ಚಿಕ್ಕನಾಯಕನಹಳ್ಳಿ: ಬೇಸಿಗೆ ಆರಂಭವಾಗಿದ್ದು, ಕಳೆದ 80 ದಿನಗಳಲ್ಲಿ ತಾಲೂಕಿನಲ್ಲಿ ಸುಮಾರು 121 ಬೆಂಕಿ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಸಮಯಕ್ಕೆ ಸರಿಯಾಗಿ ಆಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಜತೆಗೆ ಅಗ್ನಿ ಶ್ಯಾಮಕ ದಳ ಹಿಂದಿಗಿಂತಲೂ ಹೆಚ್ಚು ಸದೃಢವಾಗಿದ್ದು, ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಿದೆ.
ಕಳೆದ ವರ್ಷ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ತೋಟ, ಹೊಲ, ಕಾಡು ಪ್ರದೇಶ ಗಳಲ್ಲಿ ಹುಲ್ಲು, ಗಿಡಗಂಟೆಗಳು ಹಾಗೂ ಬೇಲಿಗಳು ಹೆಚ್ಚಾಗಿ ಬೆಳೆದ್ದು, ಬಿಸಿಲಿಗೆ ಒಣಗಿವೆ. ಸ್ವಲ್ಪ ಬೆಂಕಿ ತಾಕಿ ದರೂ ಸುಟ್ಟು ಭಸ್ಮವಾಗುತ್ತವೆ. ತೋಟ, ಹೊಲಗಳಿಗೆ ಬೆಂಕಿ ಬಿದ್ದಿರುವ ದೂರು ಹೆಚ್ಚಾಗಿ ಬರುತ್ತಿದೆ. ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ 15 ರಿಂದ 20 ಪ್ರಕರಣಗಳು ಇದುವರೆಗೆ ದಾಖಲಾಗಿದೆ ಎಂದು ತಿಳಿದು ಬಂದಿದೆ.
ವಿದ್ಯುತ್ ತಂತಿಗಳಿಂದ ಅವಘಡ: ವಿದ್ಯುತ್ ತಂತಿ ಶಾರ್ಟ್‌ಗಳಿಂದ ಹೆಚ್ಚಾಗಿ ಬೆಂಕಿ ಅವ ಘಡಗಳು ನಡೆಯುತ್ತಿದೆ. ಟೀಸಿಗಳ ಒವರ್ ಲೋಡ್, ತಂತಿಗಳ ಸ್ಪರ್ಷ ದಿಂದ ಒಣಗಿದ ಹುಲ್ಲಿನ ಮೇಲೆ ಬೆಂಕಿ ಕಿಡಿ ಬಿದ್ದು, ಬೆಂಕಿ ಪಸರಿಸುತ್ತಿದೆ. ವಿದ್ಯುತ್ ಇಲಾಖ ಮುಂಜಾಗ್ರತೆ ಕ್ರಮ ಅನುಸರಿಸಬೇಕಾಗಿದೆ ಎಂದು ಜನರು ಆಗ್ರಹಿಸಿದ್ದಾರೆ.
ಸಾರ್ವಜನಿಕರಿಗೆ ಕಿವಿಮಾತು: ರೈತರು ತಮ್ಮ ತೋಟಗಳಲ್ಲಿ ಒಣಗಿರುವ ಹುಲ್ಲು, ಹೆಚ್ಚಾಗಿ ಬೆಳೆದಿರುವ ಬೇಲಿ ಸಂಪೂರ್ಣವಾಗಿ ಕಿತ್ತು ಹಾಕಬೇಕು. ಟೀಸಿ, ವಿದ್ಯುತ್ ತಂತಿಗಳ ಕೆಳ ಭಾಗದಲ್ಲಿ ತೆಂಗಿನ ಗರಿ, ಹುಲ್ಲು ಇರದಂತೆ ನೋಡಿಕೊಳ್ಳಬೇಕು. ಅನಾವಶಕ ವಾಗಿ ತೋಟಗಳಲ್ಲಿ ಬೆಂಕಿ ಹಚ್ಚಬಾರದು. ಬೀಡಿ ಸಿಗರೇಟ್ ಸೇದಿದಾಗ ಸಂಪೂರ್ಣ ಆರಿಸ ಬೇಕು ಎಂಬ ಸಲಹೆಗಳನ್ನು ಆಗ್ನಿ ಶಾಮಕ ದಳದ ಅಧಿಕಾರಿಗಳು ನೀಡಿದ್ದಾರೆ.
ಸದೃಢವಾಗಿದೆ ದಳ: ಆಗ್ನಿಶಾಮಕ ದಳದಲ್ಲಿ ಬೆಂಕಿ ನಂದಿಸಲು 2 ವಾಹನ, 12 ಸಿಬ್ಬಂದಿ ಹಾಗೂ ಹೆಚ್ಚುವರಿ 7 ಜನ ಹೋಮ್‌ಗಾರ್ಡ್ಸ್‌ಸಿಬ್ಬಂದಿ ಇದ್ದಾರೆ. ದಿನದ 24 ಗಂಟೆ ಸೇವೆ ಸಲ್ಲಿಸಲು ಆಗ್ನಿಶಾಮಕ ದಳ ಸಿದ್ಧವಿದೆ. ಕರೆ ಬಂದ ಕ್ಷಣದಿಂದಲೇ ಬೆಂಕಿ ಅವಘಡ ಸ್ಥಳಕ್ಕೆ ಹೋಗಿ ಬಹುತೇಕ ಕಡೆ ಆಪಾರ ನಷ್ಟ ತಡೆದಿದ್ದಾರೆ. ಪ್ರತಿ ತಿಂಗಳು ಶಾಲೆ ಮಕ್ಕಳು, ಜಾತ್ರೆ, ಜನಸಾಂದ್ರತೆ ಪ್ರದೇಶದಲ್ಲಿ ಆಗ್ನಿ ಆವಘಡ ಬಗ್ಗೆ ಮಾಹಿತಿ ಹಾಗೂ ಅಣಕು ಪ್ರದರ್ಶನ ನೀಡಿ, ಜಾಗೃತಿ ಮೂಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೋಟಗಳಲ್ಲಿ ಒಣ ಹುಲ್ಲು, ಬೇಲಿ ಇರದಂತೆ ನೋಡಿಕೊಳ್ಳಿ. ದ್ವೇಷಕ್ಕೆ ಬೆಂಕಿ ಹಚ್ಚಬೇಡಿ.ದಿನದ 24 ಗಂಟೆ ಅಗ್ನಿಶಾಮಕ ವಾಹನ ಸೇವೆಗೆ ಸಿದ್ಧವಿದೆ.
–ಜ್ಞಾನಮೂರ್ತಿ, ಆಗ್ನಿಶಾಮಕ ಠಾಣಾಧಿಕಾರಿ
-ಚೇತನ್