ಹೊಸದಿಲ್ಲಿ: ದಿಲ್ಲಿ ಎಂಸಿಡಿ ಚುನಾವಣೆ ಬಳಿಕ ಆಮ್ ಆದ್ಮಿ ಪಕ್ಷದಲ್ಲಿ ಎದ್ದಿರುವ ಭಿನ್ನಮತವು ಈಗ ಭ್ರಷ್ಟಾಚಾರದ ಆರೋಪದೊಂದಿಗೆ ಸ್ಫೋಟಗೊಂಡಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದ ಮೂಲಕವೇ ಅಧಿಕಾರಕ್ಕೆ ಬಂದ ಅರವಿಂದ ಕೇಜ್ರಿವಾಲ್ ವಿರುದ್ಧ ಅವರ ಪಕ್ಷದವರೇ ಆದ ಕಪಿಲ್ ಮಿಶ್ರಾ ಲಂಚದ ಆರೋಪ ಹೊರಿಸಿದ್ದಾರೆ. ಸಚಿವ ಸ್ಥಾನದಿಂದ ಮಿಶ್ರಾರನ್ನು ವಜಾ ಮಾಡಿದ ಬೆನ್ನಲ್ಲೇ ಅವರು ಈ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
2 ಕೋಟಿ ರೂ. ಲಂಚ: ರವಿವಾರ ಮಾತನಾಡಿದ ಕಪಿಲ್ ಮಿಶ್ರಾ ಅವರು ಕೇಜ್ರಿವಾಲ್ ವಿರುದ್ಧ 2 ಕೋಟಿ ರೂ. ಲಂಚದ ಆರೋಪ ಹೊರಿಸಿದ್ದಾರೆ.
‘ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಕೇಜ್ರಿವಾಲ್‌ಗೆ 2 ಕೋ. ರೂ. ನೀಡಿದ್ದನ್ನು ಕಣ್ಣಾರೆ ನೋಡಿದ್ದೇನೆ. ಈ ಬಗ್ಗೆ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದಾಗ, ಇವೆಲ್ಲ ರಾಜಕೀಯದಲ್ಲಿ ಸಾಮಾನ್ಯ. ಸ್ವಲ್ಪ ದಿನ ಬಿಟ್ಟು ಎಲ್ಲವನ್ನೂ ಹೇಳುತ್ತೇನೆ ಎಂದಿದ್ದರು. ಅನಂತರ ಜೈನ್ ಅವರೇ ನನ್ನೊಂದಿಗೆ, ನಾನು ಕೇಜ್ರಿವಾಲ್ ಸಂಬಂಧಿಕರೊಬ್ಬರ 50 ಕೋಟಿ ರೂ.ಗಳ ಭೂ ವ್ಯವಹಾರ ಇತ್ಯರ್ಥಪಡಿಸಿದ್ದೇನೆ ಎಂದಿದ್ದರು. ಅದರ ಬಗ್ಗೆ ಕೇಜ್ರಿವಾಲ್‌ರನ್ನು ಮತ್ತೆ ಪ್ರಶ್ನಿಸಿದಾಗ ಅವರು, ‘ಅದೆಲ್ಲ ಸುಳ್ಳು. ನನ್ನ ಮೇಲೆ ನಂಬಿಕೆಯಿಲ್ಲವೇ’ ಎಂದು ಪ್ರಶ್ನಿಸಿದ್ದರು ಎಂಬುದಾಗಿ ಮಿಶ್ರಾ ವಿವರಿಸಿದ್ದಾರೆ.
ಆರೋಪ ತಳ್ಳಿಹಾಕಿದ ಆಪ್: ಮಿಶ್ರಾ ಆರೋಪಗಳನ್ನು ತಳ್ಳಿಹಾಕಿರುವ ಡಿಸಿಎಂ ಮನೀಷ್ ಸಿಸೋಡಿಯಾ, ‘ಇದೊಂದು ಅಸಂಬದ್ಧ ಆರೋಪ. ಇದಕ್ಕೆ ಪ್ರತಿಕ್ರಿಯಿಸಬೇಕಾಗಿಲ್ಲ’ ಎಂದಿದ್ದಾರೆ. ಇನ್ನೊಂದೆಡೆ, ಇತ್ತೀಚೆಗಷ್ಟೇ ಭಿನ್ನಮತದ ಕಹಳೆ ಮೊಳಗಿಸಿದ್ದ ಕುಮಾರ್ ವಿಶ್ವಾಸ್ ಅವರೂ, ‘ನಾನು ಕೇಜ್ರಿವಾಲ್‌ರನ್ನು 12 ವರ್ಷಗಳಿಂದ ಬಲ್ಲೆ. ಅವರು ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪ ನನಗೆ ವೈಯಕ್ತಿಕವಾಗಿ ನೋವಾಗಿದೆ. ನಾನದನ್ನು ನಂಬುವುದಿಲ್ಲ’ ಎಂದಿದ್ದಾರೆ. ಲಂಚ ಆರೋಪದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದರೆ, ಪ್ರಕರಣ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಹೇಳಿದೆ. ಇದೇ ವೇಳೆ, ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಜ್ರಿವಾಲ್ ನಿವಾಸದೆದುರು ಪ್ರತಿಭಟನೆ ನಡೆಸಿದ್ದಾರೆ.
ಭ್ರಷ್ಟಾಚಾರ ಬಗ್ಗೆ ತಿಳಿಸಿದ್ದಕ್ಕೆ ವಜಾ: ಪಕ್ಷದೊಳಗಿನ ಭ್ರಷ್ಟಾಚಾರ ಕುರಿತು ಕೇಜ್ರಿವಾಲ್‌ರ ಗಮನಕ್ಕೆ ತಂದಿದ್ದರೂ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೆಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ನಾನು ಬೆದರಿಸಿದ ಹಿನ್ನೆಲೆಯಲ್ಲಿ ನನ್ನನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಯಿತು ಎಂದೂ ಮಿಶ್ರಾ ಹೇಳಿದ್ದಾರೆ. ಹಣಕಾಸು ಅವ್ಯವಹಾರ, ಕಪ್ಪುಹಣ, ಸಚಿವರೊಬ್ಬರ (ಜೈನ್) ಮಗಳ ನೇಮಕ, ಲಕ್ಸುರಿ ಬಸ್ ಯೋಜನೆ, ಸಿಎನ್‌ಜಿ ಫಿಟೆ°ಸ್ ಪರೀಕ್ಷೆ ಹಗರಣ… ಇವೆಲ್ಲವೂ ಕೇಜ್ರಿವಾಲ್‌ಗೆ ಗೊತ್ತಿದೆ. ಶೀಲಾ ದೀಕ್ಷಿತ್ ಸರಕಾರವಿದ್ದಾಗ ನಡೆದ ಟ್ಯಾಂಕರ್ ಹಗರಣದಲ್ಲಿ ಆಪ್‌ನ ಕೆಲವರು ಭಾಗಿಯಾಗಿದ್ದರು. ಅವರನ್ನು ರಕ್ಷಿಸುವ ಉದ್ದೇಶದಿಂದ ಕೇಜ್ರಿವಾಲ್ ಮೌನಕ್ಕೆ ಶರಣಾದರು ಎಂದೂ ಮಿಶ್ರಾ ಆರೋಪಿಸಿದ್ದಾರೆ.
ನೋವನ್ನು ಹೇಳಿಕೊಳ್ಳಲಾರೆ: ಪ್ರಕರಣ ಕುರಿತು ಮಾತಾಡಿರುವ ಅಣ್ಣಾ ಹಜಾರೆ, ಭ್ರಷ್ಟಾಚಾರ ವಿರೋಧಿ ಹೋರಾಟವೇ ಕೇಜ್ರಿವಾಲ್‌ರನ್ನು ಸಿಎಂ ಆಗುವಂತೆ ಮಾಡಿತು. ಈಗ ಅವರ ವಿರುದ್ಧ ಆರೋಪಗಳು ಕೇಳುವಾಗ ನನಗೆ ಎಷ್ಟು ನೋವಾಗುತ್ತಿದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಪ್, ಈ ವಿಚಾರದಲ್ಲಿ ನಾವು ಗೌರವಪೂರ್ವಕವಾಗಿ ಅಣ್ಣಾ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದಿದೆ.