ಬೆಂಗಳೂರು: ಬಿಬಿಎಂಪಿಯ ಒಣತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 40 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಯಂತ್ರೋಪಕರಣಗಳು ಬೆಂಕಿಗಾಹುತಿಯಾದ ಘಟನೆ ಯಲಹಂಕ ವಲಯದ ಅಟ್ಟೂರು ವಾರ್ಡ್‌ನಲ್ಲಿ ನಡೆದಿದೆ.
ಅಟ್ಟೂರಿನ ತಿರುಮಲ ಡಾಬಾ ಕ್ರಾಸ್ ಬಳಿಯಿರುವ ಪಾಲಿಕೆಯ ಒಣತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭಾನುವಾರ ರಾತ್ರಿ 2 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಘಟಕದಲ್ಲಿನ ಒಣತ್ಯಾಜ್ಯ ಹಾಗೂ ಲಕ್ಷಾಂತರ ಮೌಲ್ಯದ ಯಂತ್ರೋಪಕರಣಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ. ಘಟಕದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಂತ್ರೋಪಕರಣಗಳು ವಿಮೆಗೆ ಒಳಪಟ್ಟಿದ್ದು, ಅಧಿಕಾರಿಗಳು ಮತ್ತು ವಿಮೆ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಿ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾಹಿತಿ ನೀಡಿದರು.
ಬೆಂಕಿಗೆ ಆಹುತಿಯಾಗಿರುವ ಒಣತ್ಯಾಜ್ಯ ವಿಲೇವಾರಿ ಘಟಕವನ್ನು ಸ್ವತ್ಛ ಇಕೋ ಸೆಲ್ಯೂಷನ್ ಸ್ವಯಂ ಸೇವಾಸಂಸ್ಥೆ ನಿರ್ವಹಿಸುತ್ತಿದ್ದು, ವಿದ್ಯುತ್ ಅವಘಡದಿಂದ ಬೆಂಕಿ ಬಿದ್ದಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಘಟಕಕ್ಕೆ 60 ಲಕ್ಷ ರೂ. ವಿಮೆ ಮಾಡಿಸಿದ್ದು, ವಿಮಾ ಸಂಸ್ಥೆ ಪ್ರತಿನಿಧಿಗಳು ನಷ್ಟ ಅಂದಾಜು ಮಾಡಲಿದ್ದಾರೆ. ಒಂದು ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಎರಡು ದಿನದಲ್ಲಿ ಆಯುಕ್ತರಿಗೆ ವರದಿ ನೀಡಲಾಗುವುದು ಎಂದು ಘನತ್ಯಾಜ್ಯ ವಿಭಾಗದ ಅಧೀಕ್ಷಕ ಎಂಜಿನಿಯರ್ ಬಸವರಾಜ್ ಕಬಾಡೆ ಮಾಹಿತಿ ನೀಡಿದ್ದಾರೆ.