Advertisement

ಜಿಲ್ಲಾಧ್ಯಕ್ಷ ಸ್ಥಾನದಿಂದ ಬೆಲ್ಲದ ವಜಾ

04:27 PM May 22, 2017 | Team Udayavani |

ಧಾರವಾಡ: ಇಲ್ಲಿನ ಚೆನ್ನಬಸವೇಶ್ವರ ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವೀರಶೈವ ಲಿಂಗಾಯತ ಭವನಕ್ಕೆ ಬೆಲ್ಲದ ಕುಟುಂಬ ಸದಸ್ಯರ ಹೆಸರಿಟ್ಟ ಪ್ರಕರಣ ಕೊನೆಗೂ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಶಿವಣ್ಣ ಬೆಲ್ಲದ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಂತೆ ಮಾಡಿದ್ದು, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಪ್ರಭಾರ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

Advertisement

ಭವನ ನಿರ್ಮಾಣಕ್ಕೆ 1ಲಕ್ಷ ರೂ. ನೀಡಿದ್ದ 43 ಜನರ ಸದಸ್ಯತ್ವವನ್ನು ಅಖೀಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ  ಶಾಮನೂರು ಶಿವಶಂಕರಪ್ಪ ರದ್ದು ಗೊಳಿಸಿದ್ದರಿಂದ ಅನಿವಾರ್ಯವಾಗಿ ಶಿವಣ್ಣ ಬೆಲ್ಲದ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಯಿತು. 

ಕಳೆದ ಕೆಲವು ದಿನಗಳಿಂದ ಮಹಾಸಭೆಯ ಪದಾಧಿಕಾರಿಗಳು ಶಿವಣ್ಣ ಬೆಲ್ಲದ ಅವರಿಗೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಕೋರಿದ್ದರೂ ಪ್ರಯೋಜನ ವಾಗಿರಲಿಲ್ಲ, ಹೀಗಾಗಿ ಸರ್ವ ಸದಸ್ಯರು ಶಿವಣ್ಣ ಬೆಲ್ಲದ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೇ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವ ತೀರ್ಮಾನ ಕೈಗೊಂಡರು. 

ವೀರಶೈವ-ಲಿಂಗಾಯತ  ಭವನ ನಿರ್ಮಾಣ ಸಂದರ್ಭದಲ್ಲಿ ಲಕ್ಷ ರೂ.ಗಿಂತಲೂ ಹೆಚ್ಚಿಗೆ ಅನುದಾನ ನೀಡಿದ ಶಾಸಕ ಅರವಿಂದ ಬೆಲ್ಲದ ಸೇರಿದಂತೆ 12ಕ್ಕೂ ಹೆಚ್ಚು ಜನ ಬೆಲ್ಲದ ಕುಟುಂಬ ಸದಸ್ಯರ  ಸದಸ್ಯತ್ವ ಹಾಗೂ ಇತರ 31ಜನ ಸೇರಿ ಒಟ್ಟು 43 ಜನರಿಗೆ ಮಹಾಸಭೆ ಸದಸ್ಯತ್ವ ನೀಡಲು 2016ನೇ ಇಸ್ವಿ ಫೆಬ್ರುವರಿ ತಿಂಗಳಲ್ಲಿ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಆದೇಶ  ಹೊರಡಿಸಿದ ಕಾರಣದಿಂದ ಬೆಲ್ಲದ ಕುಟುಂಬಸ್ಥರು ಇದಕ್ಕೆ ಸದಸ್ಯರಾಗಿದ್ದರು. 

ಆದರೆ ಡಿಸೆಂಬರ್‌ನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಆದೇಶ ಹಿಂಪಡೆದ ಕಾರಣ ದಾನಿಗಳ ಸದಸ್ಯತ್ವ ರದ್ದಾಗಿತ್ತು. ಆದಾಗ್ಯೂ ಸಹ ಶಿವಣ್ಣ ಬೆಲ್ಲದ ಅವರು ಅಧ್ಯಕ್ಷರಾಗಿಯೇ ಮುಂದುವರಿದಿದ್ದರು. ಈ ಹಿಂದೆ ಭವನ ನಾಮಕರಣ ಕುರಿತು ನಡೆದ ಸಭೆಯಲ್ಲಿ ಸಹ ಅವರಿಗೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಸದಸ್ಯರು ಮನವಿ ಮಾಡಿದ್ದರು. 

Advertisement

ಆದರೆ ಅವರು ಅದಕ್ಕೆ ಬೆಲೆ ಕೊಡದ ಕಾರಣ ರವಿವಾರ ನಡೆದ ಸಭೆಯಲ್ಲಿ ಎಲ್ಲ ಸದಸ್ಯರ ಆಗ್ರಹದ ಮೇರೆಗೆ ಅವರನ್ನು ವಜಾಗೊಳಿಸಿ, ಉಪಾಧ್ಯಕ್ಷರಾಗಿದ್ದ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಅವರನ್ನು ಪ್ರಭಾರ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next