– ಬೆಂಗಳೂರಿನ ಅರಿಶಿನಕುಂಟೆ ಟೋಲ್ ಸಮೀಪ ನಡೆದ ದುರ್ಘಟನೆ
– ಮೃತ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ರಾಷ್ಟ್ರೀಯ ಹೆದ್ದಾರಿ ನಾಲ್ಕರ ಅರಿಶಿನಕುಂಟೆ ಟೋಲ್ ಬಳಿ ಸೋಮವಾರ ತಡ ರಾತ್ರಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ ಬಿದ್ದಿದ್ದು, ಮಹಿಳೆಯೊಬ್ಬಳು ಸಜೀವ ದಹನವಾಗಿದ್ದಾರೆ. ಬೆಂಗಳೂರಿನ ಪೀಣ್ಯದ 8ನೇ ಮೈಲಿ ನಿವಾಸಿ ಭಾಗ್ಯ (55) ಮೃತ ದುರ್ದೈವಿ. ಇದೇ ವೇಳೆ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಹಿಳೆಯ ಕುಟುಂಬಕ್ಕೆ ಕೆಎಸ್‌ಆರ್‌ಟಿಸಿ ವತಿಯಿಂದ ಮೂರು ಲಕ್ಷ ರೂ.ಪರಿಹಾರ ಘೋಷಿಸಲಾಗಿದೆ.
Advertisement
ಪ್ರಯಾಣಿಕರು ಕೂಗಿದರೂ ಬಸ್ ನಿಲ್ಲಿಸದ ಚಾಲಕ: ಕೆಎಸ್‌ಆರ್‌ಟಿಸಿ ಬಸ್ ಶೃಂಗೇರಿಯಿಂದ ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿತ್ತು. ಸೋಮವಾರ ರಾತ್ರಿ ಸುಮಾರು 12.20 ವೇಳೆಗೆ ನೆಲಮಂಗಲದ ಅರಿಶಿನಕುಂಟೆ ಗ್ರಾಮದ ಬಳಿ ಸಮೀಪಿಸುತ್ತಿದಂತೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ಕಾಣಿಸುತ್ತಿದ್ದಂತೆ ಗಾಬರಿಗೊಂಡ ಪ್ರಯಾಣಿಕರು ಬಸ್ ಚಾಲಕ ದಿನೇಶ್‌ಗೆ ಬಸ್ ನಿಲ್ಲಿಸುವಂತೆ ಮನವಿ ಮಾಡಿದರು. ಆದರೆ, ಚಾಲಕ ಬಸ್ ನಿಲ್ಲಿಸದೆ ಸುಮಾರು 500 ಮೀಟರ್ ದೂರ ಚಾಲನೆ ಮಾಡಿದ್ದಾನೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
Related Articles
ಬೆಳಗ್ಗೆ ಸ್ಥಳಕ್ಕಾಗಮಿಸಿದ ಮುಖ್ಯ ತಾಂತ್ರಿಕ ಅಧಿಕಾರಿ ಗಂಗಣ್ಣ ಗೌಡ ನೇತೃತ್ವದ ಅಧಿಕಾರಿಗಳ ತಂಡ, ಸ್ಥಳದ ಪರಿಶೀಲನೆ ನಡೆಸಿದರು. ಅಗ್ನಿ ದುರಂತಕ್ಕೆ ಯಾವುದೇ ತಾಂತ್ರಿಕ ದೋಷ ಕಾರಣವಲ್ಲ. ಬ್ಯಾಟರಿ ಸ್ಪಾರ್ಕ್, ಡೀಸೆಲ್ ಸೋರಿಕೆಯಿಂದ ಅವಘಡ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಮೃತ ಕುಟುಂಬಕ್ಕೆ ಪರಿಹಾರ:ಈ ವೇಳೆ ಮಾತನಾಡಿದ ಕೆಎಸ್‌ಆರ್‌ಟಿಸಿ ಸಂಸ್ಥೆಯ ಮುಖ್ಯಸ್ಥ ರಾಜೇಂದ್ರ ಕಟರಿಯಾ, ಮೃತರ ಕುಟುಂಬಕ್ಕೆ ಕೆಎಸ್‌ಆರ್‌ಟಿಸಿ ವತಿಯಿಂದ ಮೂರು ಲಕ್ಷ ರೂ.ಪರಿಹಾರ ನೀಡಲಾಗುವುದು. ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸಲಾಗುವುದು ಎಂದು ತಿಳಿಸಿದ್ದಾರೆ. ಅಗ್ನಿ ಆಕಸ್ಮಿಕದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ. ಪ್ರಕರಣಕ್ಕೆ ತಾಂತ್ರಿಕ ದೋಷ ಕಾರಣವಲ್ಲ ಎಂದು ತಿಳಿದು ಬಂದಿದೆ. ಒಂದು ವೇಳೆ ಬಸ್ ಎಂಜಿನ್‌ನಲ್ಲಿ ದೋಷ ಉಂಟಾಗಿ, ಶಾರ್ಟ್‌ಸರ್ಕ್ನೂಟ್, ಟಯರ್ ಸಿಡಿದಾಗ ಮಾತ್ರ ಬಸ್‌ಗೆ ಬೆಂಕಿ ಹತ್ತಿಕೊಳ್ಳುತ್ತದೆ. ಈ ಸಂಬಂಧ ಪೂರ್ಣ ವರದಿ ಬಂದ ಬಳಿಕ ನಿಖರ ಕಾರಣ ಗೊತ್ತಾಗಲಿದೆ.
– ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ.