಗಳನ್ನು ಖರೀದಿಸಬಹುದು. (ಹಿಂದಿ ಭಾಷೆಯಲ್ಲಿ ಪಟಾಕಿಗೆ ಪಟಾಕಾ ಎನ್ನುತ್ತಾರೆ)

ವಿಧ ವಿಧ ಪಟಾಕ: ಆಕಾಶ ಬುಟ್ಟಿ, ಹಣತೆ, ರಾಕೆಟ್‌, ಭೂ (ನೆಲ) ಚಕ್ರ, ನಕ್ಷತ್ರ ಕಡ್ಡಿ (ಸುರ್‌ಸುರ್‌ ಬತ್ತಿ), ಫ್ಲವರ್‌ ಪಾಟ್‌ (ಹೂ ಚಟ್ಟಿ), ಲಕ್ಷ್ಮಿ ಬಾಂಬ್‌, ಆಟಂ ಬಾಂಬ್‌, ಸರ ಪಟಾಕಿ, ಬೀಡಿ ಪಟಾಕಿ, ಹೀಗೆ, ಪಟಾಕಿಯಲ್ಲಿ ಎಷ್ಟು ನಮೂನೆಗಳಿವೆಯೋ, ಜ್ಯುವೆಲರಿಯಲ್ಲೂ ಅಷ್ಟೇ ವೈವಿಧ್ಯಗಳಿವೆ.

ಸಾಂಪ್ರದಾಯಕ ಉಡುಗೆ: ಈ ಪಟಾಕ ಜ್ಯುವೆಲರಿಗಳನ್ನು, ಲಂಗ ದಾವಣಿ, ಉದ್ದ ಲಂಗ, ಚೂಡಿದಾರ, ಸಲ್ವಾರ್‌ ಕಮೀಜ್‌, ಸೀರೆ-ರವಿಕೆ, ಕುರ್ತಿಯಂಥ ಸಾಂಪ್ರದಾಯಿಕ ಉಡುಪುಗಳ ಜೊತೆ ತೊಡಬಹುದು. ಹೊಸ ಬಗೆಯ ಸ್ಟೈಲ್‌ಗ‌ಳನ್ನು ಪ್ರಯೋಗಿಸಿ ನೋಡಲು ಧೈರ್ಯ ಇರುವವರು, ಪಾಶ್ಚಾತ್ಯ ಉಡುಗೆಗಳ ಜೊತೆಗೂ ಇವುಗಳನ್ನು ತೊಟ್ಟು ನಿಮ್ಮದೇ ಆದ ಸ್ಟೈಲ್‌ ಸ್ಟೇಟ್‌ಮೆಂಟ್‌ ಸೃಷ್ಟಿಸಿಕೊಳ್ಳಬಹುದು.

Advertisement

ಬಣ್ಣ ಬಣ್ಣದ ಪಟಾಕಿ: ಬಂಗಾರದ ಆಭರಣಗಳನ್ನು ಪಟಾಕಿಯಂತೆ ಕಾಣಿಸಲು ಕೆಂಪು, ಪಚ್ಚೆ, ಹಳದಿ ಅಥವಾ ನೀಲಿ ಬಣ್ಣದ ಕಲ್ಲುಗಳನ್ನು ಬಳಸಲಾಗುತ್ತದೆ. ಮುತ್ತು, ರತ್ನ, ಬಣ್ಣ-ಬಣ್ಣದ ಗಾಜಿನ ತುಂಡು, ಪ್ಲಾಸ್ಟಿಕ್‌ ಆಕೃತಿಗಳನ್ನು ಕೂಡಾ ಕೃತಕ ಆಭರಣಗಳಿಗೆ ಮೆರಗು ತುಂಬಲು ಉಪಯೋಗಿಸುತ್ತಾರೆ. ಚಿನ್ನ, ಬೆಳ್ಳಿ, ಪ್ಲಾಟಿನಂ, ವೈಟ್‌ ಮೆಟಲ್‌, ತಾಮ್ರ ಅಥವಾ ಕಂಚನ್ನು ಹೋಲುವ ಲೋಹದಿಂದ ಇಂಥ ಒಡವೆಗಳನ್ನು ತಯಾರಿಸುತ್ತಾರೆ. ಕೃತಕ ಆಭರಣಗಳನ್ನು ಪ್ಲಾಸ್ಟಿಕ್‌, ಮರದ ತುಂಡು, ಗಾಜಿನ ಚೂರು ಅಥವಾ ಮಣ್ಣಿನಿಂದ ತಯಾರಿಸಿ ಅವುಗಳ ಮೇಲೆ ಲೋಹದಂತೆ ಕಾಣುವ ಬಣ್ಣ ಬಳಿಯುತ್ತಾರೆ.

ನೀವೇ ಮಾಡಿ ನೋಡಿ: ಬಣ್ಣದ ದಾರ, ಗೆಜ್ಜೆ, ಬಳೆಯ ಚೂರು ಮುಂತಾದ ವಸ್ತುಗಳನ್ನು ಬಳಸಿ ಒಡವೆಗಳನ್ನು ಸ್ವತಃ ತಯಾರಿಸಬಹುದು. ಇದಕ್ಕೆ ಸಂಬಂಧಿಸಿದ ಅದೆಷ್ಟೋ ವಿಡಿಯೋಗಳು ಯುಟ್ಯೂಬ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯ ಇವೆ. ಇಂಥ ಒಡವೆಗಳಲ್ಲಿ ರೇಡಿಯಂ (ಕತ್ತಲಿನಲ್ಲಿ ಹೊಳೆಯುವಂಥ ವಸ್ತು) ಮತ್ತು ಎಲ್‌. ಇ. ಡಿ. ಲೈಟ್‌ಗಳನ್ನೂ ಬಳಸುತ್ತಾರೆ!

ವಿದೇಶದಲ್ಲೂ ಬೇಡಿಕೆ: ಪಟಾಕಿ ಒಡವೆಗಳಿಗೆ ಕೇವಲ ಭಾರತದಲ್ಲಷ್ಟೇ ಅಲ್ಲ, ಬೇರೆ ದೇಶಗಳಲ್ಲೂ ಬೇಡಿಕೆ ಇದೆ. ಈ ಆಭರಣಗಳನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಷ್ಟೇ ತೊಡಬೇಕೆಂದೇನೂ ಇಲ್ಲ. ವಿವಾಹ, ಸೀಮಂತ, ಹುಟ್ಟು ಹಬ್ಬ, ನಿಶ್ಚಿತಾರ್ಥ, ಪಾರ್ಟಿ ಅಥವಾ ಇನ್ನಿತರ ಸಮಾರಂಭಗಳಲ್ಲಿ ಕೂಡಾ ಧರಿಸಬಹುದು.

* ಅದಿತಿಮಾನಸ ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next