Advertisement

ಮಂದಾರದಲ್ಲಿ ತ್ಯಾಜ್ಯ ರಾಶಿಗೆ ಬೆಂಕಿ; ವಿಷಪೂರಿತ ಹೊಗೆ

11:51 PM May 29, 2020 | Sriram |

ಮಂಗಳೂರು: ನಗರದ ಮಂದಾರಕ್ಕೆ ಕಳೆದ ವರ್ಷ ಮಳೆಗಾಲದಲ್ಲಿ ಜರಿದು ಬಂದ ಪಚ್ಚನಾಡಿಯ ತ್ಯಾಜ್ಯ ರಾಶಿಗೆ ಶುಕ್ರವಾರ ಮತ್ತೆ ಬೆಂಕಿ ಬಿದ್ದಿದ್ದು, ಪರಿಸರದಲ್ಲಿ ವಿಷಪೂರಿತ ಹೊಗೆ ವ್ಯಾಪಿಸಿತ್ತು.

Advertisement

ಸಂಜೆ ವೇಳೆಗೆ ಬೆಂಕಿ ಬಿದ್ದಿದ್ದು, ವಿಷಯ ತಿಳಿದು ಪಾಲಿಕೆ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ, ಗಾಳಿಯ ವೇಗಕ್ಕೆ ಬೆಂಕಿಯು ವ್ಯಾಪಿಸಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ತ್ಯಾಜ್ಯಕ್ಕೆ ಬಿದ್ದ ಬೆಂಕಿ ನಂದಿಸಲು ಹಿಟಾಚಿ ಮೂಲಕ ಮಣ್ಣು ತಂದು ಸುರಿಯಲಾಗುತ್ತಿದೆ. ಆದರೆ ಗಾಳಿಯಲ್ಲಿ ಸೇರುತ್ತಿರುವ ವಿಷಪೂರಿತ ಹೊಗೆ ಸಮೀಪದ ಮೂರು-ನಾಲ್ಕು ವಾರ್ಡ್‌ ಗಳ ಜನರ ಆತಂಕ ಹೆಚ್ಚಿಸಿದೆ. ಮಂದಾರ ಪ್ರದೇಶದ ಕೆಲವು ಮನೆಯ ಜನರು ಅಲ್ಲಿಂದ ತೆರವಾಗಿದ್ದರೂ, 2-3 ಮನೆಯವರೂ ಅಲ್ಲೇ ವಾಸವಾಗಿದ್ದಾರೆ. ಹೀಗಾಗಿ ವಿಷಪೂರಿತ ಹೊಗೆ ಅವರ ಆತಂಕ ಹೆಚ್ಚಿಸಿದೆ.

ಮಳೆಗೆ ಮತ್ತೆ ಆತಂಕ
ಕೆಲವೇ ದಿನಗಳಲ್ಲಿ ಮಳೆ ಶುರುವಾಗುವ ಹಿನ್ನೆಲೆಯಲ್ಲಿ ಮಳೆ ನೀರಿಗೆ ಇನ್ನೇನು ಸಮಸ್ಯೆ ಆಗಲಿವೆಯೋ ಎಂಬ ಆತಂಕವೂ ಎದುರಾಗಿದೆ. ಕಳೆದ ವರ್ಷ ಮಳೆಗೆ ಪಚ್ಚನಾಡಿಯ ತ್ಯಾಜ್ಯರಾಶಿ ಜರಿದು ಮಂದಾರದ 2 ಕಿ.ಮೀ ವ್ಯಾಪ್ತಿಯಲ್ಲಿ ಹರಡಿತ್ತು. ಸಾವಿರಾರು ತೆಂಗು, ಕಂಗು ಇದರಡಿಯಲ್ಲಿ ಸಿಲುಕಿಕೊಂಡಿತ್ತು. ಜರಿದು ಬಂದ ತ್ಯಾಜ್ಯರಾಶಿಯು ಈ ಬಾರಿಯ ಮಳೆಗೆ ಇನ್ನಷ್ಟು ಅಪಾಯ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next