ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ದಿಢೀರ್ ಎದುರಾಗುವ ದಟ್ಟ ಹೊಗೆ, ಮೂಗಿಗೆ ಬಡಿಯುವ ಕಮಟು ವಾಸನೆ, ಉಸಿರುಗಟ್ಟಿದ ಭಾವನೆ, ಕ್ಷಣಾರ್ಧದಲ್ಲಿ ಶುರುವಾಗುವ ಕಣ್ಣುರಿ… ರಾಜಧಾನಿ ಕೇಂದ್ರ ಭಾಗದ ಸೇರಿದಂತೆ ನಗರದ ಎಲ್ಲ ಕಡೆಗಳಲ್ಲಿ ಒಣ ತ್ಯಾಜ್ಯ ಹಾಗೂ ಎಲೆಗಳಿಗೆ ಬೆಂಕಿ ಹಾಕುತ್ತಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ನಗರದ ಪ್ರಮುಖ ರಸ್ತೆಗಳನ್ನು ಸ್ವತ್ಛಗೊಳಿಸುತ್ತಿರುವ ಪೌರಕಾರ್ಮಿಕರು ಸಂಗ್ರಹವಾದ ಒಣ ತ್ಯಾಜ್ಯ ಹಾಗೂ ಎಲೆ ರಾಶಿಗೆ ಬೆಂಕಿ ಹಾಕುತ್ತಿದ್ದಾರೆ. ಇದರೊಂದಿಗೆ ಕೆಲ ಬಡಾವಣೆಗಳಲ್ಲಿ ಸಾರ್ವಜನಿಕರು ಚಳಿ ಹಾಗೂ ಸೊಳ್ಳೆ ಕಾಟದಿಂದ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದಾಗಿ ದಟ್ಟ ಹೊಗೆ ಕಾಣಿಸಿಕೊಂಡು ಸಮಸ್ಯೆ ಸೃಷ್ಟಿಯಾಗುತ್ತಿದ್ದು, ದಟ್ಟ ಹೊಗೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ನಗರದಲ್ಲಿ ಚಳಿಯಿಂದ ತಪ್ಪಿಸಿಕೊಳ್ಳಲು ನಿರಾಶ್ರಿತರು ಹಾಗೂ ಬೀದಿ ಬದಿ ವ್ಯಾಪಾರಿಗಳೂ ತ್ಯಾಜ್ಯ ಬೆಂಕಿ ಹಚ್ಚುತ್ತಿರುವುದು ಕಂಡುಬಂದಿದೆ. ಆದರೆ, ಪಾಲಿಕೆಯ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಟೀಕೆಗೆ ಕಾರಣವಾಗಿದೆ.
ಎಲೆ ವಿಲೇವಾರಿಗಿಲ್ಲ ಗಮನ: ರಸ್ತೆ ಬದಿಯಲ್ಲಿರುವ ಮರಗಳಿಂದ ಉದುರುತ್ತಿರುವ ಎಲೆಗಳನ್ನು ಸಮರ್ಪಕ ವಿಲೇವಾರಿಗೆ ಪಾಲಿಕೆ ಸಿಬ್ಬಂದಿ ಮುಂದಾಗುತ್ತಿಲ್ಲ. ಪರಿಣಾಮ ಒಣ ಎಲೆಗಳ ಮೇಲೆ ವಾಹನಗಳು ಸಂಚರಿಸಿ ಎಲೆಗಳು ಧೂಳಾಗಿ ಪರಿವರ್ತನೆಯಾಗಿ ನಗರದಲ್ಲಿನ ಮಾಲಿನ್ಯ ಪ್ರಮಾಣ ಹೆಚ್ಚಿಸುತ್ತಿದೆ.
ಸಮಸ್ಯೆ ಪರಿಹರಿಸಲು ನಿರಾಸಕ್ತಿ: ಜ್ಞಾನಭಾರತಿ ವಾರ್ಡ್‌ನ ಅನ್ನಪೂರ್ಣೇಶ್ವರಿ ನಗರದ ಶ್ರೀಗಂಧ ಕಾವಲ್ ರಸ್ತೆಯಲ್ಲಿ ನಿತ್ಯ ಕಸಕ್ಕೆ ಬೆಂಕಿ ಹಾಕಲಾಗುತ್ತಿದೆ. ದಟ್ಟ ಹೊಗೆ ಮನೆಗಳಿಗೆ ಬರುತ್ತಿರುವುದರಿಂದ ಸಮೀಪದ ಬಡಾವಣೆಗಳ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಪಾಲಿಕೆ ಸದಸ್ಯರಿಗೆ ಫೋಟೋ ಸಮೇತವಾಗಿ ದೂರು ನೀಡಿ ಸಮಸ್ಯೆ ಪರಿಹರಿಸುವಂತೆ ತಿಳಿಸಿದರೂ, ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
ಸಾರ್ವಜನಿಕರು ಅಥವಾ ಪೌರಕಾರ್ಮಿಕರು ತ್ಯಾಜ್ಯಕ್ಕೆ ಬೆಂಕಿ ಹಾಕುವುದು ಕಂಡುಬಂದರೆ, ನಿವಾಸಿಗಳು ಅಧಿಕಾರಿಗಳ ಗಮನಕ್ಕೆ ತಂದರೆ ಕ್ರಮಕೈಗೊಳ್ಳಲಾಗುವುದು. ನಗರದ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸುವಂತೆ, ತ್ಯಾಜ್ಯಕ್ಕೆ ಬೆಂಕಿ ಹಾಕುವವರಿಗೂ ದುಬಾರಿ ದಂಡ ವಿಧಿಸಲಾಗುವುದು.
-ರಂದೀಪ್, ವಿಶೇಷ ಆಯುಕ್ತರು